ನಿಯಮಬಾಹಿರವಾಗಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನ ಸೌಲಭ್ಯ

ದಾವಣಗೆರೆ,ಜ,8 : ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ನಿಯಮಬಾಹಿರವಾಗಿ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ 10 ಲಕ್ಷ ಹಣ ಪಾಲಿಕೆಗೆ ದುಂದುವೆಚ್ಚವಾಗಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದಾರೆ. ಈ ಬಗ್ಗೆ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2017ರಲ್ಲಿ ರಾಜ್ಯ ಸರ್ಕಾರವು ಮೇಯರ್‌ ಹಾಗೂ ಉಪಮೇಯರ್‌ ಹೊರತುಪಡಿಸಿ ಮತ್ತೆ ಯಾವುದೇ ಚುನಾಯಿತ ಜನಪ್ರತಿನಿಧಿಗಳಿಗೆ ವಾಹನ ಸೌಲಭ್ಯ ಕಲ್ಪಿಸಬಾರದು ಎಂದು ಆದೇಶ ಹೊರಡಿಸಿದೆ. ಹೀಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನ ಸೌಲಭ್ಯ ಕಲ್ಪಿಸುವುದಕ್ಕೆ ನಾವು ಸಾಮಾನ್ಯ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದೇವು.

ಇದರ ಹೊರತಾಗಿಯೂ ಪಾಲಿಕೆ ಆಯುಕ್ತರು ಪ್ರತಿ ತಿಂಗಳು ಒಂದು ಕಾರಿಗೆ 30 ಸಾವಿರದಂತೆ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರಿಗೆ ವಾಹನ ಸೌಲಭ್ಯ ಕಲ್ಪಿಸಿದ್ದಾರೆ. ಇದರಿಂದ ತಿಂಗಳಿಗೆ 1.20 ಲಕ್ಷ ವೆಚ್ಚ ಮಾಡಲಾಗಿದೆ. ಇದೇ ರೀತಿ ಎಂಟು ತಿಂಗಳಿಂದ ದುಂದು ವೆಚ್ಚವಾಗಿದೆ. ಈ ಬಗ್ಗೆ ಪೌರಾಡಳಿತ ನಿರ್ದೇಶನಾಲಯವು ಪಾಲಿಕೆ ಆಯುಕ್ತರಿಗೆ ಪತ್ರವನ್ನು ಬರೆದು ಕೂಡಲೇ ವಾಹನ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಸೂಚಿದದ್ದರೂ, ಆಯುಕ್ತರು ವಾಹನ ಸೌಲಭ್ಯ ಹಿಂದಕ್ಕೆ ಪಡೆದಿಲ್ಲ. ಹೀಗಾಗಿ ದುಂದು ವೆಚ್ಚವನ್ನು ಪಾಲಿಕೆ ಆಯುಕ್ತರಿಂದಲೇ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು. ಇನ್ನು ವಾಣಿಜ್ಯ ಮಳಿಗೆ ಕಸ ಸಂಗ್ರಹಿಸಲು ಏಜೆನ್ಸಿಗಳಿಗೆ ಗುತ್ತಿಗೆ ನೀಡಲಾಗಿದೆ. ಈ ಏಜೆನ್ಸಿಗಳು 50 ಸಾವಿರ ಠೇವಣಿ ಹಣ ಕಟ್ಟಿಲ್ಲ. ಕಸ ಸಂಗ್ರಹಿಸುವುದರಿಂದ ಬಂದ ಶುಲ್ಕದ ಶೇ.30ರಷ್ಟನ್ನು ಪಾಲಿಕೆ ನೀಡಬೇಕು. ಅದನ್ನು ನೀಡಿಲ್ಲ.ಏಜೆನ್ಸಿಯವರು ವಾಣಿಜ್ಯ ಮಳಿಗೆ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಗಡಿಗುಡಾಳ್‌ ಮಂಜುನಾಥ್‌, ಕೆ.ಚಮನ್‌ ಸಾಬ್‌, ಅಬ್ದುಲ್‌ ಲತೀಫ್‌ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top