ಮುಕ್ತೇಶ್ವರ ಕ್ಷೇತ್ರ

ಲೇಖಕರು: ಟಿಎನ್ನೆಸ್ ಚಿತ್ರೋದ್ಯಮ
ದೇವಾಲಯ: ಮುರುಗಮಲೆ ಮುಕ್ತೀಶ್ವರ ದೇವಾಲಯ, ಚಿಕ್ಕಬಳ್ಳಾಪುರ ಜಿಲ್ಲೆ. ಸಕಲ ಪಾಪಗಳನ್ನೂ ಪರಿಹರಿಸುವ ಗಂಗಾನದಿಯಲ್ಲಿ ಸ್ನಾನ ಮಾಡಬೇಕೆಂಬ ಅಭಿಲಾಷೆ ನಿಮಗಿದ್ದರೆ ಗಂಗಾನದಿ ಹರಿಯುವ ಉತ್ತರ ಭಾರತಕ್ಕೆ ಹೋಗಬೇಕಲ್ಲವೇ? ಅಷ್ಟು ದೂರ ಪ್ರಯಾಣ ಮಾಡದೇ, ಇಲ್ಲಿಯೇ ಅಂದರೆ ಕರ್ನಾಟಕದಲ್ಲೇ ಪವಿತ್ರ ಗಂಗಾನದಿಯ ಸ್ನಾನ ಮಾಡಬಹುದು. ಹೌದು. ಬರದ ನಾಡು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಅನೇಕ ಪುಣ್ಯಕ್ಷೇತ್ರಗಳ ತವರೂರು ಸಹ. ಅಂತಹ ಒಂದು ಪುಣ್ಯಕ್ಷೇತ್ರವೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲೆ ಮುಕ್ತೀಶ್ವರ ದೇವಾಲಯ. ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟುವ ಗಂಗಾನದಿಯು ಭೂಗರ್ಭದ ಒಳಗಿನಿಂದ ಹರಿದು ಈ ಮುಕ್ತೇಶ್ವರ ಕ್ಷೇತ್ರಕ್ಕೆ ಬಂದು ಸೇರುತ್ತಾಳೆಂಬುದು ಪ್ರತೀತಿ. ಅಂತಹ ಪವಿತ್ರ ಗಂಗೆಯಿರುವ ಮುಕ್ತೀಶ್ವರ ದೇವಾಲಯದ ದರ್ಶನ ಮಾಡಿ ಬರೋಣ ಬನ್ನಿ.


ಬ್ರಹ್ಮಹತ್ಯಾ ದೋಷ ಪರಿಹಾರಕ್ಕಾಗಿ ಅರ್ಜುನನು ದ್ವಾಪರಯುಗದಲ್ಲಿ ಅನೇಕ ಸ್ಥಳಗಳನ್ನು ಸಂದರ್ಶಿಸಿ ಶಿವಲಿಂಗಗಳನ್ನು ಸ್ಥಾಪಿಸಿ, ಆ ಮೂಲಕ ಬ್ರಹ್ಮಹತ್ಯಾದೋಷವನ್ನು ಪರಿಹರಿಸಿಕೊಂಡನೆಂಬುದು ಪುರಾಣಗಳಲ್ಲಿನ ಕತೆಗಳಿಂದ ತಿಳಿದು ಬರುತ್ತದೆ. ಆ ರೀತಿ ಪ್ರಯಾಣ ಮಾಡುತ್ತಾ ಈ ಕ್ಷೇತ್ರಕ್ಕೆ ಬಂದ ಅರ್ಜುನನು ಇಲ್ಲಿ ಶಿವಲಿಂಗವೊಂದನ್ನು ಸ್ಥಾಪಿಸಿ ಪೂಜಿಸಿದನಂತೆ. ಅರ್ಜುನನ ಬ್ರಹ್ಮಹತ್ಯಾ ದೋಷವನ್ನು ಪರಿಹರಿಸಿ ಅವನಿಗೆ ಮುಕ್ತಿಯನ್ನು ಕೊಡಿಸಿದ ಕಾರಣದಿಂದಾಗಿ ಈ ಶಿವಲಿಂಗಕ್ಕೆ ಮುಕ್ತೀಶ್ವರ ಎಂದೇ ಹೆಸರಾಯ್ತು. ಅರ್ಜುನನಿಂದ ಸ್ಥಾಪಿತವಾದ ಈ ಶಿವಲಿಂಗಕ್ಕೆ ಭಾರಧ್ವಾಜ ಮುನಿಗಳು ನಿರಂತರವಾಗಿ ಪೂಜೆ ಮಾಡುತ್ತಿದ್ದರು. ತಮ್ಮ ತಪಃ ಶಕ್ತಿಯಿಂದ ಪ್ರತಿದಿನ ಇಲ್ಲಿಂದ ಅಂದರೆ ಮುಕ್ತೀಶ್ವರದಿಂದ ಗಂಗಾನದಿಗೆ ಹೋಗಿ, ಅಲ್ಲಿ ಸ್ನಾನ ಮಾಡಿ ಮತ್ತೆ ತಮ್ಮ ತಪಃ ಶಕ್ತಿಯಿಂದಲೇ ಹಿಂದಿರುಗಿ ಬಂದು ಇಲ್ಲಿ ಧ್ಯಾನ ಮಾಡುತ್ತಿದ್ದರಂತೆ. ಇವರ ಕಷ್ಟವನ್ನು ಕಂಡ ಗಂಗಾಮಾತೆಯೇ ಹಿಮಾಲಯದಿಂದ ಭೂಮಿಯ ಒಳಗೆ ಸಾಗಿ, ಇಲ್ಲಿ ಆವಿರ್ಭವಿಸಿದಳು ಎಂಬುದು ಪುರಾಣದ ಕತೆ. ಇಂದಿಗೂ ಕೂಡ ಈ ಕ್ಷೇತ್ರದಲ್ಲಿರುವ ಸಣ್ಣ ಕುಂಡಿಕೆಯಲ್ಲಿ ನಿರಂತರವಾಗಿ ನೀರು ಹರಿದುಬರುತ್ತಲೇ ಇರುತ್ತದೆ. ಈ ನೀರು ಹಿಮಾಲಯದಲ್ಲಿ ಹುಟ್ಟುವ ಗಂಗಾನದಿಯಿಂದಲೇ ಇಲ್ಲಿಗೆ ಹರಿದುಬರುತ್ತಿದೆ ಎಂಬುದು ಭಕ್ತಾದಿಗಳ ನಂಬಿಕೆ. ಪ್ರತಿದಿನ ಈ ಪವಿತ್ರ ಗಂಗೆಯಲ್ಲಿ ಮೀಯಲೆಂದೇ ನೂರಾರು ಭಕ್ತಾದಿಗಳು ಈ ದೇವಾಲಯಕ್ಕೆ ಬರುತ್ತಾರೆ.


ಬೆಂಗಳೂರಿನಿಂದ ಸುಮಾರು 90 ಕಿ.ಮೀ.ದೂರದಲ್ಲಿರುವ ಈ ದೇವಾಲಯ ಸುಂದರವಾದ ಪರಿಸರದಲ್ಲಿ, ಬೆಟ್ಟವೊಂದರ ಮೇಲಿದೆ. ಮಧ್ಯದಲ್ಲಿ ಶಿವ, ಆಕಡೆ ಈಕಡೆ ಪಾರ್ವತೀ, ಸುಬ್ರಹ್ಮಣ್ಯ ಹಾಗು ಗಣೇಶ ದೇವಾಲಯಗಳಿವೆ. ಸುಂದರವಾದ ಪರಿಸರದಲ್ಲಿರುವ ಈ ದೇವಾಲಯವಾದ ಸೌಂದರ್ಯವನ್ನು ಸವಿಯುವುದೇ ಒಂದು ಆನಂದ. ಶಿವಾಲಯದ ಮುಂದೆ ಸಾಮಾನ್ಯವಾಗಿ ಒಂದು ನಂದಿ ಇರುವುದು ನಮಗೆಲ್ಲ ತಿಳಿದ ವಿಚಾರ. ಆದರೆ ಈ ದೇವಾಲಯದಲ್ಲಿರುವ ಶಿವನ ಮುಂದೆ, ಒಂದರ ಪಕ್ಕ ಒಂದರಂತೆ ಎರಡು ನಂದಿಗಳಿರುವುದು ಇಲ್ಲಿನ ವಿಶೇಷ. ಶಿವರಾತ್ರಿ ಸೇರಿದಂತೆ ವಿಶೇಷ ದಿನಗಳಲ್ಲಿ ವಿಶೇಷ ಪೂಜೆ-ಅಲಂಕಾರ ಇರುತ್ತದೆ. ಭಾರಧ್ವಾಜ ಮುನಿಗಳು ಪ್ರತಿಷ್ಟಾಪಿಸಿದರೆನ್ನಲಾದ ಸಪ್ತಮಾತೃಕೆಯರ ವಿಗ್ರಹಗಳೂ ಕೂಡ ಇಲ್ಲಿವೆ. ಕೆಟ್ಟ ಶಕುನಗಳನ್ನು ಈ ಸಪ್ತಮಾತೃಕೆಯರು ಪರಿಹರಿಸುತ್ತಾರೆನ್ನುವುದು ಜನರ ನಂಬಿಕೆ. ದೇವಾಲಯದ ಮುಂದೆ ಇರುವ ಮರಕ್ಕೆ ಹರಕೆಯನ್ನು ಕಟ್ಟಿ ಬೇಡಿಕೊಂಡರೆ ಯಾವುದೇ ಕೆಲಸವಾಗಲಿ ತೊಂದರೆಯಿಲ್ಲದೆ ನಡೆಯುತ್ತದೆ ಎಂಬುದು ಕೂಡ ಇಲ್ಲಿನ ನಂಬಿಕೆ. ದೇವಾಲಯದಲ್ಲಿ ಅನ್ನದಾನದ ವ್ಯವಸ್ಥೆಯಿದೆ. ಬೆಂಗಳೂರಿನಿಂದ ಒಂದೂವರೆ ಗಂಟೆಯ ಪ್ರಯಾಣ ಅಷ್ಟೇ. ಬೆಂಗಳೂರಿನಿಂದ ಬೆಳಿಗ್ಗೆ ಹೊರಟು ಸಂಜೆಗೆ ಮತ್ತೆ ಹಿಂದಿರುಗಿ ಬಂದುಬಿಡಬಹುದು. ಈ ದೇವಾಲಯವನ್ನು ನೋಡಿಲ್ಲವಾದರೆ ರಜಾದಿನವೊಂದರಲ್ಲಿ ತಪ್ಪದೇ ಈ ದೇವಾಲಯಕ್ಕೆ ಭೇಟಿ ಕೊಟ್ಟು, ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ಶಿವನ ದರ್ಶನ ಮಾಡಿ ಬನ್ನಿ.

Leave a Comment

Your email address will not be published. Required fields are marked *

Translate »
Scroll to Top