ಜನತೆಯ ಹೋರಾಟದ ಫಲವಾಗಿ ಭಗತ್ ಸಿಂಗ್ ಕುರಿತ ಪಾಠ ಮರು ಸೇರ್ಪಡೆ

ಬಳ್ಳಾರಿ: ರಾಜ್ಯದ ಪ್ರಜ್ಞಾವಂತ ಜನತೆ, ಬುದ್ಧಿಜೀವಿಗಳು, ಶಿಕ್ಷಣ ತಜ್ಞರು ಹಾಗೂ ಬಹುಮುಖ್ಯವಾಗಿ ವಿದ್ಯಾರ್ಥಿಗಳ ವ್ಯಾಪಕ ವಿರೋಧ ಹಾಗೂ ಹಲವು ಪ್ರತಿಭಟನೆಗಳ ಫಲವಾಗಿ ಹತ್ತನೇ ತರಗತಿ ಪಠ್ಯಕ್ಕೆ ಭಗತ್ ಸಿಂಗ್ ಕುರಿತ ಪಾಠವನ್ನು ಈಗ ಮರು ಸೇರ್ಪಡೆ ಮಾಡಲಾಗಿದೆ. ಇದು ಜನತೆಯ ಹೋರಾಟಕ್ಕೆ ಸಂದ ಜಯವಾಗಿದೆ. ಆದರೆ ಪಠ್ಯದಲ್ಲಿ ವಿವೇಕಾನಂದರ ಮಾನವೀಯ ಮೌಲ್ಯಗಳನ್ನು ಸಾರುವ ಪಾಠ, ಪಿ ಲಂಕೇಶ್, ಎ. ಎನ್. ಮೂರ್ತಿ ರಾವ್ ಹಾಗೂ ಸಾರ ಅಬೂಬಕ್ಕರ್ ಅವರ ಪ್ರಗತಿಪರ ಲೇಖನಗಳು, ನಾರಾಯಣಗುರು ಮತ್ತು ಇನ್ನಿತರ ಪ್ರಗತಿಪರ ಚಿಂತಕರ ಪಠ್ಯ ಹಾಗೂ ಸಾಮಾಜಿಕ ನ್ಯಾಯ – ಲಿಂಗ ಸಮಾನತೆ ಸಾರುವ ಪಠ್ಯಗಳನ್ನು ಸೇರಿಸುವ ವರೆಗೂ ಈ ವಿಜಯದಿಂದ ಸ್ಪೂರ್ತಿ ಪಡೆದ ಪ್ರಜ್ಞಾವಂತ ಜನ ಹೋರಾಟ ಮುಂದುವರೆಸಬೇಕಿದೆ.

ಈ ಹಿಂದೆ ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ, ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಕುರಿತು ಹಾಗೂ ಕೆಲವು ನೈತಿಕ ಮೌಲ್ಯಗಳನ್ನು ಬಿತ್ತುವ ಪಾಠಗಳನ್ನು ಹತ್ತನೇ ತರಗತಿ ಪಠ್ಯ ಕ್ರಮದಿಂದ ತೆಗೆದು ಹಾಕಲಾಗಿತ್ತು. ಅಷ್ಟೇ ಅಲ್ಲದೆ, ಪಠ್ಯದಲ್ಲಿ ಹಳೆಯ, ಪ್ರಾಚೀನ ಗೊಡ್ಡು ಸಂಪ್ರದಾಯವಾದಿ ವಿಚಾರಗಳನ್ನು ಬಿತ್ತುವ ಆರ್.ಎಸ್.ಎಸ್ ನ ಸ್ಥಾಪಕರಾದ ಹೆಡ್ಗೇವಾರ್ ಅವರ ಭಾಷಣವನ್ನು ‘ ಆದರ್ಶ ಪುರುಷ ಯಾರು? ‘ ಎಂಬ ಶೀರ್ಷಿಕೆಯಡಿಯಲ್ಲಿ ತುರುಕಿಸಲಾಗಿತ್ತು. ಇಂತಹ ‘ಪರಿಷ್ಕರಣೆ’ಯ ವಿರುದ್ಧ ರಾಜ್ಯಾದ್ಯಂತ ವಿರೋಧಗಳ ಧ್ವನಿ ಕೇಳಿಬಂದವು. ದೇಶದ ಸ್ವಾತಂತ್ರ್ಯಕ್ಕಾಗಿ ನೇಣುಗಂಬ ಏರಿದ ಕ್ರಾಂತಿಕಾರಿ ಭಗತ್ ಸಿಂಗ್ ರ ಕುರಿತ ಪಾಠವನ್ನು ಮರು ಸೇರ್ಪಡೆ ಮಾಡಲು ರಾಜ್ಯದ ವಿದ್ಯಾರ್ಥಿಗಳು, ಜನ ಸಾಮಾನ್ಯರು ಸರ್ಕಾರಕ್ಕೆ ಒತ್ತಾಯಿಸಿ, ಪ್ರತಿಭಟನೆಗಳು ನಡೆದವು.

ಈ ಹಿನ್ನೆಲೆಯನ್ನು ಗಮನಿಸಿದಾಗ, ಜನ ಹೋರಾಟದ ಒತ್ತಡದಿಂದಲೇ ರಾಜ್ಯ ಸರ್ಕಾರ ಭಗತ್ ಸಿಂಗ್ ಅವರ ಪಾಠವನ್ನು ಮರು ಸೇರ್ಪಡೆ ಮಾಡಲಾಗಿದೆ ಎನ್ನುವುದು ಅತ್ಯಂತ ಸ್ಪಷ್ಟವಾಗುತ್ತದೆ. ಒಂದು ಪ್ರಜಾತಾಂತ್ರಿಕ ಶಿಕ್ಷಣ ವ್ಯವಸ್ಥೆಯಲ್ಲಿ, ಪಠ್ಯ ಪುಸ್ತಕಗಳು ಯಾವುದೇ ಪಕ್ಷದ ಸಿದ್ಧಾಂತಗಳಿಂದ ನಿಯಂತ್ರಿಸಲ್ಪಡಬಾರದು ಹಾಗೂ ಸ್ಥಾಪಿತ ಸತ್ಯಗಳು, ಪ್ರಜಾತಾಂತ್ರಿಕ- ವೈಜ್ನಾನಿಕ – ಧರ್ಮ ನಿರಪೇಕ್ಷ ವಿಚಾರಗಳು ಪಠ್ಯದ ಮೂಲಕ ವಿದ್ಯಾರ್ಥಿಗಳನ್ನು ತಲುಪಬೇಕು. ಅಂತಹ ಒಂದು ವಾತಾವರಣ ಸೃಷ್ಟಿಯಾಗುವವರೆಗು ನಮ್ಮ ಸಂಘಟಿತ ಹೋರಾಟ ಮುಂದುವರೆಯಬೇಕು.

Leave a Comment

Your email address will not be published. Required fields are marked *

Translate »
Scroll to Top