ಗದಗ: ಸೂಕ್ತ ದಾಖಲೆ ಇಲ್ಲದೆ ಸಂಚಾರ ನಡೆಸುತ್ತಿದ್ದ ಖಾಸಗಿ ಬಸ್ ವೊಂದನ್ನು ಆರ್ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇದರ ಪರಿಣಾಮ ಬಸ್ ನಲ್ಲಿ ಸಂಚರಿಸುತ್ತಿದ್ದ ಆಂಧ್ರಪ್ರದೇಶದ ೪೯ ಪ್ರಯಾಣಿಕರು ಗದಗದ ಹೊರವಲಯದಲ್ಲಿ ಊಟ-ನಿದ್ರೆ ಇಲ್ಲದೆ ಪರದಾಡಿದ ಘಟನೆ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪುಲಿವೆಂದುಲಾ ಪಟ್ಟಣದ ಪ್ರಯಾಣಿಕರು ಮೂರು ರಾಜ್ಯಗಳಿಗೆ ೧೦ ದಿನಗಳ ಪ್ರವಾಸದಲ್ಲಿದ್ದರು, ಇದಕ್ಕಾಗಿ ಅವರು ಟ್ರಾವೆಲ್ ಏಜೆಂಟ್ ಲಕ್ಷ್ಮಿ ನಾರಾಯಣ್ ಮೂಲಕ ೧.೭ ಲಕ್ಷ ರೂಪಾಯಿಗೆ ಬಸ್ ಅನ್ನು ಬಾಡಿಗೆಗೆ ಪಡೆದಿದ್ದರು. ಎಪಿ ೦೩ ಟಿಇ ೮೫೨೦ ನೋಂದಣಿ ಸಂಖ್ಯೆಯ ಬಸ್ ರಾಯಚೂರಿನಿಂದ ಗದಗಕ್ಕೆ ಬರುತ್ತಿದ್ದಾಗ ಅಧಿಕಾರಿಗಳು ಮಂಗಳವಾರ ತಡರಾತ್ರಿ ಬಸ್ ನ್ನು ವಶಪಡಿಸಿಕೊಂಡಿದ್ದಾರೆ.
ಬಸ್’ಗೆ ಸರಿಯಾದ ದಾಖಲೆಗಳಿರಲಿಲ್ಲ. ಚಾಸಿಸ್ ನಂಬರ್ ಮತ್ತು ಇಂಜಿನ್ ನಂಬರ್ ನಕಲಿಯಾಗಿದೆ. ಇದರಿಂದ ಒಂದೇ ನಂಬರ್ ಬಳಸಿ ಎರಡು ಬಸ್ ಓಡಿಸುವ ಸಾಧ್ಯತೆ ಇದೆ. ಒಂದು ವೇಳೆ ಬಸ್ ಅಪಘಾತಕ್ಕೀಡಾದರೆ, ಅದನ್ನು ಗುರುತಿಸುವುದು ಕಷ್ಟವಾಗುತ್ತದೆ. ಹೀಗಾಗಿ, ಕಾನೂನು ಪ್ರಕಾರ ನಾವು ಬಸ್ ಅನ್ನು ವಶಪಡಿಸಿಕೊಂಡಿದ್ದೇವೆಂದು ಗದಗ ಆರ್ಟಿಒ ಅಧಿಕಾರಿ ಲಕ್ಷ್ಮೀಕಾಂತ ಅವರು ಹೇಳಿದ್ದಾರೆ.
ನಗರದಿಂದ ದೂರದಲ್ಲಿರುವ ಮಲ್ಲಸಮುದ್ರದ ಚಿಕ್ಕ ಗುಡ್ಡದ ಮೇಲೆ ಗದಗದ ಆರ್ಟಿಒ ಕಚೇರಿ ಇದ್ದು, ಅಧಿಕಾರಿಗಳು ಬಸ್ ವಶಕ್ಕೆ ಪಡೆದುಕೊಂಡ ಹಿನ್ನೆಲೆಯಲ್ಲಿ ಪ್ರವಾಸದಲ್ಲಿದ್ದ ಪ್ರವಾಸಿಗರು, ಬುಧವಾರ ಬೆಳಗಿನ ಜಾವದವರೆಗೂ ಹೊಟೇಲ್, ಸಣ್ಣ ಅಂಗಡಿ, ತಿನಿಸುಗಳು ಸಿಗದೇ ಹಾಗೂ ನಿದ್ರೆ ಇಲ್ಲದೆ ಪರದಾಡುವಂತಾಗಿತ್ತು.
ಬಸ್ ಚಾಲಕ ಹಾಗೂ ಮಾಲೀಕರು ಮಾಡಿದ ತಪ್ಪಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ಇತರೆ ಪ್ರಯಾಣಿಕರು ಪರದಾಡುವಂತಾಗಿತ್ತು.
ಇನ್ನು ಪ್ರವಾಸಿಗರು ಆರ್ಟಿಒ ಕಚೇರಿಯ ಸಿಬ್ಬಂದಿಗಳಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಲು ಯತ್ನಿಸಿದರೂ, ಭಾಷೆಯಯಿಂದ ಅಡ್ಡಿಯುಂಟಾಗಿದೆ. ನಂತರ ಪ್ರವಾಸಿಗರಿಗೆ ಬುಧವಾರ ಮಧ್ಯಾಹ್ನ ೩ ಗಂಟೆಯ ನಂತರವೇ ಮತ್ತೊಂದು ಬಸ್ ಸಿಕ್ಕಿದ್ದು, ಗೋವಾಗೆ ತೆರಳಿದ್ದಾರೆಂದು ತಿಳಿದುಬಂದಿದೆ.