ನಂಜುಂಡಪ್ಪ.ವಿ.
ಬೆಂಗಳೂರು: ಗ್ಯಾರೆಂಟಿ ಯೋಜನೆಗಳಿಗೆ ಸಂಪನ್ಮೂಲ ಒದಗಿಸಲು ಸಾಧ್ಯವಾಗದೇ ಬಸವಳಿದಿರುವ ರಾಜ್ಯ ಸರ್ಕಾರಕ್ಕೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ತೊಡಕಾಗಿ ಪರಿಣಮಿಸಿದೆ. ಸಚಿವರು, ಉನ್ನತಾಧಿಕಾರಿಗಳ ವರ್ಗಾವಣೆಯ ತೊಘಲಕ್ ಆಡಳಿತದಿಂದಾಗಿ ಇಲಾಖೆಯ ಆದಾಯ ಸಂಗ್ರಹಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಆರ್ಥಿಕ ವರ್ಷದ ಕೊನೆಯಲ್ಲಿ ವರ್ಗಾವಣೆ ಮತ್ತಿತರೆ ಕಾರಣಗಳಿಂದಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಆದಾಯ ಕ್ರೋಢೀಕರಣಕ್ಕೆ ಗರ ಬಡಿದಂತಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಂದೇ ಕಡೆ ಬೇರೂರಿರುವ 90 ಮಂದಿ ಸಬ್ ರಿಜಿಸ್ಟ್ರಾರ್ ಗಳನ್ನು ಕೌನ್ಸಿಲಿಂಗ್ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದೇ ಇದಕ್ಕೆಲ್ಲಾ ಮೂಲ ಕಾರಣವಾಗಿದೆ. ಇದು ನಾನಾ ಸಮಸ್ಯೆಗಳಿಗೆ ನಾಂದಿಯಾಗಿದೆ.
ಉನ್ನತ ಅಧಿಕಾರಿಗಳ ಮಾತು ಕೇಳದವರನ್ನು ಅಮಾನತು ಮಾಡುವ ಜೊತೆಗೆ ಕೆಲಸ ಮಾಡಲು ಅವಕಾಶ ಕಲ್ಪಿಸದೇ ಅನಗತ್ಯವಾಗಿ ಅಲೆದಾಡಿಸುವ ಪ್ರಯತ್ನಗಳು ನಡೆಯುತ್ತಿವೆ. ನಾಲ್ಕು ಮಂದಿ ಉಪನೋಂದಣಾಧಿಕಾರಿಗಳ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಇದು ಆಡಳಿತ ವೈಖರಿಗೆ ಕನ್ನಡಿ ಹಿಡಿದಂತಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಡಳಿತ ಅಕ್ಷರಶಃ ಕುಸಿದು ಬಿದ್ದಂತಾಗಿದೆ.
ಕಳೆದ ವರ್ಷದ ನವೆಂಬರ್ 4 ರಂದು ಕೌನ್ಸಿಲಿಂಗ್ ಮೂಲಕ ಮಧ್ಯಂತರ ವರ್ಷದಲ್ಲಿ ಯಾವುದೇ ನಿಯಮಗಳನ್ನು ರೂಪಿಸದೇ ಏಕಾಏಕಿ ಆದೇಶ ಹೊರಡಿಸಿರುವುದನ್ನು ವರ್ಗಾವಣೆಯಾದ ನೌಕರರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಮಧ್ಯಂತರ ಅವಧಿಯಲ್ಲಿ ವರ್ಗಾವಣೆ ಮಾಡಿರುವುದನ್ನು ಮನಗಂಡ ಹೈಕೋರ್ಟ್ ಡಿಸೆಂಬರ್ 16 ರಂದು ಎಲ್ಲಾ ಅರ್ಜಿದಾರರಿಗೆ ರಕ್ಷಣೆ ನೀಡಿ, ಸರ್ಕಾರ ಯಾವುದೇ ಹಿತರವಲ್ಲದ ತೀರ್ಮಾನ ಕೈಗೊಳ್ಳಬಾರದು. ವರ್ಗಾವಣೆಗೂ ಮುನ್ನ ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲಿಯೇ ಮುಂದುವರೆಸಬೇಕು ಎಂದು ನಿರ್ದೇಶನ ನೀಡಿತು. ಆದರೆ ಮೊದಲಿದ್ದ ಸ್ಥಳಗಳಲ್ಲಿ ಮುಂದುವರೆಸದೇ ನ್ಯಾಯಾಲಯದ ಆದೇಶವನ್ನು ಪರಿಪಾಲನೆ ಮಾಡದೇ ಇಲಾಖೆ ಅಧಿಕಾರಿಗಳು ಗೊಂದಲಕಾರಿ ನಿರ್ಧಾರಗಳನ್ನು ತೆಗೆದುಕೊಂಡರು.
ಕೌನ್ಸಲಿಂಗ್ ಮೂಲಕ ಆದ ವರ್ಗಾವಣೆ ಎಷ್ಟೊಂದು ಸಮಸ್ಯೆಗಳನ್ನು ತಂದೊಡ್ಡಿದೆ ಎಂದರೆ, ಜಗಣಿ ಉಪನೋಂದಣಾಧಿಕಾರಿ ಕಚೇರಿಯ ನವೀನ್ ಎಂ. ಎಂಬುವರು ಕೋಲಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣದಲ್ಲಿ ಇಲಾಖಾ ವಿಚಾರಣೆ ನಡೆದು ತಪ್ಪಿತಸ್ಥರು ಎಂದು ಸಾಬೀತಾಗಿತ್ತು. ಅವರನ್ನು ಉಪ ನೋಂದಣಾಧಿಕಾರಿಯಿಂದ ಪ್ರಥಮ ದರ್ಜೆ ಸಹಾಯಕರಾಗಿ ಹಿಂಬಡ್ತಿ ನೀಡಲಾಗಿತ್ತು. ಕೆಎಟಿ ಮತ್ತು ಹೈಕೋರ್ಟ್ ನಲ್ಲಿಯೂ ಹಿನ್ನೆಡೆಯಾಯಿತು. ಬಳಿಕ ಹೈಕೋರ್ಟ್ ಒಂದು ವಾರದ ಮಟ್ಟಿಗೆ ನವೀನ್ ಎಂ. ಅವರ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಒಂದು ವರ್ಷ ಕಳೆದರೂ ತಡೆಯಾಜ್ಞೆ ತೆರವುಗೊಳಿಸಿಲ್ಲ. ಹಿಂಬಡ್ತಿ ನೀಡಿಲ್ಲ. ತಡೆಯಾಜ್ಞೆ ತೆರವು ಮಾಡಲು ಯಾಕೆ ನ್ಯಾಯಾಲಯದ ಮೊರೆ ಹೋಗಿಲ್ಲ. ಇವರಿಗೆ ಒಂದು ನೀತಿ, ಉಳಿದವರಿಗೆ ಮತ್ತೊಂದು ರೀತಿಯ ನೀತಿ ಏಕೆ ಎಂಬ ಪ್ರಶ್ನೆ ಎದ್ದಿದೆ.
ಇದಾದ ಬಳಿಕ ಡಿಸೆಂಬರ್ 30 ರಂದು ಪುನಃ ಹೈಕೋರ್ಟ್ ಈ ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಲ್ಲಿ ಕೆಲಸ ನಿರ್ವಹಿಸಲು ಲಾಗಿನ್ ಐಡಿ ಮ್ಯಾಪಿಂಗ್ ಮಾಡಿಕೊಡಬೇಕು ಎಂದು ಆದೇಶಿಸಿತು. ಆದಾಗ್ಯೂ ನ್ಯಾಯಾಲಯದ ಆದೇಶವನ್ನು ಅಧಿಕಾರಿಗಳು ಪರಿಪಾಲಿಸದೇ ನಿರ್ಲಕ್ಷ್ಯ ತೋರಿದರು. ಇದರಿಂದ ಕೆರಳಿದ ನ್ಯಾಯಾಲಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರನ್ನು ನ್ಯಾಯಾಲಯಕ್ಕೆ ಕರೆಸಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವಂತೆ ಸೂಚಿಸಿತು. ಆದರೆ ಇಲಾಖಾ ನೌಕರರು ಹಿರಿಯ ಅಧಿಕಾರಿಯ ಮೇಲಿನ ಭಯದಿಂದಾಗಿ ನ್ಯಾಯಾಂಗ ನಿಂದನೆಯ ದುಸ್ಸಾಹಸಕ್ಕೆ ಕೈ ಹಾಕಲಿಲ್ಲ.
ಬಳಿಕ 2025 ರ ಜನವರಿ 18 ರಂದು ಈ ಹಿಂದೆ ಹೊರಡಿಸಿದ್ದ ಕೌನ್ಸೆಲಿಂಗ್ ಆಧಾರಿತ ವರ್ಗಾವಣೆ ಸಂಪೂರ್ಣ ಪಟ್ಟಿಗೆ ತಡೆಯಾಜ್ಞೆ ನೀಡಿತು. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿಯವರು ಒಂದಷ್ಟು ನೌಕರರನ್ನು ಸುಖಾಸುಮ್ಮನೆ ಟಾರ್ಗೆಟ್ ಮಾಡಿರುವುದಾಗಿ ಆರೋಪಿಸಲಾಗಿದೆ.
ಇದಾದ ಬಳಿಕ ಮತ್ತಷ್ಟು ಗೊಂದಲಗಳು ಉಂಟಾಗಿವೆ. 90 ಜನ ಅಧಿಕಾರಿಗಳು ಕಾನೂನು ಬಾಹಿರವಾಗಿ ಅದೇ ಕಚೇರಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿರುವ ಮಾಹಿತಿ ಇದೆ. ಇದಲ್ಲದೇ ಕೌನ್ಸೆಲಿಂಗ್ ಮೂಲಕ ವರ್ಗಾವಣೆಯಾದವರೂ ಸಹ ಹೈಕೋರ್ಟ್ ತಡೆಯಾಜ್ಞೆ ಇದ್ದರೂ ಕಾನೂನು ಬಾಹಿರವಾಗಿ ಕೆಲಸ ಮಾಡಿ ದಾಸ್ತಾವೇಜುಗಳನ್ನು ನೋಂದಣಿ ಮಾಡಿರುವ ಬಗ್ಗೆಯೂ ಆರೋಪಗಳು ಕೇಳಿ ಬಂದಿವೆ. ಇಂತಹ ದಾಸ್ತಾವೇಜುಗಳು ಸಿಂಧುತ್ವ ಕಳೆದುಕೊಂಡಿವೆ. ಇದಕ್ಕೆಲ್ಲಾ ಆಡಳಿತದ ಲೋಪವೇ ಕಾರಣವಾಗಿದೆ.
ಮತ್ತೊಂದು ವಿಶೇಷವೆಂದರೆ ಹೈಕೋರ್ಟ್ ಮುಂದೆ ಎ.ಎ.ಜಿ ಅವರು ಲಾಗಿನ್ ಐಡಿ ಮ್ಯಾಪಿಂಗ್ ಮಾಡುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಇಷ್ಟಾದರೂ ಕೆಲವು ನಿರ್ದಿಷ್ಟ ಅಧಿಕಾರಿಗಳಿಗೆ ತೊಂದರೆ ಕೊಡುವ ಸಲುವಾಗಿಯೇ ಲಾಗಿನ್ ಐಡಿ ಮ್ಯಾಪಿಂಗ್ ಮಾಡಿಲ್ಲ. ಇದರಿಂದ 17 ಮಂದಿ ಉಪನೋಂದಣಾಧಿಕಾರಿಗಳು ಈಗಲೂ ಬಾಧಿತರಾಗಿದ್ದಾರೆ. ಕೃಷ್ಣ ಧೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ಇವರ ಮನವಿಯನ್ನು ಪರಿಗಣಿಸಿ ಮಾರ್ಚ್ 18 ರಂದು 17 ಜನರಿಗೆ ಲಾಗಿನ್ ಕೊಡಬೇಕು ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಆದರೂ ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿಲ್ಲ. ಇಷ್ಟೆಲ್ಲಾ ತೊಂದರೆಗಳನ್ನು ನೌಕರರು ಎದುರಿಸುತ್ತಿದ್ದರೂ ಸಹ ಕಂದಾಯ ಸಚಿವ ಕೃಷ್ಣ ಭೈರೇಗೌಡ ಯಾವುದೇ ಕ್ರಮ ವಹಿಸದೇ ನಿರ್ಲಕ್ಷ್ಯ ತೋರಿದ್ದಾರೆ.
ಕೌನ್ಸೆಲಿಂಗ್ ಮೂಲಕ ಆದ ವರ್ಗಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ತಿಂಗಳು ಕಳೆದರೂ ಉಪ ನೋಂದಣಾಧಿಕಾರಿಗಳಿಗೆ ಯಾವ ಕಾರಣಕ್ಕೆ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸುತ್ತಿಲ್ಲ. ನ್ಯಾಯಾಲಯದ ಆದೇಶಕ್ಕೆ ಯಾವ ಕಿಮ್ಮತ್ತಿದೆ. ಉನ್ನತ ಅಧಿಕಾರಿಗಳು ತಮಗೆ ತೋಚಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಬಹುದೇ?. ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವಿಲ್ಲದಂತಾಗಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಡಳಿತ ಗೊಂದಲ, ಗೋಜಲುಗಳಿಗೆ ಕಾರಣವಾಗಿದೆ. ಹೇಳುವವರು ಇಲ್ಲ. ಕೇಳುವವರು ಮೊದಲೇ ಇಲ್ಲದಂತಾಗಿದೆ.
ಐದು ವರ್ಷಗಳಿಗೂ ಹೆಚ್ಚು ಕಾಲ ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿರುವವರನ್ನು ವರ್ಗಾವಣೆ ಮಾಡಿದಾಗ ಇದೊಂದು ಉತ್ತಮ ನಿರ್ಧಾರ ಎಂಬ ಮೆಚ್ಚುಗೆ ಕೇಳಿ ಬಂತು. ಆದರೆ ಇದಕ್ಕೆ ಸೂಕ್ತ ಸಿದ್ಧತೆ ಮಾಡದೇ, ನಿಯಮಗಳನ್ನು ರೂಪಿಸದೇ ಇದ್ದ ಕಾರಣದಿಂದ ಉಪ ನೋಂದಣಾಧಿಕಾರಿಗಳು ತೊಂದರೆ ಎದುರಿಸುವಂತಾಗಿದೆ. ಇ – ಖಾತಾ ಮತ್ತಿತರೆ ಕಾರಣದಿಂದ ಇಲಾಖೆಯ ಆದಾಯದ ಮೇಲೆ ಭಾರೀ ಪ್ರತಿಕೂಲ ಪರಿಣಾಮ ಬೀರಿರುವ ಸಂದರ್ಭದಲ್ಲಿ ವಿವೇಚನೆ ಇಲ್ಲದ ಈ ನಿರ್ಧಾರ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ.