ಬೆಂಗಳೂರು: ವಿಜ್ಞಾನದ ಬಲದಿಂದ ಮನುಷ್ಯನ ಹುಟ್ಟು ಮತ್ತು ಸಾವು ನಿರ್ಧರಿಸುವ ಕಾಲ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ಟೌನ್ ಹಾಲ್ ನಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯವರು ಏರ್ಪಡಿಸಿದ್ದ ವೀರಭದ್ರೇಶ್ವರ ಜಯಂತ್ಯುತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೀರಭದ್ರ ಪದದ ಅರ್ಥ ವೀರತ್ವದಿಂದ ಬದುಕಿದರೆ ಬದುಕು ಯಶಸ್ಸು ಕಾಣಿಸುತ್ತದೆ. ವೀರತ್ವ ಅಂದರೆ ಬರೆ ಶೌರ್ಯ ಸಾಹಸ ಅಷ್ಟೇ ಅಲ್ಲ. ಪರೀಕ್ಷಾ ಸಂದರ್ಭದಲ್ಲಿ ಸವಾಲನ್ನು ಎದುರಿಸುವ ಗುಣ ವೀರಭದ್ರನ ಲಕ್ಷಣ ಎಂದು ಹೇಳಿದರು.
ಇಸ್ರೊ ಅಧ್ಯಕ್ಷ ಸೋಮನಾಥ ಅವರ ಮುಖದಲ್ಲಿ ಮಗುವಿನ ಮುಗ್ದತೆ ಈಗಲೂ ಇದೆ. ಅವರು ಇಸ್ರೊದ ಮೂಲಕ ಚಂದ್ರಯಾನ 3 ಯಶಸ್ವಿಗೊಳಿಸುವ ಮೂಲಕ ದೇಶದ ಗೌರವ ಹೆಚ್ಚಿಸಿದ್ದಾರೆ.
ವಿಜ್ಞಾನ ಮತ್ತು ಆದ್ಯಾತ್ಮ ಎರಡೂ ಮುಖ್ಯ, ಆಧ್ಯಾತ್ಮ ಆತ್ಮವಿಶ್ವಾಸ ಹುಟ್ಟಿಸುತ್ತದೆ. ವಿಜ್ಞಾನ ವೈಜ್ಞಾನಿಕ ಬದುಕು ಕಲಿಸುತ್ತದೆ. ವಿಜ್ಞಾನ ಇಲ್ಲದಿದ್ದರೆ ಯಾವುದೇ ಆಧುನಿಕ ವಸ್ತುಗಳು ಇರುತ್ತಿರಲಿಲ್ಲ. ವಿಜ್ಞಾನ ಎನ್ನುವುದು ಒಂದು ಗಣಿತದ ಮಾದರಿ, ಭೂಮಿಯಿಂದ ಸೂರ್ಯ ಎಷ್ಟು ದೂರ ಇದ್ದಾನೆ ಎನ್ನುವುದನ್ನು ವಿಜ್ಞಾನದ ಮೆಥೆಮೆಟಿಕಲ್ ಮಾಡೆಲ್ ಮೂಲಕ ಅಳೆಯಲಾಗುತ್ತದೆ ಎಂದರು.
ಜಗತ್ತಿನಲ್ಲಿ ಒಂದು ಕೆಲಸ ಎರಡು ಬಾರಿ ಆಗುತ್ತದೆ. ಒಂದು ಮನಸಿನಲ್ಲಿ ಮತ್ತೊಂದು ವಾಸ್ತವಿಕತೆಯಲ್ಲಿ ಆಗುತ್ತದೆ. ಸಾಮಾನ್ಯ ಮನುಷ್ಯ ಶೇ 8% ರಷ್ಟು ಮೆದಳು ಉಪಯೋಗಿಸುತ್ತಾನೆ. ವಿಜ್ಞಾನಿಗಳು ಶೇ 20% ರಷ್ಟು ಮೆದಳು ಉಪಯೋಗಿಸುತ್ತಾರೆ. ಮನುಷ್ಯನ ಶೇ 80 ರಷ್ಟು ಮೆದುಳು ಇನ್ನೂ ಬಳಕೆಯಾಗಬೇಕಿದೆ. ಅದರ ಪರಿಣಾಮವಾಗಿಯೇ ಕೃತಕ ಬುದ್ದಿಮತ್ತೆ ಬಂದಿದೆ. ಈಗಾಗಲೇ ವಿಜ್ಞಾನದ ಬಲದಿಂದ ಮನುಷ್ಯನ ಸಾವನ್ನು ಮುಂದೂಡುವಂತಾಗಿದೆ. ಹುಟ್ಟು ಮತ್ರು ಸಾವು ನಿಯಂತ್ರಿಸುವ ಕಾಲ ಬರಲಿದೆ ಎಂದರು.
ಇಸ್ರೋ ಚಂದ್ರಯಾನ ಮಾಡಿರುವುದರಿಂದ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ವಿಜ್ಞಾನದ ಕಡೆಗೆ ವಾಲುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ವಿಜ್ಞಾನಿಗಳು ಹುಟ್ಟಿಕೊಳ್ಳಬಹುದು.ಇಸ್ರೋ ಅಧ್ಯಕ್ಷರಿಗೆ ವೀರಭದ್ರೇಶ್ವರ ಅವರ ಪ್ರಶಸ್ತಿ ನೀಡಿರುವುದು ಅತ್ಯಂತ ಸಮಂಜಸವಾಗಿದೆ. ಇದಕ್ಕೆ ವಿಜ್ಞಾನಕ್ಕೆ ಗೌರವ ಸಲ್ಲಿಸಿದಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ಬರ ಸ್ವಾಮೀಜಿ, ಗೌರಿಗದ್ದೆ ಆಶ್ರಮದ ಆಧ್ಯಾತ್ಮ ಸಾಧಕರು ವಿನಯ್ ಗುರೂಜಿ, ಇಸ್ರೋ ಅಧ್ಯಕ್ಷ ಎಸ್. ಸೋಮನಾಥ ಹಾಗೂ ಮತ್ತಿತರರು ಹಾಜರಿದ್ದರು.