ತುಂಗಾ ಮತ್ತು ಭದ್ರಾ ಜಲಾಶಯಗಳಲ್ಲಿ ನೀರಿನ ಕೊರತೆ
ಬಳ್ಳಾರಿ: ಈ ಹಿಂದೆ ತುಂಗಭದ್ರಾ ನೀರಾವರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ನವೆಂಬರ್ 10ರ ವರೆಗೆ ಕಾಲುವೆಗಳಿಗೆ ನೀರನ್ನು ಬಿಡಲು ಸೂಚನೆ ನೀಡಲಾಗಿದ್ದು, ಸದ್ಯದ ಬರ ಪರಿಸ್ಥಿತಿಯಲ್ಲಿ ನೀರಿನ ಕೊರತೆಯಿರುವುದರಿಂದ ನವೆಂಬರ್ 10ರ ನಂತರವೂ ಲಭ್ಯ ವಿರುವ ನೀರನ್ನು ಕಾಲುವೆಗಳಿಗೆ ಹರಿಸಬೇಕು ಎಂದು ತುಂಗಭದ್ರ ರೈತ ಸಂಘದ ಜಿಲ್ಲಾಧ್ಯಕ್ಷ ಜಿ.ಪುರುಷೋತ್ತಮಗೌಡ ಆಗ್ರಹ ವ್ಯಕ್ತಪಡಿಸಿದ್ದಾರೆ.

ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಾ ಜಲಶಯದ ಮೇಲ್ಬಾಗದಲ್ಲಿರುವ ಸಿಂಗಟಾಲೂರು ಹಾಗೂ ತುಂಗಾ ಮತ್ತು ಭದ್ರ ಜಲಾಶಯಗಳಲ್ಲಿ ನೀರಿನ ಕೊರತೆ ಇದ್ದು, ಅಲ್ಲಿನ ರೈತರ ಬೆಳೆಗಳಿಗೆ ನೀರಿನ ಕೊರತೆ ಆಗಲಿದೆ. ಈ ನಿಟ್ಟಿನಲ್ಲಿ ನೀರಾವರಿ ಸಚಿವ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆಶಿ ಅವರು ನವೆಂಬರ್ ತಿಂಗಳ 2 ರಂದು ತುಂಗಭದ್ರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದರು.
ಈ ಸಂಬಂಧ ಈಗಾಗಲೇ ಉಪಮುಖ್ಯಮಂತ್ರಿ ಡಿಕೆಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ಬಳಿ ನೀರಿನ ಸಮಸ್ಯೆ ಬಗ್ಗೆ ಅಲವತ್ತುಕೊಂಡಿದ್ದು, ಅಂದೇ ತುಂಗಭದ್ರ ಜಲಾಶಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಅವರಿಗೆ ದೂರವಾಣಿ ಕರೆಮಾಡಿ ತುಂಗಭದ್ರ ಜಲಾಶಯದಿಂದ ಹೆಚ್ ಎಲ್ ಸಿ ಕಾಲುವೆಗೆ ನವೆಂಬರ್ 10ರ ನಂತರವೂ ನೀರು ಹರಿಸಲು ಮೌಖಿಕ ಸೂಚನೆ ನೀಡಿದ್ದಾರೆ ಎಂದರು.

ಈ ನಿಟ್ಟಿನಲ್ಲಿ ಜಲಾಶಯದ ನೀರಿನ ಮಟ್ಟ ಸೇರಿದಂತೆ ಇನ್ನಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ತುಂಗಭದ್ರ ಜಲಾಶಯಕ್ಕೆ ಡಿಕೆಶಿ, ಸಚಿವ ನಾಗೇಂದ್ರ ಸೇರಿದಂತೆ ಇನ್ನಿತರು ಅಧಿಕಾರಿಗಳು, ಜನಪ್ರತಿನಿಧಿಗಳು ಆಗಮಿಸುತ್ತಿದ್ದು, ಅಂದು ರೈತರು ಭಾಗವಹಿಸಬೇಕು ಎಂದು ಈ ಮೂಲಕ ರೈತರಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ತುಂಗಭದ್ರ ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ವಿವಿಧ ರೈತ ಮುಖಂಡರುಗಳು ಉಪಸ್ಥಿತರಿದ್ದರು.