ಕನ್ನಡ ಚಿತ್ರರಂಗದ ಹಿರಿಯ ನಟ,ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ದ್ವಾರಕೀಶ್ (ಬಂಗ್ಲೆ ಶಾಮಾರಾವ್ ದ್ವಾರಕಾನಾಥ), ಒಬ್ಬ ಕನ್ನಡದ ನಟ, ನಿರ್ದೇಶಕ ಮತ್ತು ನಿರ್ಮಾಪಕ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಆಗಿದ್ದರು.
ದ್ವಾರಕೀಶ್ ಅವರು ನಟನಾಗಿ ೧೯೬೩ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ನಿರ್ಮಾಪಕನಾಗಿ, ನಿರ್ದೇಶಕನಾಗಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ‘ಮಮತೆಯ ಬಂಧನ’ ಅವರ ನಿರ್ಮಾಣದ ಮೊದಲ ಸಿನಿಮಾ. ‘ವೀರ ಸಂಕಲ್ಪ’ ಅವರ ನಟನೆಯ ಮೊದಲ ಸಿನಿಮಾ.
ದ್ವಾರಕೀಶ್ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಅವರು ಮೃತಪಟ್ಟ ಬಗ್ಗೆ ಈ ಮೊದಲು ಹಲವು ಬಾರಿ ವದಂತಿ ಹಬ್ಬಿತ್ತು. ಈ ಬಾರಿಯೂ ಸಾವಿನ ಸುದ್ದಿ ಫೇಕ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಈಗ ಅವರ ಕುಟುಂಬದ ಕಡೆಯಿಂದಲೇ ಇದಕ್ಕೆ ಸ್ಪಷ್ಟನೆ ನೀಡಲಾಗಿದೆ.
‘ರಾತ್ರಿ ಲೂಸ್ ಮೋಷನ್ ಆಯ್ತು. ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ರಿಸಿದ್ದರು. ಮಲಗಿದವರು ಎದ್ದೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ’ ಎಂದು ದ್ವಾರಕೀಶ್ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.