ರಾಜ್ಯಕ್ಕೆ ಮತ್ತೊಮ್ಮೆ ಜೆಡಿಎಸ್ ಆಡಳಿತದ ಅಗತ್ಯವಿದೆ

ದೇವನಹಳ್ಳಿ: ಎರಡು ರಾಜಕೀಯ ಪಕ್ಷಗಳ ನಿರ್ಲಕ್ಷ್ಯ ದಿಂದ ನಮ್ಮ ರಾಜ್ಯದ ನದಿಗಳ ನೀರನ್ನು ನಾವೇ ಉಪಯೋಗಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಜನರು ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟವನ್ನು ಎದುರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜ್ಯದ ಜನತೆ ಬಗ್ಗೆ ಕಳವಳ ವ್ಯಕ್ತ ಪಡಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರದ ಜ್ಯೂನಿಯರ್ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಿದ್ದ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕದಾದ್ಯಂತ ಜನತಾ ಜಲಾಧಾರೆ ಪ್ರಾರಂಭವಾಗಿದ್ದು ಇದು ರೈತರ ಪರವಾಗಿ ನಡೆಯುತ್ತಿರುವ ಹೋರಾಟ. 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಗೆಲುವಿಗೆ ಕಾರಣರಾದರೆ ಜನ ನೆಮ್ಮದಿಯಿಂದ ಬದುಕಲು ಬೇಕಾದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನರ ಕಷ್ಟಕ್ಕೆ ಸ್ಪಂದಿಸುತ್ತೇವೆ. ಮೇಕೆದಾಟು ಯೋಜನೆ, ಎತ್ತಿನ ಹೊಳೆ ನೀರಾವರಿ ಯೋಜನೆ ಯಾವುದೂ ಪೂರ್ಣಗೊಳ್ಳದೆ ಬಿಡುಗಡೆಯಾದ ಅನುದಾನಗಳು ಮತ್ತಷ್ಟು ಅನುದಾನಗಳ ಬೇಡಿಕೆಏರಿಕೆಯಾಗುತ್ತಿದೆಯೇ ಹೊರತು ಯೋಜನೆ ಫಲ ನೀಡುತ್ತಿಲ್ಲ. ರೈತರಿಗೆ ನೀರು‌ ಕೊಡುವ ವಿಚಾರದಲ್ಲಿ ರಾಜಕೀಯ ಮಾಡಿದರೆ ರೈತನ ಸ್ಥಿತಿ ಧಾರುಣ ವಾಗುತ್ತದೆ. ಚಿಂತಾಜನಕವಾಗುತ್ತದೆ ಎಂಬುದು ಆಡಳಿತ ಪಕ್ಷಗಳಿಗೆ ಅರಿವಾಗುತ್ತಿಲ್ಲ.

ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 8 ಸಾವಿರ ಕೋಟಿ ಹಣ ಬಿಡುಗಡೆಯಾಗುತ್ತದೆ. ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲು 3 ರಿಂದ 4 ಲಕ್ಷ ಕೋಟಿ ರೂ ಹಣ ಬೇಕಾಗುತ್ತದೆ. ಆದರೆ ಈಗಿನ ಸರ್ಕಾರದ ನಡೆಯನ್ನು ನೋಡಿದರೆ ಖಂಡಿತಾ ಈ ಯೋಜನೆಗಳು ಸಫಲಗೊಂಡು ನೀರಿನ ಸಮಸ್ಯೆ ಬಗೆಹರಿಯುವುದು ಕನಸಿನ ಮಾತು. 1994 ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 30 ವರ್ಷಗಳಿಂದ ಸಾಧ್ಯವಾಗದೇ ಹೋದ ಯೋಜನೆಯನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸಿ ಉತ್ತರ ಕರ್ನಾಟಕದ ಜನತೆಗೆ ನೀರಿನ ಸಮಸ್ಯೆ ಬಗೆಹರಿಸಿದರು. ಈಗ ಮತ್ತೆ ಜೆಡಿಎಸ್ ಸರ್ಕಾರದಿಂದಲೇ ಜನ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ದೇವನಹಳ್ಳಿ ಕೆಂಪೇಗೌಡ ವೃತ್ತದಿಂದ 400 ದ್ವಿಚಕ್ರ ವಾಹನಗಳ ರಾಲಿ ಮೂಲಕ ವಿಜಯಪುರಕ್ಕೆ ಬರಮಾಡಿಕೊಳ್ಳಲಾಯಿತು. ನಂದಿ ಧ್ವಜ ಕುಣಿತ, ಪಟ ಕುಣಿತ, ವೀರಗಾಣೆ, ಡೊಳ್ಳು ಕುಣಿತ, ಗರಡಿ ಗೊಂಬೆಗಳು ಮೂಲಕ ಸ್ವಾಗತಿಸಲಾಯಿತು.
ಅಭಿಮಾನಿಗಳು ಕ್ರೈನ್ ಮೂಲಕ ಆಪಲ್ ಹಾರ ಹಾಕಿ ಸ್ವಾಗತಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಜನತಾ ಜಲಧಾರೆ ಕಾರ್ಯಕ್ರಮ ನಡೆಯುತ್ತಿದ್ದು, ಸಮಗ್ರ ನೀರಾವರಿ ಯೋಜನೆಯನ್ನು ನಾಡಿನ ಮಣ್ಣಿನ ಮಕ್ಕಳಾದ ರೈತರಿಗೆ ಹಾಗೂ ಪ್ರತಿಯೊಬ್ಬ ಪ್ರಜೆಗೂ ನೀರಿನ ಅನುಕೂಲತೆ ಮಾಡಿ ಕೊಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. 2023 ರ ಚುನಾವಣಾ ಸಮಯಕ್ಕೆ ಪೂರ್ಣ ಬಹುಮತದೊಂದಿದೆ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ. ಕುಮಾರಸ್ವಾಮಿ ಯವರು ಮುಖ್ಯಮಂತ್ರಿ ಯಾಗಿದ್ದಾಗ ಸುಮಾರು 28 ಸಾವಿರ ಕೋಟಿ ರೂಗಳಷ್ಟು ರೈತರ ಸಾಲ ಮನ್ನಾ ಮಾಡಿದ್ದಾರೆ. ಇಂತಹ ಕರುಣಾಮಯಿ ವ್ಯಕ್ತಿಯನ್ನು ಮತ್ತೆ ನಮ್ಮ ರಾಜ್ಯದ ಮುಖ್ಯ ಮಂತ್ರಿಯನ್ನಾಗಿ ಮಾಡಲು ಜನ ಮುಂದಿನ ಚುನಾವಣೆಯಲ್ಲಿ ಎರಡು ರಾಜಕೀಯ ಪಕ್ಷಗಳನ್ನು ಧೂಳಿಪಟ ಮಾಡಿ ಕುಮಾರಸ್ವಾಮಿ ಯವರನ್ನು ಬಹುಮತಗಳಿಂದ ಗೆಲ್ಲಿಸಬೇಕಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ. ಬಿ, ತಾಲ್ಲೂಕು ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ, ಬಮೂಲ್ ಮಾಜಿ ಅಧ್ಯಕ್ಷ ಅಪ್ಪಯ್ಯಣ್ಣ, ಯುವ ಮುಖಂಡ ರವೀಶ್, ವಿಜಯಪುರ ಪುರಸಭೆ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷ ಕೇಶವಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಹಾಪ್ ಕಾಮ್ಸ್ ನಿರ್ದೇಶಕ ಶ್ರೀನಿವಾಸ್, ಅಲ್ಪಸಂಖ್ಯಾತ ಘಟಕದ ತಾಲ್ಲೂಕು ಅಧ್ಯಕ್ಷ ಆಸೀಫ್, ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top