ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಒಟ್ಟು ರಾಜ್ಯದಲ್ಲಿ 5,52,08,565 ಮತದಾರರು ಹಕ್ಕು ಹೊಂದಿದ್ದಾರೆ.
ರಾಜ್ಯ ಚುನಾವಣಾ ಆಯೋಗವು ಪರಿಷ್ಕೃತ 2025 ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಈ ಬಾರಿ ಇತಿಹಾಸದಲ್ಲೆ ಮೊದಲ ಬಾರಿಗೆ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿರುವುದು ವಿಶೇಷವಾಗಿದೆ.
2025ರ ಅಂತಿಮ ಪರಿಷ್ಕೃತ ಪಟ್ಟಿ ಪ್ರಕಾರ, ರಾಜ್ಯದಲ್ಲಿ 5,52,08,565 ಮತದಾರರು ಇದ್ದಾರೆ. ಇದರಲ್ಲಿ 2,76,40,836 ಮಹಿಳಾ ಮತದಾರರು ಹಾಗೂ 2,75,62,634 ಸೇರಿದಂತೆ ಪುರುಷ ಮತದಾರರು ಇದ್ದಾರೆ. 2024ರಲ್ಲಿ 5,37,83,534 ಮತದಾರರು ಇದ್ದರು. ಈ ಬಾರಿ ಸರಿಸುಮಾರು 1 ಲಕ್ಷಕ್ಕೂ ಹೆಚ್ಚು ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.
ಹೊಸದಾಗಿ ಸೇರ್ಪಡೆಯಾದ ಪಟ್ಟಿಯಲ್ಲಿ 30,999 ಪುರುಷ ಮತದಾರರು, 72,754 ಮಹಿಳಾ ಮತದಾರರು 30 ಇತರರು ಸೇರಿದಂತೆ ಒಟ್ಟು 1,03,776 ಮತದಾರರು ಮತದಾನದ ಹಕ್ಕು ಪಡೆದಿದ್ದಾರೆ.
ಒಟ್ಟು 61,320 ಪುರುಷರು, 59,906 ಮಹಿಳೆಯರು, 65 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು ನಿವ್ವಳ 1,21,226ಕ್ಕೆ ಹೆಚ್ಚಳವಾಗಿದೆ. ಈ ಬಾರಿ 1483 ಸಾಗೋತ್ತರ ಮತದಾರರು, 6,36,551 ಮಂದಿ 85 ವರ್ಷಕ್ಕಿಂತ ಮೇಲ್ಪಟ್ಟವರು, 21,551 ಶತಾಯುಷಿಗಳು, 6,28,554 ದಿವ್ಯಾಂಗರು ಸೇರ್ಪಡೆಯಾಗಿದ್ದಾರೆ.
2025ರ ಪರಿಷ್ಕೃತ ಪಟ್ಟಿ ಪ್ರಕಾರ ಒಂದು ಸಾವಿರ ಜನಸಂಖ್ಯೆ ಲಿಂಗಾನುಪಾತಕ್ಕೆ 973 ಮತದಾರರು ಇದ್ದಾರೆ. ಕರಡು ಮತದಾರರ ಪಟ್ಟಿ 2025ರ ಪ್ರಕಾರ ರಾಜ್ಯದಲ್ಲಿ 5,51,04,782 ಸಾಮಾನ್ಯ ಮತದಾರರು ಇದ್ದಾರೆ. ಇದರಲ್ಲಿ 2,75,31,635 ಪುರುಷ ಮತದಾರರು, 2,75,68,082 ಮಹಿಳೆಯರು, 5065 ಇತರೆ ಮತದಾರರು ಸೇರ್ಪಡೆಯಾಗಿದ್ದಾರೆ.
ಅಂತಿಮ ಪಟ್ಟಿಯಲ್ಲಿ 5,52,08, 565 ಏರಿಕೆಯಾಗಿದೆ. ಇದರಲ್ಲಿ 2,75,62,634 ಪುರುಷ ಮತದಾರರು, 2,76,40,836 ಮಹಿಳಾ ಮತದಾರರು, 5,095 ಇತರ ಮತದಾರರು ಸೇರಿದ್ದಾರೆ ಎಂದು ಆಯೋಗ ತಿಳಿಸಿದೆ.
ಕರಡುಪಟ್ಟಿಗೆ ಹೋಲಿಸಿದರೆ 1,03,783 ಹೆಚ್ಚಳವಾಗಿದೆ. ಇದರಲ್ಲಿ ಅತಿಹೆಚ್ಚು ಅಂದರೆ ಮಹಿಳೆಯರ ಸಂಖ್ಯೆ 72,754 ಹಾಗೂ 3,999 ಪುರುಷರು, 30 ಇತರೆ ಮತದಾರರು ಇದ್ದಾರೆ. ಈ ಬಾರಿಯು ರಾಜ್ಯದ 224 ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ಅತಿಹೆಚ್ಚು ಮತದಾರರನ್ನು ಹೊಂದಿರುವ ವಿಧಾನಸಭಾ ಕ್ಷೇತ್ರವಾಗಿದೆ. ಇಲ್ಲಿ 7,67,416 ಮತದಾರರು ಇದ್ದಾರೆ.
ರಾಜ್ಯದಲ್ಲೇ ಅತಿಹೆಚ್ಚು ಚಿಕ್ಕ ವಿಧಾನಸಭಾ ಕ್ಷೇತ್ರವಾಗಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರ ಹೊಂದಿದೆ. ಇಲ್ಲಿ 1,68,886 ಮತದಾರರು ಇದ್ದಾರೆ.