ಬೆಂಗಳೂರು: ನಿಕಟಪೂರ್ವ ಮುಖ್ಯಮಂತ್ರಿ, ನಮ್ಮೆಲ್ಲರ ಹಿರಿಯರಾದ ಬಸವರಾಜ ಬೊಮ್ಮಾಯಿ ಅವರನ್ನು ದೀಪಾವಳಿ ಶುಭ ಸಂದರ್ಭದಲ್ಲಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದೇನೆ; ಅಲ್ಲದೆ ಮಾರ್ಗದರ್ಶನವನ್ನು ಕೋರಿದ್ದೇನೆ. ಅವರು ಬಹಳ ಸಂತೋಷ ಪಟ್ಟಿದ್ದಾರೆ. ರಾಜ್ಯಾಧ್ಯಕ್ಷರಾಗಿ ನಿನ್ನ ನೇಮಕ ಮಾಡುವ ಮೂಲಕ ರಾಷ್ಟ್ರೀಯ ನಾಯಕರು ಅತ್ಯುತ್ತಮ ನಿರ್ಣಯ ಮಾಡಿದ್ದಾಗಿ ಬೊಮ್ಮಾಯಿಯವರು ಹೇಳಿದ್ದಾಗಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಇಂದು ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ನೇಮಕದಿಂದ ರಾಜ್ಯಕ್ಕೆ, ರಾಜ್ಯ ಬಿಜೆಪಿಗೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದು ತಿಳಿಸಿದ್ದಾಗಿ ವಿವರಿಸಿದರು. ನಾನಷ್ಟೇ ಅಲ್ಲ; ಹಿರಿಯರೆಲ್ಲರೂ ನಿನ್ನ ಜೊತೆ ಇರಲಿದ್ದೇವೆ; ಸಹಕಾರ ನೀಡುವ ಮತ್ತು ಮಾರ್ಗದರ್ಶನ ನೀಡುವ ಮಾತನಾಡಿದ್ದಾರೆ ಎಂದರು.
ದೇಶದ ಭವಿಷ್ಯ ರೂಪಿಸುವ ಮುಂಬರುವ ಲೋಕಸಭಾ ಚುನಾವಣೆಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ನಿನ್ನ ನೇತೃತ್ವದಲ್ಲಿ ಮಾಡೋಣ ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ಇದೇ 15ರಂದು ಬುಧವಾರ ಜವಾಬ್ದಾರಿ ಸ್ವೀಕರಿಸುವ ಸಂದರ್ಭದಲ್ಲಿ ತಾವು ಬಂದು ಆಶೀರ್ವಾದÀ ಮಾಡಬೇಕೆಂದು ಕೋರಿದ್ದೇನೆ. ಬರಲೆತ್ನಿಸುವುದಾಗಿ ತಿಳಿಸಿದ್ದಾರೆ ಎಂದು ನುಡಿದರು. ಬಿ.ವೈ.ವಿಜಯೇಂದ್ರ ಅವರನ್ನು ಬಸವರಾಜ ಬೊಮ್ಮಾಯಿ ಅವರು ಅಭಿನಂದಿಸಿ ಶುಭ ಹಾರೈಸಿದರು. ಶಾಸಕ ಕೃಷ್ಣಪ್ಪ, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಈ ಸಂದರ್ಭದಲ್ಲಿ ಇದ್ದರು.