ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
ಸಿಎಂ ಕಚೇರಿ ಡೀಲರ್ ಮಹದೇವುಗೂ ಸಿಎಂ ಕುಟುಂಬಕ್ಕೆ ಸಂಬಂಧ ಏನು?
ಕುಮಾರಸ್ವಾಮಿ ಹಿಟ್ ಅಂಡ್ ರನ್ ಅಂದಿದ್ದರು! ಈ ವಿಡಿಯೋಗಿಂತ ಸಾಕ್ಷಿ ಬೇಕಾ? ಉನ್ನತ ತನಿಖೆಗೆ ಮಾಜಿ ಸಿಎಂ ಒತ್ತಾಯ
ಬೆಂಗಳೂರು: ಕಾಸಿಗಾಗಿ ಹುದ್ದೆ ದಂಧೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.
ಸಿಎಂ ಕಚೇರಿಯಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆಯ ಬಗ್ಗೆ ಹೊರಬಂದಿರುವ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕುರಿತ ವಿಡಿಯೋ ಬಹಿರಂಗವಾದ ಬೆನ್ನಲ್ಲಿಯೇ ಅವರು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ತುರ್ತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು.
ಮುಖ್ಯಮಂತ್ರಿ, ಅವರ ಪುತ್ರ, ಅವರ ಕಚೇರಿ, ಇಡೀ ಅವರ ಪಟಾಲಂ ವರ್ಗಾವಣೆ ದಂಧೆಯಲ್ಲಿ ಆರಂಭದಿಂದಲೂ ಎಡೆಬಿಡದೆ ತೊಡಗಿದೆ ಎಂದು ನಾನು ಅನೇಕ ಸಲ ಆರೋಪ ಮಾಡಿದ್ದೆ. ಈಗ ಆ ಆರೋಪ ಸತ್ಯವಾಗಿದೆ ಎಂದು ಅವರು ಹೇಳಿದರು.
ಹಿಂದೆ ಇದೇ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಅವರು ಸೂಪರ್ ಸಿಎಂ ಎಂದು ಆರೋಪ ಮಾಡಿದ್ದರು. VST TAX ಎಂದು ದೂರಿದ್ದರು ಎಂದ ಮಾಜಿ ಮುಖ್ಯಮಂತ್ರಿ ಅವರು, ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಯ ವಿಡಿಯೋ ತುಣುಕನ್ನು ಟಿವಿಯಲ್ಲಿ ಹಾಕಿ ಮಾಧ್ಯಮ ವರದಿಗಾರರಿಗೆ ತೋರಿಸಿದರು.
ಅಲ್ಲದೆ, ಈಗ ಸಿದ್ದರಾಮಯ್ಯ ನಡೆಸುತ್ತಿರುವ YST ದಂಧೆಯ ಕತೆ ಏನು? ಆಗೊಂದು ಮಾತು, ಹೀಗೊಂದು ಮಾತೇ? ಎಂದು ಮಾಜಿ ಮುಖ್ಯಮಂತ್ರಿ ಅವರು ತೀವ್ರ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು.
ಯತೀಂದ್ರ ಅವರಿಗೆ ಕರೆ ಮಾಡಿದ್ದು ಯಾರು?:
ಯತೀಂದ್ರ ಅವರಿಗೆ ಕರೆ ಮಾಡಿದ್ದು ಯಾರು? ಹೇಳಿ ಅಪ್ಪ ಎಂದಿದ್ದು ಯಾರಿಗೆ? ವಿವೇಕಾನಂದ ಯಾರು? ಮಹದೇವನಿಗೆ ಫೋನ್ ಕೊಡಿ ಅಂತ ಹೇಳಿದ್ದು ಯಾಕೆ ? ನಾಲ್ಕೈದು ಲಿಸ್ಟ್ ಯಾವುದು ಎಂದು ಕುಮಾರಸ್ವಾಮಿ ಪ್ರಶ್ನಿಸಿದರಲ್ಲದೆ, ಇದ್ಯಾವ ಚೀಫ್ ಮಿನಿಸ್ಟರ್, ಸೂಪರ್ ಚೀಫ್ ಮಿನಿಸ್ಟರ್ ಎಂದು ಖಾರವಾಗಿ ಕೇಳಿದರು.
ಯತೀಂದ್ರ ಅವರು, ನಾನು ಹೇಳಿದ ನಾಲ್ಕೈದು ಬಿಟ್ಟು ಬೇರೆ ಮಾಡಬೇಡ ಅಂದಿದ್ದು ಯಾಕೆ? ಇದು ವರ್ಗಾವಣೆ ದಂಧೆ ಹೊರತುಪಡಿಸಿ ಬೇರೆ ಯಾವ ವಿಷಯಕ್ಕೆ ಸಂಬಂಧಿಸಿದ್ದು? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಅಪ್ಪ ಮಗನ ನಡುವೆ ನಡೆದ ಫೋನ್ ಚರ್ಚೆ ವ್ಯವಹಾರ ಜನರಿಗೆ ಗೊತ್ತಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಒತ್ತಾಯ ಮಾಡಿದರು.
ಇವರು ಅಭಿವೃದ್ಧಿ ಬಗ್ಗೆ ಅಭಿರುಚಿ ಇರುವವರು. ಪಾಪ.. ಸೂಪರ್ ಸಿಎಂ ಸಾಹೇಬರು ಟಿಕ್ ಮಾಡಿದ ಲಿಸ್ಟ್ ಜನರ ಮುಂದೆ ಇಡಿ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕಿದರು.
ಆ ಮಹದೇವು ಯಾರು?:
ಇಷ್ಟಕ್ಕೂ ಆ ಮಹದೇವು ಯಾರು? ಆತನಿಗೂ ಮುಖ್ಯಮಂತ್ರಿ ಕುಟುಂಬಕ್ಕೂ ಏನು ಸಂಬಂಧ? ಕಲೆಕ್ಷನ್ ಮಾಡುವುದಕ್ಕೆ ಆ ಗಿರಾಕಿಯನ್ನು ಸಿಎಂ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಒಬ್ಬ ಶಾಸಕ ಪತ್ರ ತೆಗೆದುಕೊಂಡು ಹೋದಾಗ, “ಬರೀ ಕಾಗದ ತಗೊಂಡು ಬಂದರೆ ಆಯಿತಾ? 30 ಲಕ್ಷ ರೂಪಾಯಿ ಹಣ ಕೊಡಬೇಕು ಎಂದು ಬಹಿರಂಗವಾಗಿ ಡಿಮಾಂಡ್ ಮಾಡಿದ್ದ ವ್ಯಕ್ತಿ ಈತ. ಈ ವ್ಯಕ್ತಿಯ ಬಗ್ಗೆ ಹಿಂದೆಯೇ ನಾನು ಹೇಳಿದ್ದೇನೆ. ಸಿಎಂ ಕಚೇರಿಯಲ್ಲಿ ವೈ ಎಸ್ ಟಿ ಕಲೆಕ್ಷನ್ ಆಗುತ್ತಿದೆ ಎಂದು ಹೇಳಿದಾಗ ನನ್ನ ಬಗ್ಗೆ ಲಘುವಾಗಿ ಮಾತಾನಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು ಮಾಜಿ ಮುಖ್ಯಮಂತ್ರಿಗಳು.
ವಿಜಯೇಂದ್ರ ಬಗ್ಗೆ ಆರೋಪ ಮಾಡಿದ್ದವರು ಇವರು:
ಅಂದು ಯಡಿಯೂರಪ್ಪ , ವಿಜಯೇಂದ್ರ ಬಗ್ಗೆ ಆರೋಪ ಮಾಡಿದ್ದ ಸಿದ್ದರಾಮಯ್ಯ ಅವರು, ತಮ್ಮ ಮಗನನ್ನು ಇಟ್ಟುಕೊಂಡು ಮಾಡುತ್ತಿರುವುದೇನು? ಎಂದ ಅವರು, ತಂದೆ ಎನ್ನುವ ಸಂಬಂಧ ಮನೆಯಲ್ಲಿ. ಹೊರಗೆ ಅಲ್ಲ. ಮೊದಲು ಅಪ್ಪಾ ಎನ್ನುತ್ತಾ, ಫೋನ್ ಕೊಡಿ ಆ ಮಹದೇವುಗೆ ಎಂದು ರಾಜ್ಯದ ಸಿಎಂಗೇ ತಾಕೀತು ಮಾಡುವ ಅಹಂಕಾರಕ್ಕೆ ಏನು ಹೇಳುವುದು? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ವಿಧಾನಸಭೆ ಚುನಾವಣೆಗೆ ಮುನ್ನ ಪೇ ಸಿಎಂ ಅಂತ ಪೋಸ್ಟರ್ ಹಾಕಿದ್ದರು ಕಾಂಗ್ರೆಸ್ ನವರು. ಈಗ ಪಂಚರಾಜ್ಯಗಳ ಚುನಾವಣೆಗೆ ಗಂಟುಮೂಟೆ ಸಮೇತ ಹೋಗುತ್ತಿದ್ದಾರೆ. ಇದಕ್ಕೆ ಯಾವ ಪೋಸ್ಟರ್ ಹಾಕಬೇಕು? ವರ್ಗಾವಣೆ ದಂಧೆ ಬಗ್ಗೆ ನಾನು ಹೇಳಿದಾಗ ಎಲ್ಲರೂ ನನ್ನ ಮೇಲೆ ಮುಗಿಬಿದ್ದರು. ಈಗ ಏನು ಹೇಳುತ್ತಾರೆ ಅವರೆಲ್ಲ. ಸಿಎಂ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಂದು ಅವರು ಹೇಳಿದರು.
ಮಾತೆತ್ತಿದರೆ ಕುಮಾರಸ್ವಾಮಿ ಹೇಳೋದೆಲ್ಲ ಸುಳ್ಳು, ಅವನಿಗ್ಯಾಕೆ ಉತ್ತರ ಕೊಡಬೇಕು. ಆದರೂ ನಾವು ಎಚ್ಚರಿಕೆಯಿಂದ ಇರಬೇಕು ಅಂತಲೂ ಸಿದ್ದರಾಮಯ್ಯ ಹೇಳಿದ್ದರು. ಎಚ್ಚರವಾಗಿದ್ದರೂ ಈ ವಿಡಿಯೋ ಯಾಕೆ ಲೀಕ್ ಆಯಿತು? ವಸೂಲಿ ದಂಧೆಯ ಮಾಹಿತಿ ಹೇಗೆ ಹೊರಗೆ ಬರುತ್ತಿದೆ? ಸಿಎಂ ಅವರು ಈ ಮಾತನ್ನು ಯಾಕೆ ಹೇಳಿದರು? ನಾವು ತಿನ್ನುತ್ತಿದ್ದೇವೆ, ಸಾಕ್ಷಿ ಸಿಕ್ಕಿ ಬಿಡುತ್ತದೆ ಎಂದು ಹೀಗೆ ಹೇಳಿದ್ದರಾ? ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ಆರೋಪ ಮಾಡಿದರೆ ಕುಮಾರಸ್ವಾಮಿ ಹಿಟ್ ಅಂಡ್ ರನ್ ಎನ್ನುತ್ತಿದ್ದವರಿಗೆ ಈ ವಿಡಿಯೋಗಿಂತ ಸಾಕ್ಷಿ ಬೇಕಾ? ಯಡಿಯೂರಪ್ಪ ಮಗನ ಬಗ್ಗೆ ಮಾತಾಡಿದ್ದರಲ್ಲ, ಇವರು ಅಂದು ಯಾವ ದಾಖಲೆ ಕೊಟ್ಟಿದ್ದರು? ಪೇ ಸಿಎಂ ಅಂತ ಬೀದಿ ಬೀದಿಲಿ ಪೋಸ್ಟರ್ ಹಾಕಿದ್ದರು. ಅದನ್ನು ಸಾಬೀತು ಮಾಡೋದಕ್ಕೆ ಯಾವ ಸಾಕ್ಷ್ಯ ಇಟ್ಟಿದ್ದರು? ನಾಚಿಕೆ ಆಗಬೇಕು ಇವರಿಗೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನನಗೆ ಬುದ್ದಿಭ್ರಮಣೆ ಎಂದಿದ್ದರು ಕಾಂಗ್ರೆಸ್ ನವರು. ನನ್ನದು ಏಕಾಂಗಿ ಕೂಗು ಅಂತ ಅಣಕ ಮಾಡುತ್ತಿದ್ದರು. ಸಣ್ಣಪುಟ್ಟ ಪುಡಿ ಲೀಡರುಗಳು ನನ್ನ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದರು. ಈಗ ಅವರೆಲ್ಲ ಏನು ಹೇಳುತ್ತಾರೆ? ವಿಡಿಯೋದಲ್ಲಿ ಏನು ಇಲ್ಲ, ನಮ್ಮ ಸಿಎಂ ಸತ್ಯ ಹರಿಶ್ಚಂದ್ರ ಎಂದು ಹೇಳುತ್ತಾರ? ಎಂದು ಅವರು ಕೆಂಡಾಮಂಡಲರಾದರು.
ಈ ಹಿಂದೆ ಯಡಿಯೂರಪ್ಪ ಅವರ ಸರಕಾರದಲ್ಲಿ ಎಲ್ಲಾ ವ್ಯವಹಾರವನ್ನು ವಿಜಯೇಂದ್ರ ಮಾಡುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು ಹಾಲಿ ಸಿಎಂ. ಆ ಹೇಳಿಕೆಯನ್ನು ಸಿದ್ದರಾಮಯ್ಯ ಏನಾದರೂ ಮರೆತಿದ್ದರೆ ನೆನಪು ಮಾಡಿಕೊಳ್ಳಲಿ. ನನ್ನ ಬಗ್ಗೆ ಪೋಸ್ಟರ್ ಹಾಕುವ ಮೂಲಕ ಕೀಳುಮಟ್ಟದ ಕೆಲಸ ಮಾಡಿದ್ದಾರೆ. ಎರಡು ಮೂರು ಸಾವಿರಕ್ಕೆ ಕರೆಂಟ್ ಕದಿಯುವ ದಾರಿದ್ರ್ಯ ನನಗೆ ಬಂದಿಲ್ಲ. ಆದರೆ, ಸಿದ್ದರಾಮಯ್ಯ ಅವರಿಗೆ ಏನು ದಾರಿದ್ರ್ಯ ಬಂದಿದೆ ಎಂಬುದನ್ನು ಹೇಳಬೇಕು ಎಂದು ತಿರುಗೇಟು ಕೊಟ್ಟರು.
ಕೆಲವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದಾಗ, ಕೋಮವಾದಿ ಜನತಾದಳದಿಂದ ಬಿಟ್ಟು ಬಂದರು ಎಂದು ಸಿದ್ದರಾಮಯ್ಯ ಹೇಳಿದ್ದರು. ಸಚಿವ ರಾಜಣ್ಣ ಅವರು; “ನಮ್ಮದು ಮಹಾ ಸಮುದ್ರ. ಚರಂಡಿ ನೀರು ಕೂಡ ಬರುತ್ತಿದೆ. ತುಂಬಿಸಿಕೊಳ್ತೀವಿ” ಎಂದಿದ್ದಾರೆ. ಕಾಂಗ್ರೆಸ್ ಯಾವತ್ತೂ ಒಳ್ಳೆಯ ನೀರು ತುಂಬಿಸಿಕೊಳ್ಳಲ್ಲ, ಚರಂಡಿ ನೀರೇ ತುಂಬಿಸಿಕೊಳ್ಳೋದು ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ರಾಜ್ಯದಲ್ಲಿ ದೀಪಾವಳಿ ಬಳಿಕ ದಿನಕ್ಕೆ ಒಂದೊಂದು ರೀತಿಯ ಸುದ್ದಿಗಳು ಬರುತ್ತಿದೆ. ಹಬ್ಬದ ಸಂದರ್ಭದಲ್ಲಿ ಕುಮಾರಸ್ವಾಮಿ ಮನೆಗೆ ವಿದ್ಯುತ್ ಅಲಂಕಾರಕ್ಕೆ ಕರೆಂಟ್ ಕಳ್ಳತನ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರು. ಕರೆಂಟ್ ಕದಿಯುವಷ್ಟು ದಾರಿದ್ರ್ಯ ನನಗೆ ಬಂದಿದೆಯಾ ಎಂದು ಅವರು ಕೆರಳಿದರು.
ಯಾರೋ ಮಾಡಿದ ಅಚಾತುರ್ಯಕ್ಕೆ ನಾನು ತಲೆ ಮೇಲೆ ಹೊತ್ತುಕೊಂಡೆ ಎಂದು ಕೂಡ ಹೇಳಿದ್ದೇನೆ. ನಂತರ ಜೆಪಿ ಭವನದಲ್ಲಿ ಪೋಸ್ಟರ್ ಅಂಟಿಸಿದ್ದಾರೆ. ಕಾಂಗ್ರೆಸ್‌ಗೆ ಇದೊಂದು ಚಾಳಿ ಶುರುವಾಗಿದೆ. ಅದೇ ಅವರಿಗೆ ತಿರುಗುಬಾಣ ಆಗಿದೆ ಎಂದು ಅವರು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ. ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಮುಂತಾದವರು ಉಪಸ್ಥಿತರಿದ್ದರು.
ತೇಪೆ ಹಾಕುವ ಮೊದಲೇ ಮಾನ ಹರಾಜು ಆಗಿದೆ
ಶಾಲೆಗಳ ಉದ್ಧಾರಕ್ಕಾಗಿ ಸಿಎಸ್ ಆರ್ ಫಂಡ್ ಬಗ್ಗೆ ಅಪ್ಪ ಸಿಎಂ, ಮಗ ಮಾಜಿ ಶಾಸಕ ಫೋನ್ ನಲ್ಲಿ ಮಾತನಾಡುತ್ತಿದ್ದರು ಎಂದು ವಿಡಿಯೋಗೆ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದರೆ, ತೇಪೆ ಹಾಕುವ ಮೊದಲೇ ಇವರ ಮನ ಹಾದಿಬೀದಿಯಲ್ಲಿ ಹರಾಜಾಗಿದೆ ಎಂದು ಕುಮಾರಸ್ವಾಮಿ ಅವರು ಕಿಡಿ ಕಾರಿದರು.
ಒಂದು ವೇಳೆ ಶಾಲೆಗಳ ಪಟ್ಟಿ, ಸಿ ಎಸ್ ಆರ್ ದೇಣಿಗೆ ವಿಷಯ ಇದ್ದರೆ ಸಂಬಂಧಪಟ್ಟ ಡಿಡಿಪಿಐ ಬಳಿ ಮಾತನಾಡಬೇಕಿತ್ತು. ಯಾಕೆ ಆ ಡಿಡಿಪಿಐ ಶಾಲೆಗಳ ಪಟ್ಟಿ ಕಳಿಸಿರಬೇಕಲ್ಲವೇ? ಎಂದು ಕೆಣಕಿದ ಮಾಜಿ ಮುಖ್ಯಮಂತ್ರಿಗಳು; ಯಾವ ಯಾವ ಸ್ಕೂಲ್ ಗೆ ಹಣ ಕಳಿಸಬೇಕು ಅಂತ ಮಗನ ಬಳಿ ಕೇಳಿದ್ದಾರೆ ಅನಿಸುತ್ತದೆ. ಜನರು ದಡ್ಡರಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇಂಥಹ ಬಂಡತನ ಬೇಡ, ಒಂದು ಕಾಲದಲ್ಲಿ ನಿಮ್ಮ ಆಡಳಿತದ ಬಗ್ಗೆ ಜನ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದರು. ಈಗ ನೀವು ಮೊದಲಿನ ಹಾಗೆ ಇಲ್ಲ ಎಂದು ನಿಮ್ಮ ಸಂಪುಟದ ಸಚಿವರು, ಶಾಸಕರು ಹೇಳುತ್ತಿದ್ದಾರೆ. ಎರಡು ಬಾರಿ ಸಿಎಂ ಆಗಿ ಜನರ ಕೈಲಿ ಒಳ್ಳೆಯ ಆಡಳಿತ ನೋಡಬೇಕು ಅಂತ ಅಂದುಕೊಂಡಿದ್ದಾರೆ. ನಾನು ಯಾವುದೇ ದ್ವೇಷದಿಂದ ಈ ಮಾತನ್ನು ಹೇಳುತ್ತಿಲ್ಲ ಎಂದ ಅವರು, ಯಾರಿಗೂ ಸಿಎಂ ಸ್ಥಾನ ಶಾಶ್ವತವಲ್ಲ. ನಾವು ಇತಿಹಾಸ ನೋಡಿದರೆ ಅನೇಕರು ಆಳ್ವಿಕೆ ಮಾಡಿ ಹೋಗಿದ್ದಾರೆ. ಚಕ್ರವರ್ತಿಗಳೇ ಆಗಿ ಹೋಗಿದ್ದಾರೆ. ನೀವು ಯಾವ ಲೆಕ್ಕ ಎಂದು ಟಾಂಗ್ ಕೊಟ್ಟರು.
ಸಿಎಂ, ಸಿಎಂ ಪುತ್ರನ ವಿರುದ್ಧ ಕಾಸಿಗಾಗಿ ಹುದ್ದೆ ಡೀಲಿಂಗ್ ಆರೋಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ
ಅಪ್ಪ ಕಲೆಕ್ಷನ್ ಕಿಂಗ್, ಮಗ ಕಲೆಕ್ಷನ್ ಪ್ರಿನ್ಸ್
ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ??ಎಂದು ಕಿಡಿ
ಕಾಸಿಗಾಗಿ ಹುದ್ದೆ ದಂಧೆಯಲ್ಲಿ ತೊಡಗಿರುವ ರಾಜ್ಯದ ಮುಖ್ಯಮಂತ್ರಿ ಹಾಗೂ ಅವರ ಪುತ್ರನ ಕುರಿತಾದ ವಿಡಿಯೋ ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಎಂದು ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಾಗ್ದಾಳಿ ನಡೆಸಿರುವ ಅವರು; ಕಾಸಿಗಾಗಿ ಹುದ್ದೆ ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. ರಾಜ್ಯ ಕಾಂಗ್ರೆಸ್ ಸರಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ ಹರಾಜಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ? ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ. ಬೀದಿಯಲ್ಲಿಯೇ ಇಷ್ಟಾದರೆ ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು? ಎಂದು ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಾಸಿಗಾಗಿ ಹುದ್ದೆ ಉರುಫ್ #CashForPosting ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. @INCKarnataka ಸರಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ… pic.twitter.com/T1366ek2iS
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 16, 2023
ಮಿನಿಸ್ಟರ್ ಫಾರ್ ಕ್ಯಾಶ್ ಫಾರ್ ಪೋಸ್ಟಿಂಗ್!
ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, “ನಾನು ಹೇಳಿದವರಷ್ಟನ್ನೇ ಮಾಡಿ” ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ?? ಅಥವಾ ಮಿನಿಸ್ಟರ್ ಫಾರ್ ಕ್ಯಾಶ್ ಫಾರ್ ಪೋಸ್ಟಿಂಗಾ? ಇಲ್ಲವೇ ಒಳಾಡಳಿತ ಸಚಿವಾಲಯ ಮಾದರಿಯ ‘ಒಳ ವಸೂಲಿ ಸಚಿವಾಲಯ’ದ ಸಚಿವರಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರೀ ಆಸಾಮಿ ಯಾರು? ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು? ಹಿಂದೊಮ್ಮೆ ನಾನೇ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೆ. ಪ್ರತೀ ವರ್ಗಾವಣೆಗೆ ತಲಾ 30 ಲಕ್ಷ ರೂ. ಪೀಕುತ್ತಿದ್ದ ಗಿರಾಕಿ ಈತ ಎಂದು ತಿಳಿಸಿದ್ದೆ. ಕುಮಾರಸ್ವಾಮಿ ಸುಳ್ಳು ಹೇಳ್ತಾ ಇದ್ದಾರೆ, ಅವರು ಹೇಳೋದು 99.9999% ಸುಳ್ಳು. ಅವರಿಗೆ ನಾನು ಉತ್ತರ ಕೊಡಲ್ಲ, ಅವರು ಹಿಟ್ ಅಂಡ್ ರನ್ ಗಿರಾಕಿ ಎಂದಿದ್ದ ಸಿಎಂ ಸಿದ್ದರಾಮಯ್ಯನವರು ಈಗ ಏನು ಹೇಳುತ್ತಾರೆ? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಈಗ ಹೇಳಿ ಸಿದ್ದರಾಮಯ್ಯನವರೇ, ನೀವು, ನಿಮ್ಮ ಮಗ ಎಷ್ಟು ಪರ್ಸೆಂಟ್ ಗೆ ಹುದ್ದೆಗಳನ್ನು ಮಾರಿದ್ದೀರಿ? ಅದರಲ್ಲಿ ನಿಮಗೆಷ್ಟು? ನಿಮ್ಮ ಮಗನಿಗೆ ಎಷ್ಟು? ನಿಮ್ಮ ಕಚೇರಿಯ ಪರ್ಸಂಟೇಜ್ ಪಟಾಲಂಗೆ ಎಷ್ಟು? ಎಂದು ತೀವ್ರವಾಗಿ ಪ್ರಶ್ನೆ ಮಾಡಿದ್ದಾರೆ.
ಸುಲಿಗೆ ಪುತ್ರ!:
ನಾನು ಹೇಳಿದ್ದೆಲ್ಲಾ ಸುಳ್ಳು ಸುಳ್ಳು ಎಂದು ಸಲೀಸಾಗಿ ಹೇಳುತ್ತೀರಲ್ಲ? ಸತ್ಯ ಎದ್ದು ಎದುರಿಗೇ ಕೂತಿದೆ. ಏನು ಹೇಳುತ್ತೀರಿ? ವಿಡಿಯೋದಲ್ಲಿರುವ ವಿಷಯ ಸುಳ್ಳೋ, ನಿಜವೋ ನಾಡಿನ ಜನ ತೀರ್ಮಾನ ಮಾಡುತ್ತಾರೆ. ಅದರ ಸಾಧಕ ಬಾಧಕ ನಾನೇ ಎದುರಿಸುತ್ತೇನೆ. ಸಾರ್ವಜನಿಕ ಸಭೆಯಲ್ಲೇ ನಿಮ್ಮ ‘ಸುಲಿಗೆಪುತ್ರ’ ಕಾಸಿಗಾಗಿ ಹುದ್ದೆ ವ್ಯವಹಾರವನ್ನು ಬಟಾಬಯಲು ಮಾಡಿ ನಿಮ್ಮ ವಸೂಲಿ ದಂಧೆಯನ್ನು ಬೆತ್ತಲು ಮಾಡಿದ್ದಾರಲ್ಲ!! ಇದಕ್ಕೆ ಅಹಿಂದ ಮಹಾಪುರುಷರಾದ ತಾವೇ ರಾಜ್ಯದ ಜನರಿಗೆ ಉತ್ತರ ಕೊಡಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.
ರಾಜೀನಾಮೆ ಬಿಟ್ಟರೆ ಬೇರೆ ದಾರಿ ಇಲ್ಲ:
ನಿಮ್ಮಿಂದ ಉತ್ತರವಷ್ಟೇ ಅಲ್ಲ, ನಿಮಗೆ ಮಾನ ಮರ್ಯಾದೆ ಬಹಳ ಜಾಸ್ತಿ ಅಲ್ಲವೇ?ನೈತಿಕ ಮೌಲ್ಯಗಳಂತೂ ದುಪಟ್ಟು ಜಾಸ್ತಿ, ಹೌದಲ್ಲವೇ? ಅದಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡಿ. ನಿಮಗೆ ಉಳಿದಿರುವುದು ಸಿಎಂ ಕಚೇರಿ ಖಾಲಿ ಮಾಡುವುದಷ್ಟೇ. ಕೂಡಲೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡಿ. ಇದು ನನ್ನ ಆಗ್ರಹ ಎಂದು ಅವರು ತಿಳಿಸಿದ್ದಾರೆ