ಪಟ್ಟಣ ಪಂಚಾಯತಿ ನಿರ್ಲಕ್ಷದಿಂದ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ಇಲ್ಲ

ಮರಿಯಮ್ಮನಹಳ್ಳಿ , 31 : ಪಟ್ಟಣದ ಮುಖ್ಯ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ಟಂಟಂ ಆಟೋ, ಗೂಡ್ಸ ವಾಹನಗಳು, ದ್ವಿಚಕ್ರವಾಹನಗಳನ್ನು ರಸ್ತೆಯ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ವಾಹನಗಳಿಗೆ ರಸ್ತೆಗಳು ಎಷ್ಟು ಮುಖ್ಯವೋ ಪಾದಚಾರಿಗಳಿಗೂ ಸುರಕ್ಷಿತ ಸಂಚಾರ ಅಷ್ಟೇ ಮುಖ್ಯ. ಆದರೆ ಸುರಕ್ಷತೆ ವಹಿಸ ಬೇಕಾದ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಇತ್ತ ಗಮನ ಹರಿಸದಿರುವುದು ಬೇಸರವಾಗಿದೆ. ಇದಕ್ಕೆ ತಾಜಾ ಉದಾಹರಣೆ ಮರಿಯಮ್ಮನಹಳ್ಳಿಯ ರಾಜ್ಯಹೆದ್ದಾರಿಯಲ್ಲಿ ಪುಟ್‍ಪಾತ್ ಗಳನ್ನು ಅತಿಕ್ರಮಿಸಿಕೊಂಡಿರುವುದು. ಹಾಗೂ ಪಾನಿಪುರಿ ಬಂಡಿಗಳು ರಸ್ತೆಯ ಮಧ್ಯದಲ್ಲಿಯೇ ಇದ್ದು, ವಾಹನಗಳಿಗೆ ತೊಂದರೆ ಆದರು ಯಾವ ಅಧಿಕಾರಿಗಳು ಇತ್ತ ಕಡೆ ಗಮನ ಕೂಡ ಹರಿಸುತ್ತಿಲ್ಲ. ಪಾದಚಾರಿಗಳ ಸುರಕ್ಷತೆ ಕಾಪಾಡುವಲ್ಲಿ ಮರಿಯಮ್ಮನಹಳ್ಳಿಯ ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದ್ದು, ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲ್ಲಿಸುವಿಕೆಯಿಂದ ಹಲವು ಬಾರಿ ಅವಘಡಗಳೂ ಸಂಭವಿಸಿದ್ದು ಪ್ರಾಣ ಹಾನಿಯು ಆಗಿವೆ. ಪುಟ್‍ಪಾತ್ ವ್ಯಾಪಾರಿಗಳು ಪುಟ್‍ಪಾತ್ ಬಿಟ್ಟು ರಾಜ್ಯ ಹೆದ್ದಾರಿ ರಸ್ತೆವರೆಗೂ ಬಂದು ತಮ್ಮ ವ್ಯಾಪಾರವನ್ನು ನಡೆಸುತ್ತಿದ್ದರು ಅಧಿಕಾರಿಗಳು ಜಾಣ ಕುರುಡುತನ ತೋರಿಸುತ್ತಿದ್ದಾರೆ.


ಪಟ್ಟಣದ ಮುಖ್ಯರಸ್ತೆಯು ರಾಜ್ಯಹೆದ್ದಾರಿ ಆಗಿದ್ದರಿಂದ ವಾಹನಗಳ ದಟ್ಟಣೆಯಿಂದ ಕೂಡಿದೆ. ಹೆದ್ದಾರಿಯ ಎರಡೂ ಬದಿಯಲ್ಲಿ ಪುಟ್‍ಪಾತ್ ಗಳಿದ್ದು, ಪುಟ್‍ಪಾತ್ ವ್ಯಾಪಾರಿಗಳ ಹತ್ತಿರ ಬರುವ ಗ್ರಾಹಕರೂ ರಸ್ತೆಯ ಮೇಲೆ ಎಲ್ಲಂದರಲ್ಲಿ ವಾಹನಗಳನ್ನು ನಿಲ್ಲಿಸಿ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಾರೆ. ದೂರದ ಊರಿಗೆ ಸಂಚರಿಸುವ ವಾಣಿಜ್ಯ ವಾಹನಗಳ ಸವಾರರು ಇಕ್ಕಟ್ಟಿನ ಸ್ಥಳಗಳಲ್ಲಿ ವಾಹನ ನಿಲ್ಲಿಸಿ ತಮ್ಮ ಕೆಲಸ ಕಾರ್ಯಗಳತ್ತ ಹೋಗುತ್ತಾರೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ರಸ್ತೆ ಇಕ್ಕಲೆಗಳಲ್ಲಿನ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ಎದುರಿಗೆ ಬರುವ ವಾಹನಗಳ ಗಮನಿಸದೇ ರಸ್ತೆ ದಾಟಲು ಹೋದಾಗ ಅಪಘಾತವಾದ ಘಟನೆ ನಡೆದಿವೆ.


ಪಟ್ಟಣದಲ್ಲಿ ನಿತ್ಯ ತರಕಾರಿ ಮಾರುಕಟ್ಟೆಗೆ ಜಾಗವಿಲ್ಲದೆ, ಎಲ್ಲಂದರಲ್ಲಿ ತರಕಾರಿ ಮಾರುತ್ತಿದ್ದು ಗ್ರಾಹಕರು ವಾಹಗಳನ್ನು ರಸ್ತೆಗೆ ಬಿಟ್ಟು ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಾರೆ. ತರಕಾರಿ ಮಾರುವವರು ರಸ್ತೆಯಲ್ಲಿ ಬಿಸಾಡುವ ತ್ಯಾಜ್ಯಗಳು ಬಿಡಾಡಿ ದನಗಳ ಗುಂಪಿಗೆ ಎಡೆಮಾಡಿಕೊಟ್ಟಿದ್ದು ಇದರಿಂದಲೂ ಟ್ರಾಫಿಕ್ ಕಿರಿಕಿರಿಯಾಗುತ್ತಿದೆ. ಕೊಳೆತ ಹಸಿಮೆಣಸಿನ ಕಾಯಿ ಹೊಂದಿದ ತ್ಯಾಜ್ಯವು ಗಾಳಿಗೆ ಹಾರಿ ವಾಹನ ಸವಾರರಿಗು, ಪಾದಚಾರಿಗಳ ಕಣ್ಣಿಗೆ ರಾಚುತ್ತಿರುವುದರಿಂದ ಕಣ್ಣುಹುರಿ ಅನುಭವಿಸುವಂತಾಗಿದೆ. ಮತ್ತೊಂದೆಡೆ ಹಳ್ಳಿಗಳಿಗೆ ತೆರಳುವ ಆಟೋಗಳಿಗೆ ಪ್ರತ್ಯೇಕ ಆಟೋ ನಿಲ್ದಾಣವಿಲ್ಲದೆ ರಾಜ್ಯ ಹೆದ್ದಾರಿ ರಸ್ತೆಯನ್ನು ಅತಿಕ್ರಮಿಸಿಕೊಳ್ಳಲು ಕಾರಣವಾಗಿದೆ.


ಪಟ್ಟಣದ ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿ ಚಿಕನ್ ಮತ್ತು ಮಟನ್ ಅಂಗಡಿಗಳನ್ನು ಇಡಲಾಗಿದ್ದು ಇವರು ಬಿಸಾಡುವ ಮಾಂಸದ ತ್ಯಾಜ್ಯಗಳನ್ನು ತಿನ್ನಲು ನೂರಾರು ನಾಯಿಗಳು ರಸ್ತೆಯನ್ನೇ ತಮ್ಮ ಅಡ್ಡಗಳನ್ನು ಮಾಡಿಕೊಂಡಿದ್ದು ಬೈಕ್ ಸವಾರರು ಕೈಕಾಲುಗಳನ್ನು ಮುರಿದು ಕೊಂಡಿದ್ದಾರೆ. ಹತ್ತಿರದಲ್ಲೇ ಸರಕಾರಿ ಶಾಲೆಗಳಿದ್ದು ಸಾವಿರಾರು ಮಕ್ಕಳು ಇದೇ ರಸ್ತೆಗಳನ್ನು ಅವಲಂಬಿಸಿದ್ದು ನಾಯಿಗಳ ಹಾವಳಿ ಜಾಸ್ತಿಯಾಗಿದೆ. ಈ ಬಗ್ಗೆ ಪಂಚಾಯಿತಿಯವರಿಗೆ ಬಹಳ ಸಲ ಮನವಿ ಮಾಡಿದರು ಹಾವಳಿ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಸಂಬಂಧಿಸಿದ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಇತ್ತ ಗಮನಹರಿಸಿ ಜನರ ಸುರಕ್ಷಿತ ಸಂಚಾರ ಮತ್ತು ಜೀವಕ್ಕೆ ರಕ್ಷಣೆ ಮಾಡಬೇಕಿದೆ.

Leave a Comment

Your email address will not be published. Required fields are marked *

Translate »
Scroll to Top