ಸುದ್ದಿ ಮತ್ತು ವಿಶ್ಲೇಷಣೆಗಳ ನಡುವೆ ಅಂತರವೇ ಇಲ್ಲವಾಗಿದೆ

ಊಹಾ ಪತ್ರಿಕೋದ್ಯಮ ಅನಾಹುತಕಾರಿ

ತಂತ್ರಜ್ಞಾನ ಬೆಂಕಿ ಇದ್ದಂತೆ. ಅಡುಗೆಯನ್ನೂ ಮಾಡಬಹುದು-ಮನೆಯನ್ನೂ ಸುಡಬಹುದು: ಕೆ.ವಿ.ಪ್ರಭಾಕರ್

ಬೆಂಗಳೂರು: ತಂತ್ರಜ್ಞಾನ ಬೆಂಕಿ ಇದ್ದಂತೆ. ಅಡುಗೆಯನ್ನೂ ಮಾಡಬಹುದು-ಮನೆಯನ್ನೂ ಸುಡಬಹುದು. ಬಳಸಿಕೊಳ್ಳುವವರ ಮನಸ್ಥಿತಿಗೆ ತಕ್ಕಂತೆ ಫಲಿತಾಂಶ ಇರುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ “ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಮಾಧ್ಯಮಗಳು ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. 

ಇತ್ತೀಚಿಗೆ ರಶ್ಮಿಕಾ ಮಂದಣ್ಣ ಮತ್ತು ಕತ್ರಿನಾ ಕೈಫ್ ಅವರ ಡೀಪ್ ಫೇಕ್ ವಿಡಿಯೊ ವೈರಲ್ ಆಗಿತ್ತು. ಅದು ಫೇಕ್ ಎಂದು ಗೊತ್ತಾಗುವುದರೊಳಗೆ ಅದನ್ನು ಲಕ್ಷಾಂತರ ಮಂದಿ ಅಸಲಿ ಎಂದೇ ನಂಬಿ ಬಿಟ್ಟಿದ್ದರು. ರಶ್ಮಿಕಾ ಅವರ ಬದಲಿಗೆ ಯಾವುದೋ ಧಾರ್ಮಿಕ ನಾಯಕರ, ರಾಜಕೀಯ ನಾಯಕರ ಡೀಪ್ ಫೇಕ್ ವಿಡಿಯೊ ಹಾಕಿ ನಕಲಿ ಸಂದೇಶ ಕೊಟ್ಟಿದ್ದರೆ ಅದು ನಕಲಿ ಎಂದು ಗೊತ್ತಾಗುವುದರೊಳಗೆ ಭಾರೀ ಅನಾಹುತಗಳನ್ನು ಮಾಡಿ ಬಿಡುತ್ತಿತ್ತು. ಹೀಗಾಗಿ ಯಾವುದೇ ತಂತ್ರಜ್ಞಾನ ಅದನ್ನು ಯಾರು ಬಳಸುತ್ತಾರೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ ಎಂದರು.

 

ಪತ್ರಿಕೋದ್ಯಮ ತನ್ನ ವೇಗದಲ್ಲಿ ಸುದ್ದಿ ಮತ್ತು ವಿಶ್ಲೇಷಣೆಗಳ ನಡುವೆ ವ್ಯತ್ಯಾಸವನ್ನೇ ಅಳಿಸಿಬಿಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಈಗ ಪತ್ರಿಕೋದ್ಯಮದಲ್ಲಿ ಊಹಾ ಪತ್ರಿಕೋದ್ಯಮ ಎನ್ನುವ ಅನಾಹುತಕಾರಿ ಬೆಳವಣಿಗೆ ಶುರುವಾಗಿದೆ. ಈ ಊಹೆಗೆ ಮಿತಿಯೇ ಇಲ್ಲ. ಕಣ್ಣ ಮುಂದಿರುವ ಸತ್ಯವನ್ನು ತನಗೆ ಬೇಕಾದಂತೆ ಊಹಾ ಪತ್ರಿಕೋದ್ಯಮ ಚಿತ್ರಿಸುತ್ತಿದೆ ಎಂದರು. 

ನಿತ್ಯದ ಅಗತ್ಯ ವಸ್ತು ಸಂಗತಿಗಳಲ್ಲಿ ಪತ್ರಿಕೆಗಳೂ ಸೇರಿವೆ. ಪತ್ರಿಕೆಗಳ ವಿಶ್ವಾಸಾರ್ಹತೆ ಉಳಿದ ಮಾಧ್ಯಮಗಳಿಗಿಂತ ಹೆಚ್ಚಾಗಿದೆ. ಹೀಗಾಗಿ ಇತರೆ ಯಾವುದೇ ಮೂಲದಿಂದ ಸುದ್ದಿ ಬಂದರೂ ಅದರ ಸತ್ಯಾಸತ್ಯತೆಗೆ ಜನ ಪತ್ರಿಕೆಗಳ ಮೇಲೆ ಅಬಲಂಬಿತರಾಗಿದ್ದಾರೆ. ಸಮಾಜ ಮತ್ತು ಸರ್ಕಾರದ ನಡುವೆ ಪತ್ರಿಕೆಗಳು ಸೇತುವೆ ಇದ್ದಂತೆ ಎಂದು ಅಭಿಪ್ರಾಯಪಟ್ಟರು.

 

ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ವಿಜ್ಞಾನ ಬರಹಗಾರರಾದ ನಾಗೇಶ್ ಹೆಗ್ಡೆ, ತಂತ್ರಜ್ಞಾನ ವಿಶ್ಲೇಷಕ ಶ್ರೀನಿಧಿ ಮತ್ತು ಕಾವ್ಯಶ್ರೀ,  ಮಾಧ್ಯಮ‌ ಅಕಾಡೆಮಿ ಕಾರ್ಯದರ್ಶಿ ರೂಪ ಸೇರಿ ಹಲವರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top