ಬೆಂಗಳೂರು: ಗಗನಕ್ಕೇರಿದ ಟೊಮ್ಯಾಟೋ ಬೆಲೆ ಇದೀಗ ಪಾತಾಳಕ್ಕೆ ಕುಸಿದಿದೆ. ಬೇಡಿಕೆ ಇಲ್ಲದ ಕಾರಣ ಇದೀಗ ಮತ್ತೆ ಪಾತಾಳಕ್ಕೆ ಕುಸಿದಿದೆ. ಟೊಮ್ಯಾಟೋ ಬೆಲೆ ಸರ್ವಕಾಲಿಕ 150 ರೂ ಗಡಿ ತಲುಪಿದ್ದ ದರ ಇದೀಗ 10 ರಿಂದ 15 ರೂಗೆ ಇಳಿಕೆಯಾಗಿದೆ.
ಬೇಡಿಕೆ ಇಲ್ಲದ ಕಾರಣ ಇದೀಗ ಬೆಳೆ ಬೆಳೆದ ರೈತರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. “ಇಲ್ಲದ ಬೇಡಿಕೆ- ಟೊಮ್ಯಾಟೋ ರಸ್ತೆಗೆ ಸುರಿದ ರೈತರು”. ಹೀಗೆ ಪ್ರತಿ ವರ್ಷ ಮಾಧ್ಯಮಗಳ ಸುದ್ದಿ ನೋಡುತ್ತೇವೆ. ಮೂರು ತಿಂಗಳ ಕಾಲ ಬೆಲೆ ಏರಿಕೆಯಾಗಿದ್ದ ದರ ಇದೀಗ ಮತ್ತೆ ಕುಸಿದಿದೆ. ಇತ್ತೀಚೆಗೆ ಟೊಮ್ಯಾಟೋ ಬೆಲೆ ಗಗನಕ್ಕೇರಿತ್ತು. ಅದೇನೂ ಹೊಸ ವಿದ್ಯಮಾನವಲ್ಲವಾದರೂ ಬೇಡಿಕೆ ಎಲ್ಲರೂ ನೋಡಿ ಎಲ್ಲರೂ ದಿಗ್ಭ್ರಾಂತರಾಗಿದ್ದರು. ಸಾಮಾನ್ಯವಾಗಿ ಮಾರುಕಟ್ಟೆಯ ಅಗತ್ಯ ಮತ್ತು ಪೂರೈಕೆಯಲ್ಲಿ ವ್ಯತ್ಯಯವಾದಾಗ ಬೆಲೆ ಏರುಪೇರಾಗುತ್ತದೆ.
ರೈತರ ಆದಾಯ ದ್ವಿಗುಣ ಮಾಡುವ ಬಗ್ಗೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿ ದಳವಾಯಿ ವರದಿಯಲ್ಲಿ ಟೊಮ್ಯಾಟೋ ಬೆಲೆ ಏರಿಕೆಗೆ ಕಾರಣಗಳ ಬಗ್ಗೆ ಒಂದಿಷ್ಟು ಸುಳಿವು ಸಿಗುತ್ತದೆ. ಈ ವರದಿಯಲ್ಲಿ ಆಲೂಗಡ್ಡೆ, ಈರುಳ್ಳಿ ಮತ್ತು ಟೊಮ್ಯಾಟೋ ಮಾರಾಟ ಮತ್ತು ಕೊಳ್ಳುವ ಪ್ರಕ್ರಿಯೆಯನ್ನು ಉತ್ತಮಗೊಳಿಸಲು ರೈತರಿಗೆ ಕೆಲವು ಸಲಹೆಗಳಿವೆ.
ಈ ವರದಿಯ ಪ್ರಕಾರ ರೈತರು ಶೇಕಡಾ 58 ರಷ್ಟು ಟೊಮ್ಯಾಟೋವನ್ನು ಖಾಸಗಿ ವರ್ತಕರಿಗೆ ಮಾರಾಟ ಮಾಡುತ್ತಾರೆ. ಟೊಮ್ಯಾಟೋ ಮೌಲ್ಯವರ್ಧನೆ ಮಾಡುವವರು ರೈತರಿಂದ ಕೊಳ್ಳುವುದಿಲ್ಲ. ಸಹಕಾರಿ ಸಂಸ್ಥೆಗಳಾಗಲಿ ಸರ್ಕಾರಗಳಾಗಲಿ ಈ ಬಗ್ಗೆ ಆಸ್ಥೆವಹಿಸದೆ ಇರುವುದರಿಂದ ರೈತರು ಖಾಸಗಿ ವರ್ತಕರಿಗೆ ಟೊಮ್ಯಾಟೋ ಮಾರಾಟಮಾಡಬೇಕಾಗಿದೆ. ಬೇಗ ಹಾಳಾಗಬಹುದಾದ ಈ ತರಕಾರಿ ಶೀಘ್ರವಾಗಿ ಮಾರಾಟ ಮಾಡಬೇಕು. ಇಲ್ಲವಾದರೆ ಹಾಳಾಗಿ ನಷ್ಟವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ದಾಸ್ತಾನಿಡುವ, ಸಾಗಣೆ ಮಾಡುವ ಖಾಸಗಿ ವರ್ತಕರು ಲಾಭ ಮಾಡುತ್ತಾರೆ.
ದಳವಾಯಿ ವರದಿ ಮತ್ತು ಶಿಫಾರಸ್ಸಿನ ಪ್ರಕಾರ ಕೋಲ್ಡ್ ಸ್ಟೋರೇಜ್, ಅತ್ಯಾಧುನಿಕ ಪ್ಯಾಕ್ ಹೌಸ್, ಸಂಗ್ರಹ ಕೇಂದ್ರಗಳು, ಸಾಗಾಣೆ ಮುಂತಾದ ಅಗತ್ಯ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿಲ್ಲ. ಜೊತೆಗೆ ಪ್ರತಿ ಹಂಗಾಮಿನಲ್ಲಿ ಮಾರುಕಟ್ಟೆಗೆ ಅಗತ್ಯವಿರುವ ಟೊಮ್ಯಾಟೋ ಪ್ರಮಾಣ, ಬೆಳೆಯ ಉತ್ಪಾದನೆ ಇತ್ಯಾದಿ ಅಂಶಗಳನ್ನು ಮೊದಲೇ ಅಂದಾಜು ಮಾಡಬಹುದಾದ ವ್ಯವಸ್ಥೆಯೂ ಜಾರಿಯಲ್ಲಿಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ಬೆಲೆ ಏರುಪೇರಾಗುತ್ತಿದೆ.
ಜೂನ್ 27, 2023 ರಂದು ಟೊಮ್ಯಾಟೋ ಪ್ರತಿ ಕೆ.ಜಿಗೆ 122 ರೂವರೆಗೆ ಏರಿತ್ತು. ಇದೇ ಸಂದರ್ಭದಲ್ಲಿ ರೈತರು ಖಾಸಗಿ ವರ್ತಕರಿಗೆ ಕೆಜಿಯೊಂದಕ್ಕೆ 10 ರೂಪಾಯಿಗೆ ಮಾರಾಟ ಮಾಡಬೇಕಾದ ಅನಿವಾರ್ಯತೆಯೂ ಇತ್ತು. ಕೋಲಾರದ ರೈತ ಉತ್ಪಾದನಾ ಸಂಘದ ರೈತ ಮೋಹನ್ ರೆಡ್ಡಿ ಹೇಳಿದಂತೆ ಇದೇ ವರ್ಷದ ಜನವರಿ-ಫೆಬ್ರವರಿಯಲ್ಲಿ ಟೊಮ್ಯಾಟೋ ಕೇವಲ 3 ರೂಪಾಯಿಗೆ ಕೆ.ಜಿಯಂತೆ ಮಾರಾಟ ಮಾಡಿದ್ದಾರೆ. ಪ್ರತಿ ಕೆ.ಜಿ ಟೊಮ್ಯಾಟೋ ಬೆಳೆಯಲು 8-10 ರೂಪಾಯಿ ಖರ್ಚು ಬರುತ್ತದೆ. ನಾವು ಹೂಡಿದ ಬಂಡವಾಳವೂ ಮಾರುಕಟ್ಟೆಯಲ್ಲಿ ಬಾರದ ದುಸ್ಥಿತಿ ಇದೆ ಎಂದೂ ಅಲವತ್ತು ಕೊಂಡಿದ್ದಾರೆ. ಅಲ್ಲದೆ ಎಲೆ ಸುರುಳಿಗೆ ಕಾರಣವಾಗುವ ವೈರಸ್ ನಿಂದ ಬೆಳೆ ಹಾನಿಯಾಗುತ್ತಿದೆ ಎಂದೂ ಹೇಳಿದ್ದಾರೆ.
ಇನ್ನು ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಚಂಗಲ್ ರೆಡ್ಡಿ ಅವರು ಹೇಳಿರುವಂತೆ ಕಳೆದ ಕೆಲ ತಿಂಗಳುಗಳಲ್ಲಿ ಮಳೆಯಿಂದಾಗಿ ಬೆಳೆ ನಷ್ಟವಾಗಿ ಉತ್ಪಾದನೆ ಕಡಿಮೆ ಆಗಿದೆ. ಟೊಮ್ಯಾಟೋ ಬೆಲೆ ಹೆಚ್ಚಾಗುವುದು ಪ್ರತಿ ವರ್ಷ ಸಾಮಾನ್ಯ. ಹೊಸ ಬೆಳೆ ಬರುವವರೆಗೆ ಬೆಲೆ ಏರುಪೇರು ಇದ್ದೇ ಇರುತ್ತದೆ. ಮತ್ತೆ ಸಹಜ ಸ್ಥಿತಿಗೆ ಬಂದಿದೆ ಎಂದೂ ಹೇಳಿದ್ದಾರೆ. ಅದು ಸಹಜ ಸ್ಥಿತಿಗೆ ಬರುವ ಲಕ್ಷಣಗಳು ಈಗಾಗಲೇ ಮಾರುಕಟ್ಟೆಯಲ್ಲಿ ಗೋಚರಿಸತೊಡಗಿವೆ.