ಬೆಂಗಳೂರು: ತಮಿಳುನಾಡು ನೀಲಗಿರಿ ಜಿಲ್ಲೆಯ ಕೂನೂರು ಬಳಿ ಇಂದು ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಪಡೆಗಳ ಮುಖ್ಯಸ್ಥರಾದ (ಸಿಡಿಎಸ್) ಬಿಪಿನ್ ರಾವತ್ ಮತ್ತಿತರೆ ಉನ್ನತ ಸೇನಾಧಿಕಾರಿಗಳು ದುರಂತ ಅಂತ್ಯ ಕಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ದೇಶದ ಭದ್ರತೆಗೆ ಅನನ್ಯ ಕೊಡುಗೆ ನೀಡಿರುವ ಸೇನಾಧಿಕಾರಿಗಳನ್ನು ಕಳೆದುಕೊಂಡಿರುವುದು ಆಘಾತಕಾರಿ. ಇಂದು ದೇಶಕ್ಕೆ ಅತ್ಯಂತ ದುಃಖದ ದಿನ” ಎಂದು ಹೇಳಿದ್ದಾರೆ.

ಸೇನಾ ಪಡೆಗಳ ಮುಖ್ಯಸ್ಥರಾದ (ಸಿಡಿಎಸ್) ಬಿಪಿನ್ ರಾವತ್, ಅವರ ಶ್ರೀಮತಿಯವರು, ಸೇನೆಯ ಉನ್ನತಾಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಊಟಿ ಸಮೀಪದ ಕೂನೂರು ಬಳಿ ದುರಂತಕ್ಕೀಡಾಗಿ ರಾವತ್, ಮತ್ತವರ ಶ್ರೀಮತಿ ಮಧುಲಿಕಾ ರಾವತ್ ಸೇರಿ ಇನ್ನಿತರೆ ಉನ್ನತ ಸೇನಾಧಿಕಾರಿಗಳು ಅಸುನೀಗಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ದೇಶದ ರಕ್ಷಣೆಗೆ ಅನನ್ಯ ಕೊಡುಗೆ ನೀಡಿದ್ದ ಈ ಸೇನಾಧಿಕಾರಿಗಳ ದುರಂತ ಸಾವು ದೇಶದ ಪಾಲಿಗೆ ಆಘಾತಕಾರಿ ಘಟನೆ ಹಾಗೂ ಇಂದು ಅತ್ಯಂತ ದುಃಖದ ದಿನವೂ ಕೂಡ. ದುರಂತದಲ್ಲಿ ಜೀವ ಚೆಲ್ಲಿದ ಎಲ್ಲ ಸೇನಾಧಿಕಾರಿಗಳಿಗೆ ನನ್ನ ಪ್ರಣಾಮಗಳು. ಅವರೆಲ್ಲರಿಗೂ ಚಿರಶಾಂತಿ ಸಿಗಲಿ ಹಾಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ಎಲ್ಲರ ಕುಟುಂಬಗಳಿಗೆ ನೀಡಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಟ್ವೀಟ್ ನಲ್ಲಿ ಹೇಳಿದ್ದಾರೆ.