ಬೆಂಗಳೂರು : ರಾಜ್ಯದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಕಾರ್ಯ ಹಾಗೂ ಯುವಜನತೆಯಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯು ತೊಡಗಿಕೊಂಡಿದ್ದು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ರವರು ಇಂದು ರಾಜಭವನದ ಗ್ಲಾಸ್ ಹೌಸ್ ನಲ್ಲಿ ನಡೆದ ರೆಡ್ ಕ್ರಾಸ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಹಾಗೂ ಕೋವಿಡ್-19 ಜಾಗೃತಿ ಮತ್ತು ನಿರ್ವಹಣೆಯಲ್ಲಿ ರಾಜ್ಯಾದ್ಯಂತ ರೆಡ್ ಕ್ರಾಸ್ ನ ಸ್ವಯಂಸೇವಕರು ಅತ್ಯುತ್ತಮವಾಗಿ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದು ಶ್ಲಾಘಿಸಿದರು. 2019-20 ನೇ ವರ್ಷದಲ್ಲಿ ಅತ್ಯಂತ ಉತ್ತಮವಾಗಿ ರೆಡ್ ಕ್ರಾಸ್ ಚಟುವಟಿಕೆಗಳನ್ನು ಕಾರ್ಯಗತ ಮಾಡಿದ ರಾಯಚೂರು, ತುಮಕೂರು, ದಕ್ಷಿಣ ಕನ್ನಡ ಜಿಲ್ಲಾ ಶಾಖೆಗಳು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡಿದ ಹಾಸನ, ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ ಜಿಲ್ಲಾ ರೆಡ್ ಕ್ರಾಸ್ ಶಾಖೆಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರವಾಹ ಸಂದರ್ಭದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ಬಾಗಲಕೋಟೆ ಜಿಲ್ಲಾ ರೆಡ್ ಕ್ರಾಸ್ ಹಾಗೂ ಉತ್ತಮ ಆರೋಗ್ಯ ಸೇವೆಗಳಿಗಾಗಿ ಹಿರಿಯೂರು ರೆಡ್ ಕ್ರಾಸ್ ತಾಲ್ಲೂಕು ಶಾಖೆಗೆ ಪ್ರಶಸ್ತಿಗಳನ್ನು ನೀಡಿ ಅಭಿನಂದಿಸಲಾಯಿತು.
ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಹಿರಿಯ ಸದಸ್ಯರಾದ ಶ್ರೀ ಅಪ್ಪಾರಾವ್ ಅಕ್ಕೋಣೆ ರವರ ರೆಡ್ ಕ್ರಾಸ್ ಕಾರ್ಯಚಟುವಟಿಕೆಗಳನ್ನು ಗುರುತಿಸಿ ರಾಷ್ಟ್ರೀಯ ಕೇಂದ್ರಕಛೇರಿಯಿಂದ ನೀಡಲಾಗಿದ್ದ ಮೆರಿಟ್ ಸರ್ಟಿಫಿಕೆಟ್ ನ್ನು ಈ ಸಂದರ್ಭದಲ್ಲಿ ಅವರಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ರೆಡ್ ಕ್ರಾಸ್ ರಕ್ತ ಕೇಂದ್ರದ ಉನ್ನತೀಕರಣಕ್ಕೆ ಸಹಾಯ ನೀಡಿದ NTT DATA ಗ್ಲೋಬಲ್ ಡಿಲಿವರಿ ಸರ್ವಿಸ್ ಸಂಸ್ಥೆಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕರ್ನಾಟಕ ರಾಜ್ಯದಲ್ಲಿನ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಯುವ ರೆಡ್ ಕ್ರಾಸ್ ಕಾರ್ಯಚಟುವಟಿಕೆಗಳು ಅತ್ಯಂತ ಪರಿಣಾಮಕಾರಿಯಾಗಿ ನಡೆಯುತಲಿದ್ದು 2019-20 ನೇ ಸಾಲಿನ ಅತ್ಯುತ್ತಮ ಯುವ ರೆಡ್ ಕ್ರಾಸ್ ಕಾರ್ಯನಿರ್ವಹಣೆ ಮಾಡಿದ ಮಂಗಳೂರು ವಿಶ್ವವಿದ್ಯಾಲಯ ಮತ್ತು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇವರಿಗೆ ಅತ್ಯುತ್ತಮ ಯುವ ರೆಡ್ ಕ್ರಾಸ್ ಘಟಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕೋವಿಡ್-19 ನೊಂದ ಕುಟುಂಬಗಳ ನೆರವಿಗಾಗಿ ರೆಡ್ ಕ್ರಾಸ್ ಜೀವನೋಪಾಯ ಯೋಜನೆಗೆ ರಾಜ್ಯಪಾಲರಿಂದ ಚಾಲನೆ
ಕೋವಿಡ್-19 ರಿಂದ ಇಡೀ ವಿಶ್ವದಾದ್ಯಂತ ಜನರು ತಮ್ಮ ಜೀವನೋಪಾಯಗಳನ್ನು ಕಳೆದುಕೊಂಡು ಪರ್ಯಾಯ ಜೀವನೋಪಾಯಗಳನ್ನು ಹುಡುಕುತ್ತಿರುವ ಬೆನ್ನಲ್ಲೇ ರೆಡ್ ಕ್ರಾಸ್ ಕರ್ನಾಟಕ ರಾಜ್ಯ ಶಾಖೆಯು ಮೈಕ್ರೋಫೋಕಸ್ ಸಂಸ್ಥೆಯ ಸಹಯೋಗದೊಂದಿಗೆ ಕರ್ನಾಟಕದಾದ್ಯಂತ 900 ಕ್ಕೂ ಹೆಚ್ಚಿನ ಕುಟುಂಬಗಳಿಗೆ ಜೀವನೋಪಾಯದ ನೆರವು ನೀಡುವಲ್ಲಿ ಕಸೂತಿ ಹೊಲಿಗೆ ಯಂತ್ರಗಳನ್ನು ನೀಡಿ ತರಬೇತಿ ನೀಡುವ ಜೀವನೋಪಾಯ ಯೋಜನೆಗೆ ರಾಜ್ಯದ ರಾಜ್ಯಪಾಲರು ಫಲಾನುಭವಿಗೆ ಕಸೂತಿ ಹೊಲಿಗೆ ಯಂತ್ರವನ್ನು ಹಸ್ತಾಂತರಿಸುವ ಮೂಲಕ ಯೋಜನೆಗೆ ಜಾಲನೆ ನೀಡಿದರು.
ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳು, ಮಂಗಳೂರು ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ರೆಡ್ ಕ್ರಾಸ್ ಕರ್ನಾಟಕ ರಾಜ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಶಾಖೆಯ ಸದಸ್ಯರು ಮತ್ತು ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೌರವಾನ್ವಿತ ರಾಜ್ಯಪಾಲರು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಗೋಪಾಲ್ ಬಿ. ಹೂಸೂರು ಐ.ಪಿ.ಎಸ್. (ನಿವೃತ್ತ), ಸಭಾಪತಿ ಎಸ್. ನಾಗಣ್ಣ, ಉಪಸಭಾಪತಿಗಳಾದ ಡಾ. ಕುಮಾರ್ ವಿ.ಎಲ್.ಎಸ್. ಗೌರವ ಕೋಶಾಧ್ಯಕ್ಷರಾದ ಆನಂದ್ ಎಸ್. ಜಿಗಜಿನ್ನಿ ಇವರು ಉಪಸ್ಥಿತರಿದ್ದರು.
ಹೆಚ್. ಎಸ್. ಬಾಲಸುಬ್ರಮಣ್ಯ
ಪ್ರಧಾನ ಕಾರ್ಯದರ್ಶಿ
ಭಾರತೀಯ ರೆಡ್ ಕ್ರಾಸ್ ಸಂಸ್ಥೆ,
ಕರ್ನಾಟಕ ರಾಜ್ಯ ಶಾಖೆ,
ಬೆಂಗಳೂರು.