ಕೋಲಾರ/ಬಂಗಾರಪೇಟೆ: ಬರಪೀಡಿತ ಜಿಲ್ಲೆಯ ಕೋಲಾರ, ಬಂಗಾರಪೇಟೆ ಹಾಗೂ ಮಾಲೂರು ತಾಲೂಕಿನ 45ಕ್ಕೂ ಹೆಚ್ಚು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯರಗೋಳ್ ಯೋಜನೆ ಮೂರ್ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಕೂಡಲೇ ಚರ್ಚೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದರು. ಜನತಾ ಜಲಧಾರೆ ಕಾರ್ಯಕ್ರಮದ ಪ್ರಯುಕ್ತ ಯರಗೋಳ್ ಜಲಾಶಯದಲ್ಲಿ ಕಳಸಕ್ಕೆ ನೀರು ಸಂಗ್ರಹ ಮಾಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಯರಗೋಳ್ ಬಹಳ ಉಪಯುಕ್ತವಾದ ಯೋಜನೆ. ಹಲವಾರು ವರ್ಷಗಳಿಂದ ಈ ಭಾಗದ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ನೆನೆಗುದಿಗೆ ಬಿದ್ದಿತ್ತು. 2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲೆಯ ಚಿತ್ರಾವತಿ ಜಲಾಶಯವನ್ನು ಉದ್ಘಾಟನೆ ಮಾಡಲು ಬಾಗೇಪಲ್ಲಿಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರು ಯರಗೋಳ್ ಯೋಜನೆಯ ದುಃಸ್ಥಿತಿಯನ್ನು ನನ್ನ ಗಮನಕ್ಕೆ ತಂದಿದ್ದರು ಎಂದು ಕುಮಾರಸ್ವಾಮಿ ಅವರು ನೆನಪು ಮಾಡಿಕೊಂಡಡರು. ಅಲ್ಲಿಂದ ಬೆಂಗಳೂರಿಗೆ ವಾಪಸ್ ಬಂದ ಮೇಲೆ ಯೋಜನೆಯ ಸಮಗ್ರ ಮಾಹಿತಿಯನ್ನು ತರಿಸಿಕೊಂಡೆ ಪರಿಶೀಲನೆ ನಡೆಸಿದೆ. ಆವರೆಗೆ ಸರಕಾರದಿಂದ ಯೋಜನೆಗೆ ಅನುದಾನವನ್ನೇ ನೀಡಿರಲಿಲ್ಲ ಎಂಬ ಮಾಹಿತಿ ಸಿಕ್ಕಿತು. ಆಗ ನಾನು ಈ ಯೋಜನೆಗೆ ಬಜೆಟ್ʼನಲ್ಲಿ 50 ಕೋಟಿ ರೂ. ಅನುದಾನ ತೆಗೆದಿಟ್ಟಿದ್ದೆ. ಇದಾದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಲಾ ಐದು ವರ್ಷ ಸರಕಾರ ಮಾಡಿದ್ದವು. ಆಗಲೂ ಕೆಲಸ ಆಗಲಿಲ್ಲ. ಮತ್ತೆ 14 ತಿಂಗಳು ನಾನು ಸಿಎಂ ಆಗಿದ್ದಾಗ ಸರಿಯಾದ ಮಾಹಿತಿಯನ್ನು ಯಾರೂ ನೀಡಿರಲಿಲ್ಲ. ಒಂದು ವೇಳೆ ತಿಳಿಸಿದ್ದಿದ್ದರೆ ಈ ಹೊತ್ತಿಗೆ ಯೋಜನೆ ಪೂರ್ಣಗೊಳಿಸುತ್ತಿದ್ದೆ ಎಂದು ಅವರು ತಿಳಿಸಿದರು.
ಮುಖ್ಯ ಎಂಜಿನಿಯರ್ ಜತೆ ಚರ್ಚೆ:
ಯರಗೋಳ್ ಯೋಜನೆಗೆ ಯಾವುದೇ ಕಾನೂನಿನ ತೊಡಕು ಇರಲಿಲ್ಲ. ಆದರೂ ರಾಷ್ಟ್ರೀಯ ಪಕ್ಷಗಳು ಯೋಜನೆಯನ್ನು ಪೂರ್ಣ ಮಾಡಲೇ ಇಲ್ಲ. ಈ ಜಲಾಶಯಕ್ಕೆ ಸಾಕಷ್ಟು ನೀರು ಹರಿದುಬರುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಷ್ಟೇ. ಈ ಬಗ್ಗೆ ನಾನು ಮುಖ್ಯ ಎಂಜಿನಿಯರ್ ಸೇರಿ ಸಂಬಂಧಪಟ್ಟ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಜತೆಯೂ ಮಾತನಾಡಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.ಹಣ ಬಿಡುಗಡೆ ಆಗಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. 160 ರಿಂದ 180 ಕೋಟಿ ರೂ. ವೆಚ್ಚದ ಪರಿಷ್ಕೃತ ಅಂದಾಜು ಪ್ರಸ್ತಾವನೆಯನ್ನು ಸರಕಾರಕ್ಕೆ ಕಳಿಸಿದ್ದಾರೆಂಬ ಮಾಹಿತಿ ನೀಡಿದ್ದಾರೆ ಅಧಿಕಾರಿಗಳು. ಆ ಬಗ್ಗೆ ಮುಖ್ಯಮಂತ್ರಿಗಳ ಜತೆಯೂ ಮಾತನಾಡುತ್ತೇನೆ. ಅಲ್ಲದೆ, ಈ ಯೋಜನೆ ಕುರಿತ ಎಲ್ಲ ಮಾಹಿತಿ ತೆಗೆದುಕೊಂಡು ಮುಂದಿನ ವಾರ ನನ್ನ ಭೇಟಿಯಾಗುವಂತೆ ಮುಖ್ಯ ಎಂಜಿನಿಯರ್ ಅವರಿಗೆ ಹೇಳಿದ್ದೇನೆ. ಮೂರು ನಾಲ್ಕು ತಿಂಗಳಲ್ಲಿ ಇಡೀ ಯೋಜನೆ ಮುಗಿಯುವುದರ ಬಗ್ಗೆ ಸರಕಾರದ ಗಮನ ಸೆಳೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.
ಏನಿದು ಯರಗೋಳ್ ಯೋಜನೆ?:
ಕುಡಿಯುವ ನೀರಿನ ಉದ್ದೇಶದ ಯರಗೋಳ್ ಜಲಾಶಯದಲ್ಲಿ 500 ಎಂಸಿಎಫ್ಟಿ ಸಾಮರ್ಥ್ಯದ ನೀರು ಸಂಗ್ರಹಣೆಯಾಗಲಿದೆ. ಡ್ಯಾಂ ತುಂಬಿ ಹರಿದರೆ 375 ಎಕರೆ ಭೂ ಪ್ರದೇಶವು ಮುಳುಗಡೆಯಾಗಲಿದೆ. ಒಮ್ಮೆ ತುಂಬಿದರೆ ಕನಿಷ್ಠ ಎರಡು ವರ್ಷ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ. ಯರಗೋಳ್ ಡ್ಯಾಂ ನಿರ್ಮಾಣಕ್ಕೆ 375 ಎಕರೆ ಭೂ ಪ್ರದೇಶ ವಶಪಡಿಸಿಕೊಳ್ಳಲಾಗಿದೆ. ರೈತರಿಂದ 95 ಎಕರೆ, ಅರಣ್ಯ ಇಲಾಖೆಯಿಂದ 154 ಎಕರೆ ಮತ್ತು 126 ಎಕರೆ ಸರ್ಕಾರಿ ಭೂ ಪ್ರದೇಶವನ್ನು ವಶಪಡಿಸಿಕೊಳ್ಳಲಾಗಿದೆ. ರೈತರಿಗೆ ಪರಿಹಾರವಾಗಿ ಒಟ್ಟು 5.19 ಕೋಟಿ ರೂ. ಬಿಡುಗಡೆ ಮಾಡಿ ವಿತರಣೆಗೆ ಕೋಲಾರ ಉಪ ಭಾಗಾಧಿಕಾರಿಗಳಿಗೆ ಬಿಡುಗಡೆ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ. ಯರಗೋಳ್ ಅಣೆಕಟ್ಟೆಯನ್ನು ಎರಡು ಬೆಟ್ಟಗಳ ಮಧ್ಯೆ ಅಡ್ಡಲಾಗಿ ನಿರ್ಮಾಣ ಮಾಡಲಾಗುತ್ತಿದ್ದು, 414 ಮೀಟರ್ ಉದ್ದ, 30 ಮೀಟರ್ ಎತ್ತರ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ. ಡ್ಯಾಂ ನಿರ್ಮಾಣ ವೇಳೆಗೆ ನೀರು ಪೂರೈಕೆಗೆ ಅಗತ್ಯ ತಾಂತ್ರಿಕತೆಗಳನ್ನು ಅಳವಡಿಸಲಾಗುವುದೆಂದು ಆಧಿಕಾರಿಗಳು ತಿಳಿಸಿದ್ದಾರೆ.