ಸಿದ್ದಾಪುರ: ಮಲೆನಾಡಿಗರನ್ನು ಕಂಗೆಡಿಸಿರುವ ಮಂಗನ ಕಾಯಿಲೆಗೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್-ಕೆಎಫ್ಡಿ) ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಐದು ರ್ಷದ ಬಾಲಕಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾಳೆ.
ಈ ಮೂಲಕ ಮಂಗನ ಕಾಯಿಲೆಯಿಂದ ಜಿಲ್ಲೆಯಲ್ಲಿ ಇತ್ತೀಚೆಗೆ ಮೃತಪಟ್ಟವರ ಸಂಖ್ಯೆ ೯ಕ್ಕೆ ಏರಿಕೆಯಾಗಿದ್ದು, ಮಲೆನಾಡು ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ.ಬಾಲಕಿಯ ಆರೋಗ್ಯ ಹದಗೆಟ್ಟಿದ್ದರಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾಳೆ.ಸಿದ್ದಾಪುರ ತಾಲ್ಲೂಕಿನ ಹೊಸ ಪ್ರದೇಶಗಳಿಗೆ ಕೆಎಫ್ಡಿ ನಿಧಾನವಾಗಿ ಹರಡುತ್ತಿದೆ. ಸಿದ್ದಾಪುರ ತಾಲ್ಲೂಕಿನಲ್ಲೇ ಸುಮಾರು ೯೦ ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿ ಒಟ್ಟು ೯೯ ಪ್ರಕರಣಗಳು ಈವರೆಗೆ ಪತ್ತೆಯಾಗಿವೆ ಎನ್ನಲಾಗಿದೆ.
ಮಂಗನ ಕಾಯಿಲೆ ರೋಗ ಲಕ್ಷಣಗಳು:
ಮಂಗನ ಕಾಯಿಲೆ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಬದಲಾಗಿ, ಕೆಎಫ್ಡಿ ವೈರಸ್ ಸೋಂಕಿತ ಉಣ್ಣೆ ಮನುಷ್ಯರಿಗೆ ಕಚ್ಚಿದರೆ ಮಂಗನ ಕಾಯಿಲೆ ಬರುತ್ತದೆ. ಸೋಂಕಿತ ವ್ಯಕ್ತಿಗೆ ಎರಡು ಹಂತಗಳಲ್ಲಿ ರೋಗ ಕಾಡುತ್ತದೆ. ಮೊದಲ ಹಂತದಲ್ಲಿ ಜ್ವರ, ಚಳಿ, ತಲೆನೋವು, ಕೀಲುನೋವು, ವಾಂತಿ, ಹೊಟ್ಟೆ ನೋವು, ಸ್ನಾಯು ಸೆಳೆತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಎರಡನೇ ಹಂತದಲ್ಲಿ ಬಿಳಿರಕ್ತ ಕಣಗಳು ಕಡಿಮೆಯಾಗಿ ತೀವ್ರ ರಕ್ತಸ್ರಾವವಾಗುತ್ತದೆ. ಈ ಹಂತದಲ್ಲಿ ಕಾಯಿಲೆ ಉಲ್ಬಣಗೊಂಡರೆ ಕಿಡ್ನಿ ವೈಫಲ್ಯ ಸೇರಿದಂತೆ ಅಂಗಾಗಗಳು ವೈಫಲ್ಯವಾಗಿ ಮರಣ ಹೊಂದುವ ಸಾಧ್ಯತೆಗಳು ಹೆಚ್ಚಿರುತ್ತದೆ.