"ದುಡಿಮೆಯಲ್ಲಿರುವ ಪಾಲಕರಿಗೆ ಸ್ತನ್ಯಪಾನದಲ್ಲಿ ಸಕ್ರಿಯಗೊಳಿಸಲು ಬದಲಾವಣೆಯನ್ನುಂಟು ಮಾಡುವುದೇ" ಈ ವರ್ಷದ ಘೋಷವಾಕ್ಯ
ತಾಯಿ – ಮಗುವಿನ ಆರೋಗ್ಯದ ದೃಷ್ಟಿಯಿಂದ ಹಾಗೂ ಇನ್ನಿತರೆ ಕಾರಣಗಳಿಂದ ಮಗುವಿಗೆ ಕನಿಷ್ಠ ಒಂದರಿಂದ ಗರಿಷ್ಠ 2-2.5 ವರ್ಷದವರೆಗೂ ಸ್ತನ್ಯಪಾನ ಮಾಡಿಸುವುದು ಬಹಳ ಒಳ್ಳೆಯದು ಎಂಬುದು ತಜ್ಞ ವೈದ್ಯರ ಅಭಿಮತ. ಒಬ್ಬ ಮಗುವಿನ ಭವಿಷ್ಯದ ಆರೋಗ್ಯವನ್ನು ನಿರ್ಧರಿಸುವ ಶಕ್ತಿ, ಅದು ಚಿಕ್ಕಂದಿನಲ್ಲಿ ಸೇವಿಸಿದ ತಾಯಿಹಾಲಿಗಿದೆ ಎನ್ನುತ್ತದೆ ಆರೋಗ್ಯ ಇಲಾಖೆ.
ತಮ್ಮ ಮಗುವಿಗೆ ಕನಿಷ್ಠ ಒಂದು ವರ್ಷಕ್ಕೂ ಹೆಚ್ಚು ಕಾಲ ಸ್ತನ್ಯಪಾನ ಮಾಡಿಸುವ ತಾಯಿಯೂ ಸ್ತನ ಕ್ಯಾನ್ಸರ್ ನಂಥ ಮಾರಕ ರೋಗಗಳಿಗೆ ತುತ್ತಾಗುವುದಿಲ್ಲ. ಅದಕ್ಕೆಂದೇ ಸ್ತನ್ಯಪಾನಕ್ಕೆ ಹೆಚ್ಚಿನ ಒತ್ತು ನೀಡುವಂತೆ ಪ್ರತಿ ತಾಯಿಗೂ ವೈದ್ಯರು ಸಲಹೆ ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವೃತ್ತಿ ನಿರತ ತಾಯಿಯರು ಒಂದು ವರ್ಷಕ್ಕೂ ಮೊದಲೇ ಮಕ್ಕಳು ಸ್ತನ್ಯಪಾನದಿಂದ ವಂಚಿತರಾಗುವಂತೆ ಮಾಡುತ್ತಿರುವುದರಿಂದ ಇಂದಿನ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಾತ್ರವಲ್ಲ ಚಿಕ್ಕ ವಯಸ್ಸಿನಿಂದಲೇ ತಾಯಿಯರೂ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಈ ನಿಟ್ಟಿನಲ್ಲಿ ಆಗಸ್ಟ್ 1 ರಿಂದ 7 ನೇ ತಾರಿಖಿನವರೆಗಿನ ಒಂದು ವಾರವನ್ನು ಸ್ತನ್ಯಪಾನ ಸಪ್ತಾಹ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಸ್ತನ್ಯಪಾನದ ಮಹತ್ವವನ್ನು ಮನದಟ್ಟು ಮಾಡಿಕೊಡಲಾಗುತ್ತದೆ. ವರ್ಲ್ಡ್ ಅಲಿಯನ್ಸ್ ಫಾರ್ ಬ್ರೆಸ್ಟ್ ಫೀಡೀಂಗ್ ಆಕ್ಷನ್ 1992 ರಿಂದ ಈ ಸಪ್ತಾಹವನ್ನು ಆಚರಿಸುತ್ತಿದ್ದು, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಸಹ ಕೈಜೋಡಿಸಿವೆ. ಪ್ರತೀ ವರ್ಷ ಒಂದೊಂದು ಘೋಷವಾಕ್ಯದೊಂದಿಗೆ ಸಪ್ತಾಹ ಮಾಡುತ್ತಿದ್ದು, ಈ ವರ್ಷದ ಘೋಷವಾಕ್ಯ “ದುಡಿಮೆಯಲ್ಲಿರುವ ಪಾಲಕರಿಗೆ ಸ್ತನ್ಯಪಾನದಲ್ಲಿ ಸಕ್ರಿಯಗೊಳಿಸಲು ಬದಲಾವಣೆಯನ್ನುಂಟು ಮಾಡುವುದು ಆಗಿದೆ.
ಸ್ತನಪಾನ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯ. ಸ್ತನಪಾನದಿಂದ ಪ್ರತಿವರ್ಷ ವಿಶ್ವದಾದ್ಯಂತ ೮ ಲಕ್ಷ ಜೀವ ಉಳಿಸಲು ಸಾಧ್ಯವಾಗುತ್ತಿದೆ, ಅದರಲ್ಲೂ 6 ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ ಪೋಷ ಕಾಂಶದ ಕೊರತೆ ಉಂಟಾಗ ದಿರಲು ಹಾಗೂ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ತನಪಾನ ಅವಶ್ಯಕ.
ಇನ್ನು ತಾಯಿಯಲ್ಲಿ ಸ್ತನ ಕ್ಯಾನ್ಸರ್, ಟೈಪ್ 2 ಮಧು ಮೇಹ, ಹೃದಯ ಸಮಸ್ಯೆ ತಡೆ ಗಟ್ಟುವಲ್ಲಿ ಸ್ತನಪಾನ ಸಹಾಯಕಾರಿ ಯಾಗಿದೆ. ಸ್ತನಪಾನ ಮಾಡುವುದರಿಂದ ಸ್ತನ ಕ್ಯಾನ್ಸರ್ ತಡೆಗಟ್ಟಬಹುದು.
ವಿಶ್ವ ಆರೋಗ್ಯ ಸಂಸ್ಥೆಯು ಮಗು ಹುಟ್ಟಿದ ಒಂದು ಗಂಟೆಯ ಒಳಗಾಗಿ ಸ್ತನಪಾನ ಮಾಡಬೇಕು ಹಾಗೂ 6 ತಿಂಗಳವರೆಗೆ ಸ್ತನ್ಯಪಾನ ನೀಡಲೇಬೇಕು, 6 ತಿಂಗಳ ನಂತರ ಸ್ತನಪಾನ ನೀಡುತ್ತಲೇ ಮಕ್ಕಳಿಗೆ ಬೇರೆ ಆಹಾರ ಪ್ರಾರಂಭಿಸಬೇಕು, ಎರಡು ವರ್ಷ ಹಾಗೂ ಅದಕ್ಕೂ ಅಧಿಕ ಸಮಯ ಸ್ತನಪಾನ ಮಾಡುವುದು ಮಕ್ಕಳ ಬೆಳವಣಿಗೆಯ ದೃಷ್ಟಿಯಿಂದ ಅವಶ್ಯಕ ಎಂದಿದೆ.
ಅದೇ ರೀತಿ ಜುಲೈ 13, 2016 ರಲ್ಲಿ ಬ್ರೆಸ್ಟ್ ಮಿಲ್ಕ್ ಬ್ಯಾಂಕ್ ಎಂಬ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದರಲ್ಲಿ ತಾಯಿ ತನ್ನ ಮಗುವಿಗೆ ನೀಡಿ, ಅಧಿಕವಾದ ಹಾಲನ್ನು ಮಿಲ್ಕ್ ಬ್ಯಾಂಕ್‌ಗೆ ದಾನ ಮಾಡಬಹುದಾಗಿದೆ.
ಎದೆಹಾಲು ಯಾರು ದಾನ ಮಾಡಬಹುದು?
ಮಗು ಎನ್‍ಐಸಿಯು ನಲ್ಲಿದ್ದರೆ, ಮಗುವನ್ನು ಕಳೆದುಕೊಂಡ ತಾಯಿ, ಆಸ್ಪತ್ರೆಯ ಸಿಬ್ಬಂದಿಯಾಗಿದ್ದು ಮಗುವಿಗೆ ಎದೆ ಹಾಲುಣಿಸುತ್ತಿದ್ದರೆ ಹಾಗೂ ಆಸಕ್ತ ತಾಯಿಂದಿರು ಹಾಲನ್ನು ದಾನ ಮಾಡಬಹುದಾಗಿದೆ.
ಪ್ರತಿ ತಾಯಂದಿರು ತಿಳಿದುಕೊಳ್ಳಬೇಕಾದ ಮಾಹಿತಿ
Ø ಮಗು ಜನಿಸಿದ ಅರ್ಧ ಗಂಟೆಯಿಂದ 1 ಗಂಟೆಯೊಳಗೆ ಮೊದಲ ಬಾರಿಗೆ ಎದೆಹಾಲುಣಿಸಬೇಕು.
Ø ಮೊದಲ ೩ ದಿನ ಬರುವ ಗೀಬಿನ ಹಾಲನ್ನು (ಕೊಲೊಸ್ಟ್ರೋಮ್) ಮಗುವಿಗೆ ನೀಡಲೇಬೇಕು.
Ø ಮೊದಲು ಬರುವ ಹಳದಿ ವರ್ಣದ ಗಟ್ಟಿಹಾಲು ಮಗುವಿಗೆ ಮೊದಲ ಲಸಿಕೆ ಇದ್ದಂತೆ.
Ø ಕೊಲೊಸ್ಟ್ರೋಮ್‌ನಲ್ಲಿ ಪೌಷ್ಟಿಕಾಂಶ ಉತ್ಕೃಷ್ಟವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಮುಂಬರುವ ದೀರ್ಘಕಾಲಿನ ಕಾಯಿಲೆಗಳನ್ನು ತಡೆಗಟ್ಟುತ್ತದೆ.
Ø 6 ತಿಂಗಳು ತುಂಬುವವರೆಗೂ ಕೇವಲ ಎದೆಹಾಲನ್ನೇ ಕೊಡಬೇಕು. (ವೈದ್ಯರು ತಿಳಿಸಿದ ಔಷಧಗಳನ್ನು ಹೊರತು ಪಡಿಸಿ) ಎಂತಹ ಕಡುಬೇಸಿಗೆ ಇದ್ದರೂ ನೀರನ್ನು ಕುಡಿಸುವ ಅವಶ್ಯಕತೆ ಇರುವುದಿಲ್ಲ.
Ø ಎದೆಹಾಲನ್ನು ಹೊರತುಪಡಿಸಿ ಹರಳೆಣ್ಣೆ, ಜೇನುತುಪ್ಪ, ಸಕ್ಕರೆನೀರು, ಹಸುವಿನ ಹಾಲು, ಪೌಡರ್ ಹಾಲನ್ನು ಕೊಡಬಾರದು.
Ø 6 ತಿಂಗಳು ತುಂಬಿದ ನಂತರ ಎದೆಹಾಲಿನೊಂದಿಗೆ ಪೂರಕ – ಪೋಷಕ ಮೆದು ಆಹಾರ ಆರಂಭಿಸಬೇಕು.
Ø ಮಗುವಿಗೆ 2 ವರ್ಷ ತುಂಬವ ತನಕ ಎದೆಹಾಲನ್ನು ಮುಂದುರಿಸಬೇಕು. ಇದು ಮಗುವಿನ ಮೆದುಳು ಬೆಳವಣಿಗೆಗೂ ಅವಶ್ಯಕ ಹಾಗೂ ಮಗುವಿನ ಬುದ್ಧಿಮಟ್ಟವನ್ನು ಹೆಚ್ಚಿಸುತ್ತದೆ.
Ø ಸೂಕ್ತ ರೀತಿಯಲ್ಲಿ ಎದೆಹಾಲುಣಿ ಸುವುದರಿಂದ ತಾಯಿ ಬೇಗ ಗರ್ಭ ಧರಿಸುವುದಿಲ್ಲ. ಇದು ನೈಸರ್ಗಿಕ ಕುಟುಂಬ ಯೋಜನೆ ಇದ್ದಂತೆ.
Ø 2 ವರ್ಷ ಸರಿಯಾಗಿ ಎದೆ ಹಾಲುಣಿಸಿದ ತಾಯಿಂದಿರಿಗೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಬರುವುದು ಅಪರೂಪ
Ø ಸ್ತನ್ಯಪಾನ ಮಾಡಿಸುವ ತಾಯಿ-ಮಗುವಿನ ಬಾಂಧವ್ಯ ಸುಮಧುರವಾಗಿರುತ್ತದೆ.
Ø ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ದೇಶದ ಆರ್ಥಿಕತೆಗೂ ಸಹಾಯಕ.
ಸ್ಯನ್ಯಪಾನಕ್ಕಿರುವ ಅಡ್ಡಿಯಾಗುವ ಅಂಶಗಳು
§ ಮೊದಲ 3 ದಿನ ಬರುವ ಗೀಬಿನ ಹಾಲು ಕೆಟ್ಟ ಹಾಲು, ಕೊಡಬಾರದೆಂಬ ಮೂಢನಂಬಿಕೆ.
§ ಮಗುವಿನ ಹೊಟ್ಟೆ ಸ್ವಚ್ಛವಾಗಲಿ ಎಂದು ಆರಂಭದ 2 ದಿನ ಹರಳೆಣ್ಣೆ ಚೀಪಿಸುವ ಪದ್ಧತಿ.
§ ಕೇವಲ ಎದೆಹಾಲೇ 6 ತಿಂಗಳು ಸಾಕಾಗುವುದಿಲ್ಲ ಎಂಬ ಭಾವನೆ.
§ ಕುಟುಂಬದಲ್ಲಿ ತಾಯಿಗೆ ಮಾನಸಿಕ ಬೆಂಬಲ ನೀಡುವವರ ಕೊರತೆ.
§ ಕಾರ್ಯನಿರತ ಮಹಿಳೆಯರಿಗೆ ರಜೆಯ ಅನಾನುಕೂಲ. ಕೆಲಸದ ಸ್ಥಳದಲ್ಲಿ ಎದೆಹಾಲುಣಿಸುವ ಸೌಲಭ್ಯವಿಲ್ಲದಿರುವುದು.
§ ಎದೆಹಾಲುಣಿಸುವ ತಾಯಂದಿರಿಗೆ ಬರುವ ಸಂಶಯ ನಿವಾರಿಸಲು ಆಪ್ತಸಮಾಲೋಚನೆಯ ಕೊರತೆ.
§ ಪೌಡರ್ ಹಾಲು, ಬಾಟಲಿ ಹಾಲಿಗೆ ಮಾರು ಹೋಗುವ ತಾಯಂದಿರು.
§ ಸಿಸೇರಿಯನ್ ಆದ ತಾಯಂದಿರಿಗೆ, ಚೊಚ್ಚಲ ಅಪ್ರಾಪ್ತ ಬಾಣಂತಿಯರಿಗೆ, ಅವಳಿ-ಜವಳಿ ಮಕ್ಕಳಿದ್ದ, ಕಡಿಮೆ ತೂಕದ ಮಗುವಿರುವ ತಾಯಂದಿರಿಗೆ ಮಾಹಿತಿ ಕೊರತೆ.
§ ಮಗುವಿಗೆ 2 ವರ್ಷ ತುಂಬುವ ಮೊದಲೇ ತಾಯಿ ಮತ್ತೆ ಗರ್ಭಿಣಿಯಾಗುವುದು.
ಸ್ತನ್ಯಪಾನ ಸಂರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳು
v ಹೆರಿಗೆಗೂ ಮುನ್ನವೇ ‘ಕೊಲೊಸ್ಟ್ರೋಮ್ ಬಗ್ಗೆ ತಾಯಿಗೆ ಮಾಹಿತಿ ಇರಬೇಕು.
v ಹೆರಿಗೆಯ ನಂತರ ಆಸ್ಪತ್ರೆಯಿಂದ ಹೋಗುವ ಮುನ್ನವೇ ಯಶಸ್ವಿಯಾಗಿ ಎದೆಹಾಲುಣಿಸಬಲ್ಲೆ ಎಂಬ ಭರವಸೆ ತಾಯಿಗೆ ಬಂದಿರಬೇಕು.
v ಎದೆಹಾಲುಣಿಸುವ ಅವಧಿಯಲ್ಲಿ ತಾಯಂದಿರಿಗೆ ಕುಟುಂಬದವರ ಸಹಕಾರ ಅತಿ ಮುಖ್ಯ.
v ತಾಯಿಗೆ ಪೌಷ್ಟಿಕ ಆಹಾರ ನೀಡಿ, ಸಂತೋಷವಾಗಿರುವಂತೆ ನೋಡಿಕೊಳ್ಳಬೇಕು.
v ಕಾರ್ಯನಿರತ ಮಹಿಳೆಯರಿಗೆ ಎದೆಹಾಲು ತೆಗೆಯುವ, ಸಂರಕ್ಷಿಸುವ ವಿಧಾನವನ್ನು ಕಲಿಸುವುದು, ಕೆಲಸದ ಸ್ಥಳದಲ್ಲಿಯೂ ಎದೆಹಾಲುಣಿಸಲು ಅನುಕೂಲ ಮಾಡಿಕೊಡುವುದು.
v ಮಗು ತೀವ್ರ ನಿಗಾ ಘಟಕದಲ್ಲಿದ್ದರೆ ಎದೆಹಾಲನ್ನು ನೀಡುವ ವಿಧಾನ, ಕಡಿಮೆ ತೂಕದ ಮಗು ಜನಿಸಿದಾಗ ‘ಕಾಂಗರು ಮದರ್ ಕೇರ್ ವಿಧಾನ ತೋರಿಸಿಕೊಡುವುದು.
v ಪೌಡರ್ ಹಾಲು, ಬಾಟಲಿ ಹಾಲಿನ ಅಪಾಯದ ಬಗ್ಗೆ ತಾಯಂದಿರಲ್ಲಿ ಜಾಗೃತಿ ಮೂಡಿಸಬೇಕು.
v ಸ್ತನ್ಯಪಾನವನ್ನು ಸಂರಕ್ಷಿಸಿ, ಪೋತ್ಸಾಹಿಸಿ, ಮುಂದುವರಿಸಲು ಸರ್ಕಾರ, ಆರೋಗ್ಯ ಇಲಾಖೆ ಸಂಘ – ಸಂಸ್ಥೆಗಳು, ಕುಟುಂಬದ ಸದಸ್ಯರೆಲ್ಲರೂ ಹೊಣೆ ಹೊರಬೇಕಾಗಿದೆ.