ಸುರೇಶ ಬೆಳೆಗೆರೆ
ಚಳ್ಳಕೆರೆ : ಗುಲಾಬಿ ಹೂವನ್ನು ಹೂಗಳ ರಾಣಿ ಎಂದೇ ಕರೆಯಲಾಗುತ್ತದೆ. ಇಂತಹ ಗುಲಾಬಿಯನ್ನು ಬೆಳೆದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಇಲ್ಲಿನ ರೈತರೊಬ್ಬರು.
ಇತ್ತೀಚಿನ ದಿನಗಳಲ್ಲಿ ರೈತರು ಈರುಳ್ಳಿ, ಟೊಮೊಟೊ ಇತರೆ ಬೆಳೆಗಳನ್ನು ಬೆಳೆದು ಸಂಪೂರ್ಣ ನಷ್ಟ ಅನುಭವಿಸಿ ವಿನೂತನ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ.
ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿ ಗ್ರಾಮದ ರೈತರಾದ ಮಹೇಶ, ಶ್ರೀದೇವಿ ಎಂಬುವರು ನರೇಗಾ ಖಾತ್ರಿ ಯೋಜನೆಯಡಿ ತಮ್ಮ ಜಮೀನಿನಲ್ಲಿ ಮೆರಾಬಲ್ ಎನ್ನುವ ಗುಲಾಬಿ ಬೆಳೆ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ.
ರೈತ ಕೆ.ಮಹೇಶ ಮಾತನಾಡಿ, ಸುಮಾರು ವರ್ಷಗಳಿಂದ ಈರುಳ್ಳಿ ಹಾಗೂ ಟೊಮೇಟೊ ಬೆಳೆದು ಸಂಪೂರ್ಣ ನಷ್ಟ ಹೊಂದಿ ಸಾಲಗಾರನಾಗಿದ್ದೆ. ಆದರೆ ಗುಲಾಬಿ ಹಾಕಿ ಇವತ್ತು ಮಾಡಿದ ಸಾಲವನ್ನು ಅರ್ಧ ತೀರಿಸಿದ್ದೇನೆ. ತಮಿಳುನಾಡಿನಿಂದ ಸಸಿ ತಂದು ನಾಟಿ ಮಾಡಿದ್ದೇನೆ. ನಾಟಿ ಮಾಡಿದ ಮೂರು ತಿಂಗಳಿಗೆ ಹೂ ಬಿಡಲು ಪ್ರಾರಂಭವಾಗುತ್ತದೆ. ಮೂರು ದಿನಕ್ಕೊಮ್ಮೆ ನೀರು ಬಿಟ್ಟು ಔಷಧಿ ಸಿಂಪರಣೆ ಮಾಡುತ್ತಾ ಬಂದರೆ ಯಾವುದೇ ರೋಗ ಬರುವುದಿಲ್ಲ. ಇಂದು ಪ್ರತಿದಿನ ಸುಮಾರು 50ರಿಂದ 80 ಕೆಜಿ ಹೂ ಬರುತ್ತೆ ಒಂದು ಕೆಜಿಗೆ 80 ರೂಪಾಯಿಯಿಂದ 300 ರೂಪಾಯಿವರೆಗೂ ಬೆಲೆ ಬಾಳುತ್ತವೆ. ನಾನು 80 ರೂಪಾಯಿ ಕೆಜಿಗೆ ಮಾರಾಟ ಮಾಡುತ್ತೇನೆ. ಪ್ರತಿದಿನ ಕೆಲಸ ಕೈ ತುಂಬಾ ಹಣ ಜವಾಬ್ದಾರಿಯಿಂದ ಗುಲಾಬಿ ಹೂ ಬೆಳೆದರೆ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬಹುದು ಎಂದು ತಿಳಿಸಿದರು.
ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಆರ್.ವಿರುಪಾಕ್ಷಪ್ಪ ಮಾತನಾಡಿ, ನರೇಗಾ ಯೋಜನೆಯಡಿ ಲಾಭದಾಯಕ ಬೆಳೆಗಳನ್ನು ಬೆಳೆಯುವ ಕಾಮಗಾರಿಗಳನ್ನು ರೈತಾಪಿ ವರ್ಗ ರೂಪಿಸಿಕೊಳ್ಳುವ ಮೂಲಕ ಕುಟುಂಬಕ್ಕೆ ಆದಾಯದ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ತರಕಾರಿ ಬೆಳೆಗಳಲ್ಲಿ ನಷ್ಟ ಅನುಭವಿಸಿರುವ ರೈತರು, ಪರ್ಯಾಯ ಬೆಳೆಗಳಾಗಿ ಲಾಭ ತಂದುಕೊಡುವ ಫಸಲಿನ ಕಡೆ ಗಮನ ಹರಿಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯು ಕೇವಲ ರಸ್ತೆ, ಚರಂಡಿ ಕಾಮಗಾರಿಗಳಿಗೆ ಸೀಮಿತವಾಗಿಲ್ಲ. ತೋಟಗಾರಿಕೆ ಬೆಳೆಗಳಲ್ಲಿ ಪ್ರಗತಿ ಕಂಡುಕೊಳ್ಳಲು ಖಾತ್ರಿ ಯೋಜನೆ ಸದುಪಯೋಗ ಮಾಡಿಕೊಳ್ಳುವ ಜಾಗೃತಿ ನಡೆಯುತ್ತಿದೆ. ಒಂದು ಎಕರೆ ಅಚ್ಚುಕಟ್ಟು ಮಾಡಿಕೊಳ್ಳುವ ರೈತರಿಗೆ ಕೂಲಿಗಾರಿಕೆ ಮತ್ತು ಸಾಮಗ್ರಿ ಖರೀದಿಗೆ 1 ಲಕ್ಷ ಖಾತ್ರಿ ಅನುದಾನ ನೀಡಲಾಗುತ್ತದೆ. ಈ ಸೌಲಭ್ಯದಡಿ ಮಹೇಶ ಮತ್ತು ಶ್ರೀದೇವಿ ತಲಾ 1 ಎಕರೆ ಭೂಮಿಯಲ್ಲಿ ಕಳೆದ ವರ್ಷದಿಂದ ಗುಲಾಬಿ ಬೆಳೆ ಬೆಳೆದು ಲಾಭ ಕಂಡುಕೊಂಡಿದ್ದಾರೆ ಎಂದರು.
ರೈತ ಮಹಿಳೆ ಶ್ರೀದೇವಿ ಮಾತನಾಡಿ, ಖಾತ್ರಿ ಯೋಜನೆಯಡಿ ಜಮೀನು ಅಚ್ಚುಕಟ್ಟು ಮಾಡಿಕೊಂಡು ನಾಲ್ಕು ತಿಂಗಳಿಗೆ ಕೈಗೆ ಬರುವ ಹೂ ಬೆಳೆ ನಾಟಿ ಮಾಡಲಾಯಿತು. ನಿರೀಕ್ಷೆಯಂತೆ ಫಲವತ್ತಾಗಿ ಹೂ ಬೆಳೆ ಬಂದಿದೆ. 80 ರೂ ಕೆಜಿಯಂತೆ ದಿನಕ್ಕೆ 70 ರಿಂದ 100 ಕೆಜಿ ಹೂವು ಮಾರಾಟ ಮಾಡಿಕೊಳ್ಳುತ್ತೇವೆ. ಕೆಂಪು ಗುಲಾಬಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ ಇದೆ. ಜಮೀನಿನ ಬಳಿ ಬಂದು ಖರೀದಿ ಮಾಡಿಕೊಳ್ಳುತ್ತಾರೆ. ಇಲಾಖೆ ಮಾರ್ಗದರ್ಶನದಂತೆ ಕೆಂಪು ನುಸಿ, ಕ್ರಿಪ್ಸ್, ರಿಡೋಮಿಲ್ ಗೋಲ್ಡ್, ಬಾಗಸ್ಟಿನ್ ಔಷಧಿಗಳ ಬಳಕೆ ಮಾಡಿಕೊಂಡು ಗಿಡಗಳಿಗೆ ಯಾವುದೇ ಕೀಟ ಮತ್ತು ರೋಗ ಬಾಧೆ ತಾಕದಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಶ್ರೀನಿವಾಸ್, ಇಲಾಖೆ ಸಿಬ್ಬಂದಿ ಪ್ರವೀಣ್‌ಕುಮಾರ್, ಶ್ರೀಧರ್, ಮಹೇಶ ಮತ್ತಿತರರು ಇದ್ದರು.