ವಾಲ್ಮೀಕಿ ಮಹರ್ಷಿ ನಮಗೆ ಶಿಕ್ಷಣ, ಜ್ಞಾನ, ಹೋರಾಟದ ಸಂಕೇತ: ಡಾ.ಅರುಣ್ ಜೋಳದ ಕೂಡ್ಲಿಗಿ

ಕನ್ನಡ ನಾಡು ವಾರ್ತೆ , ಸಂಡೂರು: ವಾಲ್ಮೀಕಿಯನ್ನು ಅಕ್ಷರ, ಶಿಕ್ಷಣ, ಜ್ಞಾನ, ಹೋರಾಟದ ಸಂಕೇತವಾಗಿ ಪರಿಭಾವಿಸಬೇಕಿದೆ, ವಾಲ್ಮೀಕಿ ಋಷಿ ಪೂರ್ವದಲ್ಲಿ ದರೋಡೆಕೋರನಾಗಿದ್ದ ಎನ್ನುವ ಕಟ್ಟುಕತೆ ನಿಜವಲ್ಲ, ರಾಮನನ್ನು ವಿಷ್ಣುವಿನ ಅವತಾರ ಎಂದು ದೈವೀಕರಿಸಿದ ಮೇಲೆ ವಾಲ್ಮೀಕಿಯ ಬಗೆಗೆ ಕತೆಗಳು ಹೆಣೆಯಲ್ಪಟ್ಟಿವೆ ದರೋಡೆಕೋರ ಎಂದು ಬಿಂಬಿತವಾಗಿರುವುದು ಶುದ್ಧ ಸುಳ್ಳು ಎಂದು ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾಕ್ಟರ್ ಅರುಣ್ ಜೋಳದಕೂಡ್ಲಿಗಿ ಅಭಿಪ್ರಾಯಪಟ್ಟರು ಅವರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಜರುಗಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಹೆಚ್.ಡಿ.ಸಾಂಕಾಲಿಯ ಅವರ ಪ್ರಕಾರ ವಾಲ್ಮೀಕಿಯ ಕಾಲದಲ್ಲಿಯೇ ಬಿಡಿಬಿಡಿ ಜನಪದ ಕತೆಗಳಲ್ಲಿದ್ದ ರಾಮಕತೆಯನ್ನು ಜೋಡಿಸಿ ಮಹಾಕಾವ್ಯದ ರೂಪಕೊಟ್ಟು ರಾಮನನ್ನು ಶ್ರೀರಾಮನನ್ನಾಗಿಸಿ ಪುನರ್‌ಸೃಷ್ಠಿಸಿದ್ದು ವಾಲ್ಮೀಕಿ.

ಆದರೆ ರಾಮನಾಮದ ಬಲದಿಂದಲೇ ವಾಲ್ಮೀಕಿ ರಾಮಾಯಣವನ್ನು ರಚಿಸಿದ ಎಂದು ವಾಲ್ಮೀಕಿಯನ್ನು ಆಧೀನ ಮಾಡಲಾಯಿತು. ಈ ಉದ್ದೇಶಕ್ಕಾಗಿ ವಾಲ್ಮೀಕಿಯ ಬಗೆಗೆ ಇಂತಹ ಕಟ್ಟುಕತೆಗಳನ್ನು ಕಟ್ಟಲಾಯಿತು. ಇದನ್ನು ಪರಿಶೀಲಿಸಿದಾಗ ವಾಲ್ಮೀಕಿ ಬದುಕಿದ್ದ 1500 ವರ್ಷಗಳ ನಂತರ ಆತ ದರೋಡೆಕೋರನಾಗಿದ್ದ’ ಎನ್ನುವ ಕತೆ ಸಿಗುತ್ತದೆ. ಹೀಗಾಗಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಪುರಾಣವನ್ನು ಉಲ್ಲೇಖಿಸುವುದು ಅಪರಾಧವಾಗುತ್ತದೆ ಎಂದು, 2009 ರಸ್ಟಾರ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್’ ಕೇಸಿನಲ್ಲಿ ಜಸ್ಟೀಸ್ ರಾಜೀವ ಭಲ್ಲಾ `ವಾಲ್ಮೀಕಿ ಋಷಿಪೂರ್ವದಲ್ಲಿ ದರೋಡೆಕೋರನಾಗಿರಲಿಲ್ಲ’ ಎನ್ನುವ ತೀರ್ಪು ನೀಡುತ್ತಾರೆ. 2019 ರಲ್ಲಿ ಪ್ರೊ.ಮಂಜುಳ ಸಹದೇವ್ ವಿರುದ್ಧದ ಕೇಸಿನಲ್ಲಿ ಜಸ್ಟೀಸ್ ಅರವಿಂದ್ ಸಿಂಗ್ ಸಾಂಗ್ವಾನ್ ಅವರು ಕೂಡ ರಾಜೀವ ಭಲ್ಲಾ ಅವರ ತೀರ್ಪನ್ನು ಎತ್ತಿಹಿಡಿದಿದ್ದಾರೆ. ಪಂಜಾಬ್-ಹರ್ಯಾಣ ಹೈಕೋರ್ಟಿನ ಜಸ್ಟೀಸ್ ರಾಜೀವ ಭಲ್ಲಾ ಅವರು ಮಂಜುಳ ಸಹದೇವ್ ಅವರ ಸಂಶೋಧನೆಯನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿ, ಮೇಲಿನ ಮುಖ್ಯಾಂಶಗಳನ್ನು ಉಲ್ಲೇಖಿಸಿ ಮಹರ್ಷಿ ವಾಲ್ಮೀಕಿ ದರೋಡೆಕೋರನಾಗಿರಲಿಲ್ಲ. ಕಾಲಾನಂತರದಲ್ಲಿ ಆದ ಸೇರ್ಪಡೆಗಳಲ್ಲಿ ಈ ಬಗೆಯ ಕತೆಯನ್ನು ಕಟ್ಟಲಾಗಿದೆ. ಒಂದು ಸಮುದಾಯದ ಧರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ತೀರ್ಪು ನೀಡುತ್ತಾರೆ.ಈ ತೀರ್ಪಿನ ತರುವಾಯ ಬಹುತೇಕ ಉತ್ತರ ಭಾರತದ ರಾಜ್ಯಗಳಲ್ಲಿ ಸಾರ್ವಜನಿಕವಾಗಿ ವಾಲ್ಮೀಕಿಯು ದರೋಡೆಕೋರನಾಗಿದ್ದ ಎನ್ನುವ ಕಥೆಯ ಉಲ್ಲೇಖ ನಿಷೇಧವಾಗಿದೆ. ಅಕಸ್ಮಾತ್ ಈ ಕಥೆಯನ್ನು ಉಲ್ಲೇಖಿಸಿದರೆ ಎಫ್.ಐ.ಆರ್ ದಾಖಲಾಗುತ್ತದೆ.

ಮಹರ್ಷಿ ವಾಲ್ಮೀಕಿಯ ಬಗೆಗಿನ ಅಧ್ಯಯನಗಳು ಮತ್ತು ಸ್ವರಚಿತ ರಾಮಾಯಣವನ್ನು ಆಧರಿಸಿ ನೋಡುವುದಾದರೆ ವಾಲ್ಮೀಕಿ ರಾಮನೆಂಬ ಕಾಲ್ಪನಿಕ ಪಾತ್ರವನ್ನು ಸಶಕ್ತವಾಗಿ ಕಟ್ಟಿದ ಭರತಖಂಡದ ಆದಿಕವಿ, ಬೇಡ ಸಮುದಾಯದ ಮೊದಲ ಸಾಕ್ಷರ. ಸಂಸ್ಕೃತವನ್ನು ಕೆಳಜಾತಿ ದಮನಿತ ಸಮುದಾಯಗಳಿಗೆ ನಿಶೇಧಿಸಿದ್ದ ಕಾಲಘಟ್ಟದಲ್ಲಿ ಸಂಸ್ಕೃತವನ್ನು ಕಲಿತು ಮೇರು ಕಾವ್ಯವನ್ನು ರಚನೆ ಮಾಡಿದ್ದು ಈ ಸಮುದಾಯಗಳಿಗೆ ಒಂದು ಸ್ಪೂರ್ತಿದಾಯಕ ಸಂಗತಿ ಯಾಗಿದೆ ಎಂದು ನುಡಿದರು.
ಜಯಂತಿಯನ್ನು ಬರೀ ಮೆರವಣಿಗೆ ಮಾಡಿ ಆಚರಿಸುವ ಬದಲು ವಾಲ್ಮೀಕಿಯನ್ನು ಅರಿತುಕೊಳ್ಳುವ ಕಮ್ಮಟಗಳು ನಡೆಯಬೇಕು ಅಂತಹ ಕಮ್ಮಟ ಇದಾಗಿದೆ, ಪದವಿ ಓದುವಾಗ ಒಂದು ತಿಂಗಳ ಕಾಲ ಕೃಷಿ ಇಲಾಖೆಯಲ್ಲಿ ಚಿತ್ರ ಬಿಡಿಸಿ ಇಲಾಖೆ ಮಾಹಿತಿಯನ್ನು ಬರಹರೂಪದಲ್ಲಿ ದಾಖಲಿಸಿದ್ದು ನಂತರ 1973ರ ಸಂಡೂರು ಭೂ ಹೋರಾಟ ಕೃತಿಯನ್ನು ರಚಿಸುವ ವೇಳೆ ಈ ಭಾಗದಲ್ಲಿ ಮಾಹಿತಿಗಾಗಿ ಅಲೆದಾಡಿದ್ದನ್ನು ಸ್ಮರಿಸಿಕೊಂಡರು. ಅಬ್ಬರದ ಗಣಿಗಾರಿಕೆಯ ದಿನಗಳಲ್ಲಿ ತಣ್ಣಗೆ ಕುಳಿತುಕೊಂಡು ತಾಲೂಕನ್ನು ಅಭಿವೃದ್ಧಿಯತ್ತ ಸಾಗಿಸಿದ ಶಾಸಕ ಈ ತುಕಾರಾಂ ಅವರ ಕಾರ್ಯವನ್ನ ಹೊಗಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಸಕ ಈ ತುಕಾರಾಮ ಅವರು ಮಾತನಾಡಿ, ಲೇಖನಿ ಹಿಡಿಯುವ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾದ ವಾಲ್ಮೀಕಿ ಮಹರ್ಷಿ ನಮಗೆಲ್ಲ ಆದರ್ಶವಾಗಬೇಕು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿವೇಕಾನಂದ, ಸಿಪಿಐ ಎಂಎಂ ಡಪ್ಪಿನ್, ಬಿಇಓ ಡಾ. ಅಕ್ಕಿ , ನಿವೃತ್ತ ಉಪನ್ಯಾಸಕ ಶಿಗ್ಗಾವಿ ಮಾತನಾಡಿದರು.
10ನೇ ತರಗತಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ತಹಸಿಲ್ದಾರ್ ದೇಸಾಯಿ, ಪುರಸಭೆ ಅಧ್ಯಕ್ಷ ಅನಿತಾ ವಸಂತಕುಮಾರ್, ಉಪಾಧ್ಯಕ್ಷ ವೀರೇಶ್ ಸಿಂದೆ, ಪುರಸಭಾ ಸದಸ್ಯರುಗಳು, ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಡಿ ಕೃಷ್ಣಪ್ಪ, ಲಿಂಗಪ್ಪ ಸೇರಿದಂತೆ ವಿವಿಧ ಸಮಾಜದ ಮುಖಂಡರುಗಳು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ್ ಹಾಗೂ ರವಿಕುಮಾರ್ ಸಿಬ್ಬಂದಿ ಹಾಗು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top