ಧಮ್ಕಿ ಹಾಕುವ ಸಂಸ್ಕೃತಿ ನನ್ನದಲ್ಲ : ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಧಮ್ಕಿ ಸಂಸ್ಕೃತಿಯಿಂದ ಬಂದವರು ಯಾರು?: ಸೆಟ್ಲ್ ಮೆಂಟ್ ಮಾಡುತ್ತೇನೆ ಎಂದು ಹೇಳಿದವರು ಯಾರು?

ರಾಮನಗರದಲ್ಲಿ ಕಾನೂನು ವಿರೋಧಿ ಶಕ್ತಿಗಳಿಗೆ ರಕ್ಷಣೆ ಕೊಡುತ್ತಿದ್ದಾರೆ ಎಂದು ಆರೋಪ

ಬೆಂಗಳೂರು: ನನ್ನದು ಧಮ್ಕಿ ಸಂಸ್ಕೃತಿ ಅಲ್ಲ, ಸೆಟ್ಲಮೆಂಟ್ ಮಾಡುವ ಸಂಸ್ಕೃತಿ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

 ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರು ಆರೋಪಗಳಿಗೆ ಖಾರವಾದ ಉತ್ತರ ನೀಡಿದರಲ್ಲದೆ, ಅಂಥಾ ಸಂಸ್ಕೃತಿಯಿಂದ ಬಂದವರು ಯಾರು? ಎಂದರು.

 

ಧಮ್ಕಿ ಸಂಸ್ಕೃತಿಯಿಂದ ಬಂದವರು ಯಾರು? ಸೆಟ್ಲ್ ಮೆಂಟ್ ಮಾಡುತ್ತೇನೆ ಎಂದು ಹೇಳಿದವರು ಯಾರು? ಧಮ್ಕಿ ಹಾಕುವ, ಸೆಟ್ಲ್ ಮೆಂಟ್ ಮಾಡುವ ಸಂಸ್ಕೃತಿ ನಮ್ಮದಲ್ಲ. ಧಮ್ಕಿ ಹಾಕಿ, ಸಿಕ್ಕ ಸಿಕ್ಕ ಜಾಗದಲ್ಲಿ ಬೇಲಿ ಹಾಕೋದು ನಮ್ಮ ಜಾಯಮಾನದಲ್ಲಿ‌ ಇಲ್ಲ ಎಂದರು ಕುಮಾರಸ್ವಾಮಿ ಅವರು.

ನಾನು ಯಾರಿಗೂ ಧಮ್ಕಿ ಹಾಕಿಲ್ಲ, ಹಾಕುವುದೂ ಇಲ್ಲ. ರಾಜ್ಯಸಭಾ ಚುನಾವಣೆ ನಡೆಯುತ್ತಿದೆ. ಆತ್ಮಸಾಕ್ಷಿಯ ಮತ ಕೇಳುವುದಾಗಿ ಹೇಳಿದ್ದೇವೆ. ಇವರು ಯಾರೋ ಬಿಜೆಪಿ ಶಾಸಕರನ್ನು ಅಕ್ಕಪಕ್ಕ ಕೂರಿಸಿಕೊಂಡಿದ್ರಲ್ಲ, ಅದು ತಪ್ಪಲ್ಲವೇ? ಜೆಡಿಎಸ್‌ ಪಕ್ಷದ ಇಬ್ಬರು ಶಾಸಕರ ಮತ ಬರಲಿದೆ ಅಂತ ಹೇಳಿದ್ದಾರೆ, ಅದು ತಪ್ಪಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಯಾರಿಗೂ ಧಮಕಿ‌ ಹಾಕಿಲ್ಲ, ಅಂತಹ ಸಂಸ್ಕೃತಿಯಿಂದ ಬಂದವನೂ ಅಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ರಾಮನಗರದಲ್ಲಿ ಕಾನೂನು ವಿರೋಧಿ ಶಕ್ತಿಗಳಿಗೆ ರಕ್ಷಣೆ:

ಅಧಿಕಾರಿಗಳನ್ನು ಹೆಸರಿಸಿ ಬೇದರಿಸಿಕೊಂಡು ಕಾನೂನು ವಿರೋಧಿ ಶಕ್ತಿಗಳಿಗೆ ರಕ್ಷಣೆ ಕೊಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಡಿಸಿಎಂ ಡಿಕೆಶಿ ಮತ್ತವರ ಪಟಾಲಂ ವಿರುದ್ಧ ವಾಗ್ದಾಳಿ ನಡೆಸಿದರು.

 

ರಾಮನಗರದಲ್ಲಿ ನಡೆಯುತ್ತಿರುವ ವಕೀಲರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು; ಈ ಸರ್ಕಾರ ಅಧಿಕಾರಿಗಳನ್ನು ಗುಲಾಮರ ರೀತಿ ನಡೆಸಿಕೊಳ್ಳುತ್ತಿದೆ. ಕರ್ತವ್ಯ ಲೋಪದ ಎಸಗಿದ ಪೊಲೀಸ್ ಅಧಿಕಾರಿಯನ್ನು ಸರ್ಕಾರ ಅಮಾನತು ಮಾಡಬೇಕಿತ್ತು. ಆದರೆ, ಜನರಲ್ಲಿ ದ್ವೇಷ ಭಾವನೆ ಭಿತ್ತಿ ಸಮಾಜಘಾತುಕ ಚಟುವಟಿಕೆ ಮಾಡುತ್ತಿರುವ ವ್ಯಕ್ತಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು.

ಜ್ಞಾನ ವ್ಯಾಪಿ ಶಿವಲಿಂಗ ದೇವಸ್ಥಾನ ಅಂತ ಒಂದು ವರ್ಗ, ಮಸೀದಿ ಅಂತ‌ ಮತ್ತೊಂದು ವರ್ಗ ಹೇಳುತ್ತಿದೆ. ಆದರೆ, ಆ ಬಗ್ಗೆ ನಾಯಾಯಲಯ ಆದೇಶ ನೀಡಿದೆ. ಆದೇಶ ತೃಪ್ತಿಕರ ಆಗಿಲ್ಲದಿದ್ದರೆ ಅವರು ಮೇಲಿನ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದು. ಅದು ಬಿಟ್ಟು ನ್ಯಾಯಾಧೀಶರು, ನ್ಯಾಯಾಂಗವನ್ನು ಅಶ್ಲೀಲ ಭಾಷೆಯಲ್ಲಿ ನಿಂದಿಸಿದರೆ ತಪ್ಪು. ಅದು ನ್ಯಾಯಾಂಗ ನಿಂದನೆ. ಇಂಥ ಕೆಲಸ ಮಾಡಿದ ಕಿಡಿಗೇಡಿ ರಕ್ಷಣೆಗೆ ಸರ್ಕಾರ ನಿಂತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಿಂದ ಫೋನ್ ಹೋದರೆ ಅಧಿಕಾರಿಗಳು ನಡುಗುತ್ತಾರೆ. ಕೂತ ಜಾಗದಲ್ಲಿಯೇ ಎದ್ದು ನಿಂತು ಸೆಲ್ಯೂಟ್ ಹೊಡೆಯುತ್ತಾರೆ. ಕರೆ ಮಾಡಿದವರು ವಕೀಲರ ಪ್ರತಿಭಟನೆಗೆ ತಲೆ ಕೆಡಿಸಿಕೊಳ್ಳಬೇಡಿ ಅಂತ ಹೇಳಿದ್ದಾರೆ. ಪೊಲೀಸ್ ಇಲಾಖೆ ವೈಫಲ್ಯದಿಂದ ಈ ಘಟನೆ ನಡೆದಿದೆ ಎಂದು ಅವರು ಹೇಳಿದರು.

ನ್ಯಾಯಾಂಗ ನಿಂದನೆ ಮಾಡಿದವನು ಒಂದು ಸಮುದಾಯಕ್ಕೆ ಸೇರಿದವನು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೂಡ ಅದೇ ಸಮುದಾಯದ ವ್ಯಕ್ತಿ. ಶಾಸಕರೂ ಅದೇ ಸಮುದಾಯಕ್ಕೆ ಸೇರಿದವರು. ಈ ಸರಕಾರ ಆ ಸಮುದಾಯಕ್ಕೆ ಮಾತ್ರ ಕೆಲಸ ಮಾಡುತ್ತಿದೆಯಾ? ಎನ್ನುವ ಅನುಮಾನ ನನಗೆ ಕಾಡುತ್ತಿದೆ ಎಂದರು ಅವರು.

ಕಳೆದ ರಾತ್ರಿ ಪ್ರತಿಭಟನೆ ಸ್ಥಳಕ್ಕೆ ನಾನು, ಅರ್ ಅಶೋಕ್ ಹೋಗುತ್ತೇವೆ ಎಂದು ಗೊತ್ತಾದ ಮೇಲೆ ಪೊಲೀಸರು ಅಧಿಕಾರಿಗಳಿಗೆ ದಿಗ್ಬಂಧನ ಹೇರಿದ್ದ ಜಿಲ್ಲಾಡಳಿತ ಕಚೇರಿಯ ಗೇಟ್ ಬೀಗ ಹೊಡೆದಿದ್ದಾರೆ. ಬೀಗವನ್ನು ಕಳ್ಳರು ಹೊಡೆಯೋದನ್ನು ನೋಡಿದ್ದೇವೆ. ಇಲ್ಲಿ ಪೊಲೀಸರೇ ಬೀಗವನ್ನು ಹೊಡೆದಿದ್ದಾರೆ ಎಂದು ಅವರು ಕಿಡಿಕಾರಿದರು.

 

ಮಾಜಿ ಸಚಿವರಾದ ಸಿಸಿ ಪಾಟೀಲ್, ಶಾಸಕರಾದ ಸಮೃದ್ಧಿ ಮಂಜುನಾಥ್, ಕರೆಮ್ಮ ನಾಯಕ್ ಅವರು ಈ ಸಂದರ್ಭದಲ್ಲಿ ಇದ್ದರು.

Facebook
Twitter
LinkedIn
Telegram
Email
Print
WhatsApp

Leave a Comment

Your email address will not be published. Required fields are marked *

Translate »
Scroll to Top