ಬಳ್ಳಾರಿ: ತಮಿಳುನಾಡಿಗೆ ನೀರು ಬಿಡಲು ಜಲಾಶಯದಲ್ಲೇ ನೀರಿಲ್ಲ. ನಮಗೇನು ನೀರು ಕೊಡಬಾರ್ದು ಅಂತೇನಿಲ್ಲ. ಆದ್ರೆ ಅಷ್ಟು ಪ್ರಮಾಣದ ನೀರು ಸಂಗ್ರಹವಿಲ್ಲ. ಈ ಬಗ್ಗೆ ತಮಿಳುನಾಡು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಈ ಸಮಸ್ಯೆ ಪರಿಹಾರವಾಗಬೇಕಾದ್ರೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಜಿಂದಾಲ್ ಏರ್ ಪೋರ್ಟ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ಕೆಆರ್ ಎಸ್ ಜಲಾಶಯಕ್ಕೆ ಕಬಿನಿ ಜಲಾಶಯದಿಂದ ನೀರು ಬರಬೇಕಿತ್ತು. ಆದ್ರೆ ಕಬಿನಿ ಜಲಾನಯನ ಪ್ರದೇಶದಲ್ಲಿ ಸರಿಯಾಗಿ ಮಳೆಯಾಗದ ಕಾರಣದಿಂದ ನೀರು ಬಂದಿಲ್ಲ. ಹಾಗಾಗಿ ನಾವು ನೀರು ಬಿಡಲು ಆಗುತ್ತಿಲ್ಲವೆಂದರೂ ಈ ವಿಚಾರವನ್ನು ಸುಪ್ರೀಂವರೆಗೆ ತೆಗೆದುಕೊಂಡು ಹೋಗಿದ್ದು, ಪ್ರತಿನಿತ್ಯ 5000 ಕ್ಯುಸೆಕ್ಸ್ ನೀರು ಬಿಡಬೇಕಾಗುತ್ತಿದೆ. ಈ ಸಮಸ್ಯೆ ಪರಿಹಾರ ಆಗಬೇಕಾದರೆ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಈ ಯೋಜನೆಗೆ ತಮಿಳುನಾಡು ಸರ್ಕಾರ ಅನಗತ್ಯವಾಗಿ ವಿರೋಧ ಮಾಡುತ್ತಿದೆ. ಮೇಕೆದಾಟು ಯೋಜನೆ ಆದ್ರೆ 67 TMC ನೀರು ಸೇವ್ ಮಾಡಬಹುದು. ಹಾಗೆಯೇ ತಮಿಳುನಾಡಿಗೆ ನೀರು ಬಿಡಬಹುದು ಎಂದರು.
ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕಿದೆ. ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಕಮಿಟಿ ಇದ್ದು, ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯನವರು, ಇದೇ ಸೆ.04 ರಂದು ಸಂಪುಟ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ತೀರ್ಮಾನ ಮಾಡಲಿದ್ದೇವೆ. ಈಗಾಗಲೇ ಬರ ಪ್ರದೇಶ ಎಂದು 113 ತಾಲೂಕುಗಳನ್ನು ಗುರುತಿಸಲಾಗಿದೆ. ಸಭೆ ಬಳಿಕ ಇನ್ನು 73 ತಾಲೂಕುಗಳನ್ನು ಪಟ್ಟಿಗೆ ಸೇರಿಸಬೇಕು. ಈಗಾಗಲೇ 114 ತಾಲೂಕುಗಳಲ್ಲಿ ಜಂಟಿ ಸರ್ವೇ ಮಾಡಲಾಗಿದೆ. ಈ ಪೈಕಿ 105 ತಾಲೂಕಿನಲ್ಲಿ ಬರ ಇದೆ ಎಂದು ವರದಿ ಬಂದಿದೆ, ವರದಿ ಆಧಾರಿತ ತಿರ್ಮಾನ ಆಗಲಿದೆ. ಇನ್ನೂ 73 ತಾಲೂಕುಗಳಲ್ಲೂ ಬರ ಇದೆ ಅಂತಾ ಹೇಳಲಾಗ್ತಿದೆ ವರದಿ ಪಡೆಯುತ್ತೇನೆ ಎಂದರು.
ಜೂನ್‌ನಿಂದ ಮಳೆ ಪ್ರಮಾಣ ಕಡಿಮೆ ಆಗಿದೆ. ಶೇ.56 ರಷ್ಟು ಮಳೆ ಪ್ರಮಾಣ ಕಡಿಮೆ ಆಗಿದೆ. ಹಾಗೆಯೇ ಅಗಸ್ಟ್‍ನಲ್ಲೂ ಮಳೆ ಬಂದಿಲ್ಲ. ಹಾಗಾಗಿ ರಾಜ್ಯದಲ್ಲಿ ಸಮಸ್ಯೆಗಳು ಎದುರಾಗಿವೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದರು