ಬೆಂಗಳೂರು : ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸಬೇಕು. ಇಲ್ಲವಾದಲ್ಲಿ ರಸ್ತೆ ತೆರಿಗೆ ರದ್ದುಪಡಿಸಬೇಕು. ರ್‍ಯಾಪಿಡೊ ಬೈಕ್ ಟ್ಯಾಕ್ಸಿ ನಿಷೇಧಿಸುವ ಜೊತೆಗೆ ಖಾಸಗಿ ವಾಹನ ಚಾಲಕರಿಗೆ ಮಾಸಿಕ ೧೦ ಸಾವಿರ ಸಹಾಯಧನ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ನಗರದಲ್ಲಿ ನಡೆಸಿದ ಬೆಂಗಳೂರು ಬಂದ್ ಬಹುತೇಕ ಯಶಸ್ವಿಯಾಗಿದ್ದು, ಸರ್ಕಾರ ಕೆಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದೆ. ಮುಷ್ಕರನಿರತ ಸ್ವಾತಂತ್ರ್ಯ ಉದ್ಯಾನಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಈಡೇರಿಸಲು ಸಾಧ್ಯವಿರುವ ಬೇಡಿಕೆಗಳನ್ನು ಮಂಗಳವಾರದ ವೇಳೆಗೆ ಜಾರಿಗೊಳಿಸುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಚಾಲಕರ ಶ್ರೇಯೋಭಿವೃದ್ಧಿಗಾಗಿ ನಿಗಮ ರಚನೆ, ಚಾಲಕರಿಗೆ ಸಾಲ ಸೌಲಭ್ಯ, ಮತ್ತಿತರ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದರು. ಬೈಕ್ ಟ್ಯಾಕ್ಸಿ ನಿಷೇಧಿಸುವುದು ಸೇರಿದಂತೆ ಇತರೆ ಹಲವು ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಒಕ್ಕೂಟದ ಪ್ರತಿನಿಧಿಗಳು ಮಂಗಳವಾರದ ವೇಳೆಗೆ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಂದ್ ನಿಂದಾಗಿ ನಗರದೆಡೆ ಹಲವೆಡೆ ಪ್ರಯಾಣಿಕರು ಪರದಾಡಿದರೆ, ಬಂದ್ ನಿರ್ಲಕ್ಷಿಸಿ ಸಂಚರಿಸಿದ ಖಾಸಗಿ ವಾಹನಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ಮುಷ್ಕರ ನಿರತರು ದೂಂಡಾವರ್ತನೆ ತೋರಿದರು. ಚಾಲಕರ ಮೇಲೆ ಹಲ್ಲೆ, ಕಾನೂನ ಕೈಗೆತ್ತಿಕೊಂಡು ರಂಪಾಟ ಮಾಡಿದರು. ರಸ್ತೆ ತಡೆಗೆ ಅಡ್ಡಿಪಡಿಸಲು ಬಂದ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದರು. ಬಂದ್ ಬೆಂಬಲಿಸಿ ನಗರ ಸೇರಿ ವಿವಿಧ ಭಾಗಗಳಿಂದ ಬಂದಿದ್ದ ಖಾಸಗಿ ವಾಹನಗಳ ಚಾಲಕರು ಮಾಲೀಕರು ಮೆರವಣಿಗೆ ನಡೆಸಿ ಫ್ರಿಡಂಪಾರ್ಕ್ ನಲ್ಲಿ ಸಮಾವೇಶಗೊಂಡು ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಿಂದಾಗಿ ನಗರದ ಹಲವೆಡೆ ವಾಹನ ಸಂಚಾರ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.
ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಸುಮಾರು ೪ ಲಕ್ಷ ಆಟೋ, ೨ ಲಕ್ಷ ಟ್ಯಾಕ್ಸಿ, ೩೦ ಸಾವಿರ ಗೂಡ್ಸ್ ವಾಹನಗಳು, ೮ ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, ೯೦ ಸಾವಿರ ಸಿಟಿ ಟ್ಯಾಕ್ಸಿ, ಕಾರ್ಪೊರೇಟ್ ಕಂಪನಿ ಬಸ್‌ಗಳು ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಇದರಿಂದ ನಗರದಲ್ಲಿ ಸಂಚರಿಸುವ ದೂರ ದೂರಗಳಿಗೆ ಹೋಗುವ ಪ್ರಯಾಣಿಕರು ಪರದಾಡುವಂತಾಗಿತ್ತು,ಕ್ಯಾಬ್ ಇಲ್ಲದೇ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಬಿಎಂಟಿಸಿ ಬಸ್ ನಲ್ಲಿ ಮನೆಗೆ ತೆರಳಿ ಸರಳತೆ ಮೆರೆದು ವಿಶೇಷವಾಗಿತ್ತು.
ಓಲಾ, ಉಬರ್ ಆಟೋ ಟ್ಯಾಕ್ಸಿ ಸಂಚಾರ ಸ್ಥಗಿತಗೊಂಡರೆ,ಕಾರ್ಪೊರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್‌ಗಳು ಕೂಡ ಮುಷ್ಕರಕ್ಕೆ ಬೆಂಬಲ ಸೂಚಿಸಿರುವುದರಿಂದ ಖಾಸಗಿ ಹಾಗೂ ಸರ್ಕಾರಿ ಕಚೇರಿಗಳ ಉದ್ಯೋಗಿಗಳ ಹಾಜರಾತಿ ಕಡಿಮೆಯಾಗಿತ್ತು.ಖಾಸಗಿ ವಾಹನಗಳ ಮೂಲಕ ನೌಕರರು, ಕಾರ್ಮಿಕರು ತೆರಳುವ ಕಂಪನಿಗಳ ಕಚೇರಿಗಳು,ಐಟಿಬಿಟಿ ಕಂಪನಿಗಳು ಅದಕ್ಕೆ ಪೂರಕವಾದ ಕಂಪನಿಗಳ ಕಚೇರಿಗಳು, ಕಾರ್ಖಾನೆಗಳು, ಗಾರ್ಮೆಂಟ್ಸ್ ಗಳಲ್ಲಿ ಹಾಜರಾತಿ ತೀರಾ ಕಡಿಮೆಯಾಗಿರುವುದು ಕಂಡುಬಂದಿತು.ನಗರದಲ್ಲಿ ನಿನ್ನೆ ಮಧ್ಯ ರಾತ್ರಿ ೧೨ ರಿಂದ ಇಂದು ತಡ ರಾತ್ರಿ ೧೨ ರವರೆಗೆ ನಡೆಯಲಿರುವ ಈ ಖಾಸಗಿ ಸಾರಿಗೆ ಬಂದ್‌ನಿಂದಾಗಿ ಸಾರ್ವಜನಿಕರಿಗೆ ನಗರದಲ್ಲಿ ಪ್ರಯಾಣ ದುಸ್ತರವಾಗಿ ಪರಿಣಮಿಸಿತ್ತು. ಬಂದ್ ವೇಳೆ ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ಅನುಕೂಲಕ್ಕಾಗಿ ೫೦೦ ಕ್ಕೂ ಬಿಎಂಟಿಸಿ ಬಸ್‌ಗಳು ಹೆಚ್ಚುವರಿಯಾಗಿ ೪,೦೦೦ ಟ್ರಿಪ್ ಸಂಚರಿಸಿದರೂ ಪ್ರಯಾಣಿಕರ ಒತ್ತಡವನ್ನು ನಿಭಾಯಿಸುವುದು ಸಾಧ್ಯವಾಗಿಲ್ಲ. ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹಾಗೂ ಬೇಸರ ಹೊರಹಾಕಲು ೪೦ಕ್ಕೂ ಹೆಚ್ಚು ಖಾಸಗಿ ಸಾರಿಗೆ ಸಂಘಟನೆಗಳು ಬೆಂಗಳೂರು
ಬಂದ್ಗೆ ಕರೆ ಕೊಟ್ಟಿದ್ದು ನಗರದಲ್ಲಿ ಆಟೋ, ಕ್ಯಾಬ್, ವ್ಯಾನ್, ಗೂಡ್ಸ್ ವಾಹನ ಸೇರಿದಂತೆ ಯಾವ ಖಾಸಗಿ ಸಾರಿಗೆ ವಾಹನವೂ ರಸ್ತೆಗೆ ಇಳಿದಿರಲಿಲ್ಲ.
ಮೆಜೆಸ್ಟಿಕ್, ಕೆಎಸ್ಆರ್ ಟಿಸಿ ಆಟೋ ನಿಲ್ದಾಣದಲ್ಲಿ ಒಂದು ಆಟೋ ಕೂಡ ಕಂಡು ಬರಲಿಲ್ಲ. ಮುಂಜಾನೆಯೇ ಬೇರೆ, ಬೇರೆ ಊರುಗಳಿಂದ ಮೆಜೆಸ್ಟಿಕ್ ಗೆ ಆಗಮಿಸುತ್ತಿರುವ ಜನರು ಆಟೋಗಳು ಇಲ್ಲದೆ ಬಿಎಂಟಿಸಿ ಬಸ್ ಗಳತ್ತ ಮುಖ ಮಾಡಿದ್ದಾರೆ. ಲಗೇಜ್ ಹೆಚ್ಚಾಗಿದ್ದು, ಬಸ್ ನಲ್ಲಿ ಹೋಗಲು ಆಗದೇ, ಆಟೋ ಬೇಕು ಎನ್ನುವ ಪ್ರಯಾಣಿಕರಿಗೆ ಭಾರಿ ಸಮಸ್ಯೆ ಎದುರಾಗಿದೆ.
ಮಡಿವಾಳದಿಂದ ಖಾಸಗಿ ವಾಹನ ಚಾಲಕರು ರ್ಯಾಲಿ ಹೊರಟು ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು. ಗಡಿಭಾಗದಲ್ಲಿ ವಾಹನಗಳನ್ನು ತಡೆ ಹಿಡಿಯುತ್ತಿದ್ದವರನ್ನು ಪೋಲೀಸರು ನಿಯಂತ್ರಿಸಲು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೋಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ವಾಹನಗಳನ್ನು ತಡೆದರೆ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರಕ್ಕೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪ್ರಿಪೇಯ್ಡ್ ಆಟೋ, ಕ್ಯಾಬ್ ಚಾಲಕರ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರಿಪೇಯ್ಡ್ ಆಟೋ ಬಂದ್ ಆಗಿ ಪ್ರಯಾಣಿಕರು ಪರದಾಡುವಂತಾಗಿತ್ತು. ಬಂದ್‌ಗೆ ಬೆಂಬಲ ನೀಡದೇ ರಸ್ತೆಗಿಳಿದ ಕ್ಯಾಬ್‌ಗೆ ಚಾಲಕರಿಗೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹೆಬ್ಬಾಳದಲ್ಲಿ ನಡೆದಿದೆ.
ಜಾಲಹಳ್ಳಿ ಕ್ರಾಸ್ ಬಳಿ ಆಟೋ ಚಾಲಕರು ವಾಹನಗಳನ್ನು ತಡೆಯುತ್ತಿದ್ದಾರೆ. ಬಾಡಿಗೆ ಹೊಡೆಯುತ್ತಿದ್ದ ಆಟೋ, ಕ್ಯಾಬ್‌ಗಳನ್ನು ತಡೆದು ಚಾಲಕರಿಗೆ ತರಾಟೆಗೆ ತೆಗೆದುಕೊಂಡರು. ನಗರದಲ್ಲಿ ಬೆಳಿಗ್ಗೆ ಏಳು ಗಂಟೆಯಿಂದ ಆಟೋ ಸಂಚಾರ ಸ್ಥಗಿತಗೊಂಡಿದ್ದು,ಮುಂಜಾನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಪಿಕ್ ಆಪ್ ಮಾಡುತ್ತಿದ್ದ ಆಟೋ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಮುಷ್ಕರ ಹಿನ್ನೆಲೆಯಲ್ಲಿ ಕಲಾಸಿಪಾಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ೨೫೦ಕ್ಕೂ ಹೆಚ್ಚು ಬಸ್‌ಗಳು ರಸ್ತೆಗೆ ಇಳಿದಿಲ್ಲ.ಶಕ್ತಿ ಯೋಜನೆಯಿಂದ ಖಾಸಗಿ ಬಸ್‌ಗೆ ಭಾರಿ ಹೊಡೆತ ಬಿದ್ದಿದೆ ಎಂದು ಖಾಸಗಿ ಬಸ್ ಮಾಲಿಕರು ಮತ್ತು ಚಾಲಕರು ಅಳಲು ತೋಡಿಕೊಂಡರು.