ಬಜೆಟ್ ನಲ್ಲಿ ಪೀಣ್ಯ ಕೈಗಾರಿಕಾ ಸಂಘದ ಭಾಗಶಃ ಬೇಡಿಕೆ ಈಡೇರಿಕೆ

ಬೆಂಗಳೂರು, ಮಾ, 5; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 2022 – 23 ನೇ ಸಾಲಿನ ಬಜೆಟ್ ನಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ದೀರ್ಘಕಾಲಿಕ ಪರಿಹಾರಗಳನ್ನು ನೀಡಿರುವುದು ಸ್ವಾಗತಾರ್ಹ. ಆದರೆ ಸಣ್ಣ ಕೈಗಾರಿಕೆಗಳಿಗೆ ತಕ್ಷಣ ಉಸಿರಾಡಲು ಹಣಕಾಸು ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪೀಣ್ಯ ಕೈಗಾರಿಕಾ ಸಂಘ ಒತ್ತಾಯಿಸಿದೆ. ಸರ್ಕಾರ ಸಣ್ಣ ಕೈಗಾರಿಕಾ ವಲಯದ ಬೇಡಿಕೆಗಳನ್ನು ಭಾಗಶಃ ಈಡೇರಿಸಿದೆ. ಆದರೆ ಇನ್ನುಳಿದ ಹಲವು ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಅವರು ವಿಧಾನಮಂಡಲದಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಬಗೆಹರಿಸಬೇಕು. ವಿಶೇಷವಾಗಿ ಕೋವಿಡ್ ನಂತರದಲ್ಲಿ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಕೈಗಾರಿಕೆಗಳಿಗೆ ತಕ್ಷಣ ಬ್ಯಾಂಕ್ ಗಳಿಂದ ಆರ್ಥಿಕ ನೆರವು ಕಲ್ಪಿಸಬೇಕು. ಪ್ರಮುಖವಾಗಿ ಕರ ಸಮಾಧಾನ ಯೋಜನೆಯನ್ನು ಜಾರಿಗೊಳಿಸಬೇಕು. ಇದರ ಜತೆಗೆ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ಯಮ ವಲಯಕ್ಕೆ ಸಿಡ್ಬಿ ಮೂಲಕ ಜಾರಿಗೆ ತಂದಿರುವ ಬಡ್ಡಿ ಇಂಟರೆಸ್ಟ್ ಸಬ್ ವೆನ್ಷನ್ ಯೋಜನೆಯನ್ನು ಅನುಷ್ಠಾನ ಮಾಡಬೇಕು ಎಂದು ಹೇಳಿದೆ.

ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಮುರಳಿ ಕೃಷ್ಣ, ಗೌರವ ಕಾರ್ಯದರ್ಶಿ ಆರ್. ಶಿವ ಕುಮಾರ್ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಸಣ‍್ಣ ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮಾರಣಾಂತಿಕವಾಗಿ ಪರಿಣಮಿಸಿದೆ. ಪ್ರತಿ ತಿಂಗಳು ಕಚ್ಚಾ ವಸ್ತುಗಳ ದರ ಮನಸೋ ಇಚ್ಚೆ ಏರಿಕೆಯಾಗುತ್ತಿದೆ. ವರ್ಷಕ್ಕೆ ಅಥವಾ ಕನಿಷ್ಠ ಆರು ತಿಂಗಳಿಗೆ ಒಮ್ಮೆ ದರ ಏರಿಕೆಯಾಗುವಂತೆ ನೋಡಿಕೊಳ್ಳಬೇಕು. ಬೆಲೆ ಏರಿಕೆಗೆ ತಕ್ಷಣವೇ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಬೆಸ್ಕಾಂ ಈಗಾಗಲೇ ಏರಿಕೆ ಮಾಡಿರುವ ವಿದ್ಯುತ್ ದರ ಹೆಚ್ಚಳವನ್ನು ಮನ್ನಾ ಮಾಡಬೇಕು. ಮತ್ತಷ್ಟು ಬೆಲೆ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕು. ಬೆಂಗಳೂರಿನಾದ್ಯಂತ ಮೆಟ್ರೋ ರೈಲು ವ್ಯವಸ್ಥೆ ಇದ್ದು, ಪೀಣ್ಯ ಕೈಗಾರಿಕಾ ವಲದ 10 ಲಕ್ಷ ಉದ್ಯೋಗಿಗಳಿಗಾಗಿ ಪೀಣ್ಯ – ಜಾಲಹಳ್ಳಿ ಸರ್ಕಲ್ ನಿಂದ ಪೀಣ್ಯ ಮಾರ್ಗವಾಗಿ ಕೆಂಗೇರಿಯನ್ನು ಸಂಪರ್ಕಿಸುವಂತೆ ಮೆಟ್ರೋ ರೈಲು ಯೋಜನೆ ಜಾರಿ ಮಾಡಬೇಕು. ಬಜೆಟ್ ನಲ್ಲಿ ಬೆಂಗಳೂರಿಗೆ ನಾಲ್ಕು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನೀಡಿದ್ದು, ಇದರಲ್ಲಿ ಒಂದು ಪೀಣ್ಯ ಭಾಗಗಳಲ್ಲಿ ಆರಂಭಿಸಬೇಕು. ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಸಮಾವೇಶ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಕೊಳಚೆ ಪ್ರದೇಶಗಳಂತಿರುವ ನಗರದ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಮಾಡಿದರೆ ಸಹಜವಾಗಿ ವಿದೇಶಿ ಬಂಡವಾಳ ಹರಿದು ಬರಲಿದೆ ಎಂದು ಹೇಳಿದ್ದಾರೆ.

ಕೈಗಾರಿಕಾ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಮಾಡಲು ಅಡಚಣೆ ಎದುರಿಸುತ್ತಿರುವ 15 ಕೈಗಾರಿಕಾ ಪ್ರದೇಶಗಳನ್ನು ಗುರುತಿಸಿರುವ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳಲ್ಲಿ ಉದ್ಯಮಶೀಲತೆ ಉತ್ತೇಜಿಸಲು ಕೆಐಎಡಿಬಿ ಮತ್ತು ಕೆ.ಎಸ್.ಐ.ಡಿ.ಬಿ ಸಂಸ್ಥೆಗಳು ಅಭಿವೃದ್ಧಿಪಡಿಸುತ್ತಿರುವ ಹೊಸ ಕೈಗಾರಿಕಾ ಪ್ರದೇಶಗಳಲ್ಲಿ ಸಣ್ಣ ನಿವೇಶನಗಳನ್ನು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ನೀಡುವ ಸಂಘದ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಿರುವುದು ಅತೀವ ಸಂತಸ ತಂದಿದೆ ಎಂದಿದ್ದಾರೆ. ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಸಾಮರ್ಥ್ಯದ ಸಂಪೂರ್ಣ ಬಳಕೆಯಾಗಿದ್ದು. ಇನ್ನೊಂದು ಸಣ್ಣ ಮತ್ತು ಪೂರಕವಾಗಿ ಅತಿ ಸಣ್ಣ ಕೈಗಾರಿಕಾ ಪಾರ್ಕ್ ಅಭಿವೃದ್ಧಿ ಪಡಿಸುವ, ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ದಟ್ಟಣೆ ನಿವಾರಿಸಲು ಮತ್ತು ಸಿಗ್ನಲ್ ಮುಕ್ತ ಸಂಚಾರವನ್ನು ಸಕ್ರಿಯಗೊಳಿಸಲು, ಗ್ರೇಡ್ ಸಪರೇಟರ್ ಮತ್ತು ಫ್ಲೈಓವರ್ ಕಾಮಗಾರಿಗಳನ್ನು ಬಿಬಿಎಂಪಿ, ಬಿಡಿಎ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಜಂಟಿಯಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ವಲಯದ ಸಂಚಾರ ಸಮಸ್ಯೆ ನಿವಾರಣೆಯಾಗಲಿದೆ ಎಂದು ಸಂಘದ ಅಧ್ಯಕ್ಷ ಬಿ. ಮುರಳಿ ಕೃಷ್ಣ ಹೇಳಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top