ಕನ್ನಡ ನಾಡು ವಾರ್ತೆ,ಸಂಡೂರು: ಮಾ:16: ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೂಕ್ತ ಸಮಯಕ್ಕೆ ಲಸಿಕೆ ಕೊಡಿಸುವುದು ಒಳಿತು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್ ತಿಳಿಸಿದರು. ಅವರು ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ “ರಾಷ್ಟ್ರೀಯ ಲಸಿಕೆ ದಿನ” ಅಥವಾ “ರಾಷ್ಟ್ರೀಯ ರೋಗ ನಿರೋಧಕ ದಿನಾಚರಣೆ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಲಸಿಕೆಯ ಮಹತ್ವ ದೊಡ್ಡದಿದೆ, ಮಕ್ಕಳಿಗೆ ಹಲವಾರು ಮಾರಕ ರೋಗಗಳಿಂದ ರಕ್ಷಣೆ ಪಡೆಯಲು ಲಸಿಕೆಯು ಅತ್ಯಂತ ಪ್ರಮುಖವಾಗಿದ್ದು, ಸರ್ಕಾರ ಒಟ್ಟು ಹದಿಮೂರು ಮಾರಕ ಕಾಯಿಲೆಗಳಿಗೆ ಲಸಿಕೆಗಳನ್ನು ಉಚಿತವಾಗಿ ನೀಡುತ್ತಿದೆ, ನಿಗದಿತ ವೇಳಾಪಟ್ಟಿ ಪ್ರಕಾರ ಹುಟ್ಟಿನಿಂದ ಹದಿನಾರು ವರ್ಷದ ವರೆಗೂ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸಿದಲ್ಲಿ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ದೇಹದಲ್ಲಿ ಮಾರಕ ರೋಗಗಳ ವಿರುದ್ದ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ತಾಯಂದಿರು ಶಿಶುಗಳಿಗೆ ಲಸಿಕೆ ಕೊಡುವುದರೊಂದಿಗೆ ಎದೆ ಹಾಲನ್ನು ಎರಡು ವರ್ಷದ ವರೆಗೂ ತಪ್ಪದೇ ಕುಡಿಸಬೇಕು ಎಂದು ತಿಳಿಸಿದರು. ಮಗುವಿಗೆ ಆರು ತಿಂಗಳ ನಂತರ ಪೂರಕ ಆಹಾರವನ್ನು ಕೊಡಿಸಬೇಕು, ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗಿರುವುದು, “ಲಸಿಕೆಗಳು ಎಲ್ಲರಿಗೂ ಪ್ರಯೋಜನಕಾರಿ” ಎಂಬ ಘೊಷ ವಾಕ್ಯದಡಿ ಜಾಗೃತಿ ಮೂಡಿಸಲಾಗುತ್ತಿದೆ, ಲಸಿಕೆ ವಂಚಿತ ಮಕ್ಕಳಿಗೆ ಇಂದ್ರಧನುಷ್ ಲಸಿಕಾ ಅಭಿಯಾನದಡಿ ಕಡ್ಡಾಯವಾಗಿ ಲಸಿಕೆ ನೀಡುವ ಕಾರ್ಯವನ್ನು ಇನ್ನೂ ಎರಡು ಸುತ್ತಿನಲ್ಲಿ ಲಸಿಕೆ ನೀಡುವ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು,

ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಅವರು ಮಾತನಾಡಿ ಆರೋಗ್ಯ ಇಲಾಖೆ ಹಲವಾರು ವರ್ಷಗಳಿಂದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜೊತೆಗೆ ರಾಷ್ಟ್ರೀಯ ಲಸಿಕಾ ದಿನಗಳಲ್ಲಿ ನಿರಂತರವಾಗಿ ಲಸಿಕೆ ನೀಡುವ ಕಾರ್ಯ ಮಾಡುತ್ತಾ ಬಂದಿದ್ದು, ಭಾರತ ದೇಶವನ್ನು “ಪೋಲಿಯೊ ಮುಕ್ತ ದೇಶ” ವನ್ನಾಗಿ ಮಾಡಲಾಗಿದೆ, ಲಸಿಕೆ ನೀಡುವಲ್ಲಿ ನಮ್ಮ ದೇಶ ಇತರ ದೇಶಗಳಿಗೆ ಮಾದರಿಯಾಗಿದೆ, 180 ಕೋಟಿ ಡೋಸ್ ಕೋವಿಡ್ ಲಸಿಕೆ ಜನರಿಗೆ ನೀಡಿದ್ದು, ಕೊರೋನಾ ರೋಗವನ್ನು ನಿಯಂತ್ರಣ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಮೊದಮೊದಲು ಆರು ಮಾರಕ ರೋಗಗಳಿಗೆ ಲಸಿಕೆ ಹಾಕಲಾಗುತ್ತಿದ್ದು ಇದೀಗ ಸಾಕಷ್ಟು ಬದಲಾವಣೆ ನಂತರ ಹೊಸ ಹೊಸ ಲಸಿಕೆಗಳು ಸೇರಿ ಹದಿಮೂರು ಮಾರಕ ರೋಗಗಳಿಗೆ ಲಸಿಕೆ ನೀಡಲಾಗುತ್ತಿದೆ, ಬಿ.ಸಿ.ಜಿ, ಹೆಪಟೈಟಿಸ್ ಬಿ, ಪೋಲಿಯೊ, ಡಿಪ್ತೀರಿಯಾ, ಪರ್ಟೂಸಿಸ್, ವೂಪಿಂಗ್ ಕಾಫ್, ಟೆಟನಸ್, ಹಿಬ್, ನಿಮೋಕಾಕಲ್ ಕಾಂಜುಗೆಟ್, ರೋಟಾ, ಮೀಜಲ್ಸ್, ರುಬೆಲ್ಲಾ, ಜಪಾನೀಸ್ ಎನ್ ಸೆಪಿಲೈಟಿಸ್ ಒಟ್ಟು ಹದಿಮೂರು ಲಸಿಕೆಗಳ ಬಗ್ಗೆ ಮಾಹಿತಿ ಮತ್ತು ಲಸಿಕೆ ಹಾಕಿಸುವ ವೇಳಾಪಟ್ಟಿಯ ವಿವರ ನೀಡಿದರು,ಲಸಿಕೆಗಳೊಂದಿಗೆ ಪೂರಕವಾಗಿ ಇರಳು ಕುರುಡು ನಿವಾರಣೆಗೆ ವಿಟಾಮಿನ್ ಎ ದ್ರಾವಣವನ್ನು ಆರು ತಿಂಗಳ ಅಂತರಗಳಲ್ಲಿ ಐದು ವರ್ಷದೊಳಗೆ ಒಟ್ಟು ಒಂಬತ್ತು ಡೋಸ್ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು, ಈ ಸಂದರ್ಭದಲ್ಲಿ ಮಕ್ಕಳ ತಾಯಂದಿರೊಂದಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಕುಶಾಲ್ ರಾಜ್, ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಫಾರ್ಮಸಿ ಅಧಿಕಾರಿ ಮಂಜುನಾಥ್, ಸೂಪರಿಡೆಂಟ್ ಹರ್ಷ, ಬಿ.ಪಿ.ಎಮ್ ವಿನೋದ್ ಕುಮಾರ್,ಶಶಿಧರ್, ನವೀನ್,ಪ್ರಶಾಂತ್,ಚಲುವರಾಜ, ಮಾಬು ಸಾಬು, ತಿಪ್ಪೇಸ್ವಾಮಿ, ಜೆ. ತಿಪ್ಪನಗೌಡ, ಮಹೇಶ್, ಸುನಿಲ್, ಕರಿಬಸಮ್ಮ, ಇತರರು ಹಾಜರಿದ್ದರು