ವರನಟ ರಾಜ್ 94ನೇ ಹುಟ್ಟುಹಬ್ಬ; ಕೇಕ್ ಕತ್ತರಿಸಿದ ಸಚಿವರು

ಬೆಂಗಳೂರು: ಕನ್ನಡದ ವರನಟ ದಿ. ರಾಜಕುಮಾರ್ ಅವರ 94ನೇ ಹುಟ್ಟುಹಬ್ಬದ ಪ್ರಯುಕ್ತ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೋಕಾಕ್ ಚಳವಳಿ ವೃತ್ತ (18ನೇ ಕ್ರಾಸ್) ಮತ್ತು ಸುಬ್ರಹ್ಮಣ್ಯ ನಗರದ ಸಂಗೊಳ್ಳಿ ರಾಯಣ್ಣ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪಾಲ್ಗೊಂಡಿದ್ದರು. ಎರಡೂ ಕಡೆಗಳಲ್ಲಿ ರಾಜಕುಮಾರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕೇಕ್ ಕತ್ತರಿಸಿದ ಸಚಿವರು, ನೆರೆದಿದ್ದ ಅಭಿಮಾನಿಗಳಿಗೆ ಸಿಹಿ ಮತ್ತು ಉಪಾಹಾರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, `ರಾಜಕುಮಾರ್ ಅವರು ತಮ್ಮ ರಂಗಭೂಮಿಯ ಹಿನ್ನೆಲೆಯಿಂದ ರೂಢಿಸಿಕೊಂಡ ಸ್ಪಷ್ಟ ಕನ್ನಡ ಉಚ್ಚಾರಣೆ ಮತ್ತು ಭಾಷಾಪ್ರೇಮಗಳಿಂದ ಕನ್ನಡಿಗರ ಪಾಲಿನ ಆದರ್ಶಪುರುಷನಾಗುವ ಮಟ್ಟಕ್ಕೆ ಬೆಳೆದರು. ಅವರು ನಾಡಿನ ಜನಸಮೂಹದಲ್ಲಿ ಅಜರಾಮರರಾಗಿ ಉಳಿದುಕೊಂಡಿದ್ದಾರೆ’ ಎಂದರು. ಕನ್ನಡ ಭಾಷೆಯ ಉಳಿವಿಗಾಗಿ ಗೋಕಾಕ್ ಚಳವಳಿ ನಡೆಯುತ್ತಿದ್ದಾಗ, ರಾಜಕುಮಾರ್ ಅವರ ಪ್ರವೇಶದ ನಂತರ ವಿದ್ಯುತ್ ಸಂಚಾರವಾದಂತಾಯಿತು. ಅವರ ಒಂದು ಕರೆಗೆ ಓಗೊಟ್ಟ ನಾಡಿನ ಜನರು, ಅಂದಿನ ಸರಕಾರವೇ ತಲೆಬಾಗುವಂತೆ ಮಾಡಿದರು. ಆದರೆ, ರಾಜಕುಮಾರ್ ಅವರು ಈ ಯಶಸ್ಸನ್ನು ತಮ್ಮದನ್ನಾಗಿ ಮಾಡಿಕೊಳ್ಳದೆ ನಾಡಿನ ಜನತೆಗೆ ಸಮರ್ಪಿಸಿ, ಮೇಲ್ಪಂಕ್ತಿಯನ್ನು ಹಾಕಿಕೊಟ್ಟರು ಎಂದು ಅವರು ನೆನಪಿಸಿಕೊಂಡರು.

ಅಂತಹ ಮೇರುನಟನ ಸ್ಮರಣೆಗೆಂದೇ ಕೆಲವರ್ಷಗಳ ಹಿಂದೆ ಮಲ್ಲೇಶ್ವರಂ 18ನೇ ಅಡ್ಡರಸ್ತೆಯ ಉದ್ಯಾನಕ್ಕೆ `ಗೋಕಾಕ್ ಚಳವಳಿ ವೃತ್ತ’ವೆಂದು ನಾಮಕರಣ ಮಾಡಲಾಯಿತು. ನಾಡು-ನುಡಿಯ ಪ್ರಶ್ನೆ ಬಂದಾಗ ರಾಜಕುಮಾರ್ ಅವರು ಸ್ಪಂದಿಸುತ್ತಿದ್ದ ರೀತಿಯು ಅನನ್ಯವಾಗಿರುತ್ತಿತ್ತು. ಜತೆಗೆ, ಅಧಿಕಾರ ಸ್ಥಾನಗಳಿಂದ ಸದಾ ದೂರವಿರುತ್ತಿದ್ದ ಅವರು, ಸರಳತೆ ಮತ್ತು ಸಜ್ಜನಿಕೆಗಳ ಸಾಕಾರಮೂರ್ತಿಯಾಗಿದ್ದರು ಎಂದು ಸಚಿವರು ಬಣ್ಣಿಸಿದರು. ಸುಬ್ರಹ್ಮಣ್ಯ ನಗರದಲ್ಲಿ ನಡೆದ ಕಾರ್ಯಕ್ರಮವನ್ನು ಸಿನಿಮಾ ನಿರ್ಮಾಪಕ ಮತ್ತು ಬಿಜೆಪಿ ಮುಖಂಡ ಸುರೇಶ್ ಗೌಡ ಏರ್ಪಡಿಸಿದ್ದರು. ಅಭಿಮಾನಿಗಳಿಗೆಂದು ಅವರು ಉಪಾಹಾರ ಮತ್ತು ಭೋಜನದ ವ್ಯವಸ್ಥೆಯನ್ನೂ ಮಾಡಿದ್ದರು. ಬಿಜೆಪಿ ಮುಖಂಡರಾದ ಡಾ.ವಾಸು, ಕಾವೇರಿ ಕೇದಾರನಾಥ ಸೇರಿದಂತೆ ಇತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top