ಹಂದನಕೆರೆ ನಾಡಕಛೇರಿಯಲ್ಲಿ ಕರೆಂಟ್ ಹೋದರೆ ಸೇವೆ ಸ್ಥಗಿತ!

ಹಂದನಕೆರೆ ನಾಡಕಛೇರಿಯಲ್ಲಿ ಕರೆಂಟ್ ಹೋದರೆ ಸೇವೆ ಸ್ಥಗಿತ!ಇಲ್ಲಿ ಕರೆಂಟ್ ಇದ್ದರೆ ಮಾತ್ರ ಜನರಿಗೆ ಸೇವೆ ಸಿಗುತ್ತದೆ, ಸೌಲಭ್ಯಗಳು ದೊರೆಯುತ್ತವೆ. ಕರೆಂಟ್ ಹೋದರೆ ಎಲ್ಲವೂ ಸ್ಥಗಿತಗೊಂಡು ಸಿಬ್ಬಂದಿಗಳು ಕೈ ಕಟ್ಟಿ ಕೂತರೆ, ಸಾರ್ವಜನಿಕರು ಬಾಗಿಲಲ್ಲಿ ಕಾಯುತ್ತಾ ಕುಳಿತುಕೊಳ್ಳುವ ಅನಿವಾರ್ಯ ಕರ್ಮ ನಿರ್ಮಾಣವಾಗುತ್ತದೆ. ಹೌದು, ಇದು ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ನಾಡಕಛೇರಿಯ ದುಸ್ಥಿತಿ.
ನಾಡಕಛೇರಿ ಎಂದರೆ ಬೆಳಗ್ಗೆ ಬಾಗಿಲು ತೆಗೆದ ಕ್ಷಣದಿಂದಲೂ ಸಂಜೆ ಬಾಗಿಲು ಹಾಕುವವರೆವಿಗೂ ಜನಜಂಗುಳಿ ಇದ್ದದ್ದೇ. ದಿನನಿತ್ಯ ಸಾವಿರಾರು ಜನರು ಹಳ್ಳಿಗಳಿಂದ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ವಿವಿಧ ಕೆಲಸ ಕಾರ್ಯಗಳಿಗೆ ನಾಡ ಕಛೇರಿಗೆ ಬರುವುದು ಸಾಮಾನ್ಯ. ಹೀಗೆ ನಿತ್ಯವೂ ಕಿಕ್ಕಿರಿದು ಬರುವ ಜನರಿಗೆ ಸಮರ್ಪಕ ಸೇವೆ ನೀಡುವುದು ಅಧಿಕಾರಿಗಳ ಕರ್ತವ್ಯ. ಅದರಂತೆ ಇಲ್ಲಿನ ಸಿಬ್ಬಂದಿ ಉತ್ತಮ ಸೇವೆ ನೀಡಲು ಸಿದ್ಧರಿರುತ್ತರಾದರೂ ವಿದ್ಯುತ್ ಕಣ್ಣಮುಚ್ಚಾಲೆ ಆಟ ಇವರನ್ನು ಕೈ ಕಟ್ಟಿ ಕೂರುವಂತೆ ಮಾಡಿದೆ.


ನಿತ್ಯ ಸಾವಿರಾರು ಜನರು ಬರುವ ಹಂದನಕೆರೆ ಹೋಬಳಿ ನಾಡಕಚೇರಿಗೆ ಯುಪಿಎಸ್ ಅಥವಾ ಜನರೇಟರ್ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ವಿದ್ಯುತ್ ಬರುವವರೆಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಸಿಬ್ಬಂದಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಜನರಿಗೆ ನಾಳೆ ಬನ್ನಿ ಅಥವಾ ಕರೆಂಟ್ ಬರುವ ತನಕ ಕಾಯಿರಿ ನಿಮ್ಮ ಕೆಲಸ ಮಾಡಿ ಕೊಡುತ್ತೇವೆ ಎನ್ನುವುದು ಸಾಮಾನ್ಯವಾಗಿದೆ. ಇದರಿಂದ ಸಣ್ಣಪುಟ್ಟ ಕಾರ್ಯಗಳಿಗೂ ಜನಸಾಮಾನ್ಯರು ಅಲೆದಾಡುವಂತಾಗಿದೆ.
ಮೊದಲೇ ಹಂದಕೆರೆ ಹೋಬಳಿಯಲ್ಲಿ ರೈತರು, ಕೂಲಿಕಾರ್ಮಿಕರು ಹಾಗೂ ಹಿಂದುಳಿದ ವರ್ಗದವರು ಹೆಚ್ಚಾಗಿದ್ದಾರೆ. ಅಲ್ಲದೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿವುದು ಸಹ ಈ ಭಾಗದ ಜನರ ದೌರ್ಭಾಗ್ಯ. ಇವುಗಳ ಜೊತೆಗೆ ನಾಡಕಛೇರಿಯಲ್ಲಿ ವಿದ್ಯುತ್ ಸಮಸ್ಯೆ. ಇಷ್ಟೆಲ್ಲಾ ಸಮಸ್ಯೆಗಳ ಪರಿಣಾಮ ಒಂದು ಕೆಲಸಕ್ಕೆ ಅನೇಕ ಬಾರಿ ಅಲೆಯಲೇ ಬೇಕಿದೆ. ಇದರಿಂದ ಇಲ್ಲಿನ ಜನರ ನಿತ್ಯದ ಕೂಲಿ ಹಾಗೂ ಸಮಯ ಎರಡೂ ವ್ಯರ್ಥವಾಗುತ್ತಿದೆ.ಬೇಸಿಗೆ ಕಾಲದಲ್ಲಂತೂ ವಿದ್ಯುತ್ ಅಡಚಣೆ ಸಹಜವಾಗಿರುತ್ತದೆ. ಮಳೆಗಾಲದಲ್ಲಿ ಗಾಳಿಗೆ ಕಂಬಗಳು ಬೀಳುವ, ಕಂಬದ ಮೇಲೆ ಮರಗಳು ಬಿದ್ದು ಲೈನ್ ಕಟ್ ಆಗಿ ವಿದ್ಯುತ್ ಸಮಸ್ಯೆ ನಿರ್ಮಾಣವಾಗುತ್ತದೆ. ಇದಕ್ಕೆ ಬದಲಿ ವ್ಯವಸ್ಥೆ ಮಾಡದೆ ಇರುವುದು ದುರದೃಷ್ಟಕರವಾದ ಸಂಗತಿಯಾಗಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಯುಪಿಎಸ್ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

ನಿರಾಶೆಯಿಂದ ಹಿಂದಿರುಗುವುದು ಸಾಮಾನ್ಯ
ಪಹಣಿ ಪಡೆಯಲು, ಆಧಾರ್ ಕಾರ್ಡ್ ನೋಂದಣಿ, ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ಸೇರಿದಂತೆ ಇನ್ನಿತರ ಸೌಕರ್ಯಗಳಿಗಾಗಿ ಅರ್ಜಿ ಸಲ್ಲಿಸಲು ದಿನವಿಡೀ ವಿದ್ಯುತ್‍ಗಾಗಿ ಕಾದು ಕುಳಿತುಕೊಳ್ಳುವ ಅನಿರ್ವಾಯತೆ ಇದೆ. ಕಛೇರಿಗೆ ಬರುವ ಬಹಳಷ್ಟು ಮಂದಿ ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಇಲ್ಲಿನ ಅಧಿಕಾರಿಗಳು ಮೇಲಧಿಕಾರಿಗಳ ಕಡೆ ಬೆರಳು ತೋರಿಸಿ ಕೈ ಚಲ್ಲಿ ಕುಳಿತುಕೊಳ್ಳುತ್ತಾರೆ.

ಪ್ರಶಾಂತ್, ಗ್ರಾಪಂ ಸದಸ್ಯ, ದೊಡ್ಡಎಣ್ಣೇಗೆರೆ, ಹಂದನಕೆರೆ ಹೋಬಳಿ

Leave a Comment

Your email address will not be published. Required fields are marked *

Translate »
Scroll to Top