ಇಂದು ಉಪರಾಷ್ಟ್ರಪತಿ ಚುನಾವಣೆ : ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಗೆಲುವು ಬಹುತೇಕ ಖಚಿತ

Kannada Nadu
ಇಂದು ಉಪರಾಷ್ಟ್ರಪತಿ ಚುನಾವಣೆ : ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಗೆಲುವು ಬಹುತೇಕ ಖಚಿತ

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಮಂಗಳವಾರ(ಸೆ.9)ದAದು ನಡೆಯಲಿದ್ದು, ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಎನ್‌ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ, ತಮಿಳುನಾಡು ಮೂಲದ ಸಿ.ಪಿ.ರಾಧಾಕೃಷ್ಣನ್ ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ, ತೆಲಂಗಾಣ ಮೂಲದ ಬಿ.ಸುದರ್ಶನ ರೆಡ್ಡಿ ಕಣದಲ್ಲಿದ್ದಾರೆ. ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನು ನಿರ್ಧರಿಸದ 17 ಸಂಸದರನ್ನು ಹೊರತುಪಡಿಸಿ, ಉಳಿದ ಎಲ್ಲ ಸಂಸದರು ತಮ್ಮ ಪಕ್ಷಗಳ ಆಧಾರದ ಮೇಲೆ ಮತ ಚಲಾಯಿಸಿದರೆ ರಾಧಾಕೃಷ್ಣನ್ ಅವರು ರೆಡ್ಡಿ ಅವರ ವಿರುದ್ಧ 439-324 ಮತಗಳೊಂದಿಗೆ ಮುನ್ನಡೆ ಪಡೆದುಕೊಳ್ಳಲಿದ್ದಾರೆ.

ಪ್ರಸ್ತುತ ಮತದಾರರ ಸಂಖ್ಯೆ 781 (ರಾಜ್ಯಸಭೆ, ಲೋಕಸಭೆಯ ಸದಸ್ಯರು) ಆಗಿದೆ. ಮತದಾರರ ಪಟ್ಟಿ ಸಿದ್ಧವಾದ ಬಳಿಕ ಶಿಬು ಸೊರೇನ್ ಅವರು ನಿಧನರಾದರು. ಅವರ ಸ್ಥಾನವೂ ಸೇರಿದಂತೆ ಒಟ್ಟು ಏಳು ಸ್ಥಾನಗಳು ಖಾಲಿ ಇವೆ.

ಎನ್‌ಡಿಎ ಅಥವಾ ಐಎನ್‌ಡಿಐಎ ಬಣದ ಭಾಗವಲ್ಲದ ಪಕ್ಷಗಳಲ್ಲಿ, ಸಂಸತ್ತಿನಲ್ಲಿ 11 ಸದಸ್ಯರನ್ನು ಹೊಂದಿರುವ ವೈಎಸ್‌ಆರ್‌ಸಿಪಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದೆ, ಆದರೆ ಬಿಜೆಡಿ ಮತ್ತು ಬಿಆರ್‌ಎಸ್ ಮತದಾನದಿಂದ ಹೊರಗುಳಿಯಲು ನಿರ್ಧರಿಸಿವೆ. ಪ್ರಸ್ತುತ ಚುನಾವಣಾ ಕಾಲೇಜಿನ ಬಲ 781 (ರಾಜ್ಯಸಭೆಯಿಂದ 238 ಮತ್ತು ಲೋಕಸಭೆಯಿಂದ 542; ಒಂದು ಲೋಕಸಭೆ ಮತ್ತು ಆರು ರಾಜ್ಯಸಭಾ ಸ್ಥಾನಗಳು ಪ್ರಸ್ತುತ ಖಾಲಿ ಇವೆ). ಇದು ಬಹುಮತದ ಸಂಖ್ಯೆಯನ್ನು 391 ಕ್ಕೆ ಇಳಿಸುತ್ತದೆ.

ಎಸ್‌ಎಡಿಯ ಒಬ್ಬ ಸದಸ್ಯ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದರೂ, ಲೋಕಸಭೆಯಲ್ಲಿರುವ ಏಳು ಸ್ವತಂತ್ರ ಸದಸ್ಯರಲ್ಲಿ ಮೂವರು ತಮ್ಮ ನಿರ್ಧಾರ ತಿಳಿಸಿಲ್ಲ. ಮತ್ತೊಂದು ಬೆಳವಣಿಗೆಯೆಂದರೆ, ಆರ್‌ಎಲ್‌ಪಿ ಸಂಸದ ಹನುಮಾನ್ ಬೇನಿವಾಲ್ ಮತ್ತು ಆಜಾದ್ ಸಮಾಜ ಪಕ್ಷದ ಸಂಸದ ಚಂದ್ರಶೇಖರ್ ಆಜಾದ್ ಸಂಜೆ ತಡವಾಗಿ ಐಎನ್‌ಡಿಐಎ ಬಣದ ಅಭ್ಯರ್ಥಿ ರೆಡ್ಡಿ ಅವರನ್ನು ಭೇಟಿಯಾದರು, ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಗೋಪ್ಯ ಮತದಾನ ಆದ್ದರಿಂದ ಅಡ್ಡ ಮತದಾನದ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇದರ ನಿರೀಕ್ಷೆಯಲ್ಲಿರುವ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಯ ಮತಗಳಿಕೆಯಲ್ಲಿ ಆಗಬಹುದಾದ ಏರಿಳಿಕೆ ಕುರಿತು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಸಂಜೆ 6ಕ್ಕೆ ಮತ ಎಣಿಕೆ
ಮತದಾನ ಬೆಳಿಗ್ಗೆ 10ರಿಂದ ಸಂಜೆ 5ರವರೆಗೂ ನಡೆಯಲಿದೆ. ಸಂಜೆ 6 ಗಂಟೆಗೆ ಮತ ಎಣಿಕೆ ನಡೆಯಲಿದ್ದು ಬಳಿಕ ಫಲಿತಾಂಶ ಪ್ರಕಟವಾಗಲಿದೆ.

ಕಾಡುತ್ತಿರುವ ಅಮಾನ್ಯ ಮತಗಳು
ಪ್ರಾಶಸ್ತ್ಯ ಮತದಾನ ಪದ್ಧತಿಯಡಿ ನಡೆಯುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು ಈ ಹಿಂದೆ ಅಮಾನ್ಯಗೊಂಡದ್ದಿದೆ. ಹೀಗಾಗಿಯೇ ಸಂಸದರಿಗೆ ಈ ಮತದಾನ ಪದ್ಧತಿಯ ಬಗ್ಗೆ ಸೂಕ್ತ ತರಬೇತಿ ನೀಡಲು ಆಡಳಿತ ಮತ್ತು ವಿರೋಧ ಪಕ್ಷಗಳ ಮುಖಂಡರು ಕಾಳಜಿವಹಿಸಿದ್ದಾರೆ. ಈ ಪದ್ಧತಿಯಡಿ ಹೇಗೆ ಮತ ಚಲಾಯಿಸಬೇಕು ಎಂಬುದರ ಕುರಿತು ಬಿಜೆಪಿ ಈಗಾಗಲೇ ತನ್ನ ಸಂಸದರಿಗೆ ತರಬೇತಿ ನೀಡಿದೆ. ವಿರೋಧ ಪಕ್ಷವು ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ಸೋಮವಾರ ಅಣಕು ಮತದಾನ ಏರ್ಪಡಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನ ಅನೆಕ್ಸ್ನಲ್ಲಿ ರಾತ್ರಿ ಭೋಜನ ಕೂಟ ಆಯೋಜಿಸಿದ್ದಾರೆ. 2017 ಮತ್ತು 2022ರ ಚುನಾವಣೆಯಲ್ಲಿ ಕ್ರಮವಾಗಿ 11 ಮತ್ತು 15 ಮತಗಳು ಅಮಾನ್ಯವಾಗಿದ್ದವು. 1997ರಲ್ಲಿ ಅತ್ಯಧಿಕ ಅಂದರೆ 46 ಮತಗಳು ಅಮಾನ್ಯಗೊಂಡಿದ್ದವು.

ತೀವ್ರ ಸ್ಪರ್ಧೆ
ವಿರೋಧ ಪಕ್ಷಗಳ ಎಲ್ಲ 324 ಮತಗಳು ಚಲಾವಣೆಯಾಗಿ ಅದರ ಅಭ್ಯರ್ಥಿ ಸೋತರೂ ಅದು ಇಲ್ಲಿಯವರೆಗೆ ಸೋತ ಅಭ್ಯರ್ಥಿ ಪಡೆದ ಅತ್ಯಧಿಕ ಮತಗಳಾಗಿರುತ್ತವೆ. 2002ರಲ್ಲಿ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸುಶೀಲ್ ಕುಮಾರ್ ಶಿಂಧೆ ಅವರು 305 ಮತಗಳನ್ನು ಪಡೆದು ಸೋತಿದ್ದರು. ಆ ಚುನಾವಣೆಯಲ್ಲಿ ಭೈರೋನ್ ಸಿಂಗ್ ಶೆಖಾವತ್ ಅವರು 454 ಮತಗಳನ್ನು ಪಡೆದು ಗೆದ್ದಿದ್ದರು. ಇದು ಉಪರಾಷ್ಟ್ರಪತಿ ಸ್ಥಾನಕ್ಕೆ ಇಲ್ಲಿಯವರೆಗೂ ನಡೆದಿರುವ ಅತ್ಯಂತ ಬಿಗಿಯಾದ ಚುನಾವಣೆ ಎಂದೇ ಗುರುತಿಸಲಾಗಿದೆ. 2022ರ ಚುನಾವಣೆಯಲ್ಲಿ ಟಿಎಂಸಿ ಸಂಸದರು ಮತಚಲಾಯಿಸದಿದ್ದರೂ ಜಗದೀಪ್ ಧನಕರ್ ಅವರು 528 ಮತಗಳನ್ನು ಪಡೆದು ಗೆದ್ದಿದ್ದರು. ಅವರ ಹಿಂದಿನ ಚುನಾವಣೆಯಲ್ಲಿ ಎಂ. ವೆಂಕಯ್ಯ ನಾಯ್ಡು ಅವರು 516 ಮತಗಳನ್ನುಗಳಿಸಿ ಉಪರಾಷ್ಟ್ರಪತಿಯಾಗಿದ್ದರು. ಆದರೆ ಈ ಬಾರಿ ಎನ್‌ಡಿಎ ಅಭ್ಯರ್ಥಿ 500 ಮತಗಳನ್ನು ದಾಟುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";