ರಾಜ್ಯದಲ್ಲಿ ಮುಂದುವರೆದ ಅಧಿಕಾರ ಹಂಚಿಕೆ ಹಗ್ಗ ಜಗ್ಗಾಟ

ಸಿಎಂ,ಡಿಸಿಎಂ ದಾಳ-ಪ್ರತಿದಾಳ

Kannada Nadu
ರಾಜ್ಯದಲ್ಲಿ ಮುಂದುವರೆದ ಅಧಿಕಾರ ಹಂಚಿಕೆ ಹಗ್ಗ ಜಗ್ಗಾಟ

ಬೆಂಗಳೂರು :  ಅಧಿಕಾರ ಹಂಚಿಕೆ ಹಗ್ಗ ಜಗ್ಗಾಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಅನುದಿನ ರಾಜಕೀಯದಲ್ಲಿ ದಾಳ, ಪ್ರತಿದಾಳ ಉರುಳಿಸುತ್ತಲೇ ಸಾಗಿದ್ದಾರೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲೂ ವಾದ-ಪ್ರತಿವಾದಕ್ಕೆ ಕಾರಣವಾಗಿದೆ. ಮುಂದೇನು ಎನ್ನುವ ಕುತೂಹಲ ಕಾಯ್ದುಕೊಳ್ಳುವಂತೆ ಮಾಡಿದೆ.
ಸಂವಿಧಾನದ ಬಗ್ಗೆ ಅತೀವ ಕಳಕಳಿ ವ್ಯಕ್ತಪಡಿಸುತ್ತಿರುವ ಈ ಇಬ್ಬರೂ ನಾಯಕರು ಇಂತಹ ಮಹತ್ವದ ದಿನದ ಕಾರ್ಯಕ್ರಮಗಳಲ್ಲಿಂದು ಪರಸ್ಪರ
ಮುಖಾಮುಖಿಯಾಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅಧಿಕೃತ ಸಭೆ, ಸಮಾರಂಭಗಳಲ್ಲಿ ತೊಡಗಿಕೊಂಡರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಕ್ಷದ ವೇದಿಯಲ್ಲಿ ವಿರಾಜಮಾನರಾದರು.
ಕೇವಲ 500 ಮೀಟರ್ ದೂರದಲ್ಲಿರುವ ವಸಂತನಗರದ ಅಂಬೇಡ್ಕರ್ ಭವನ ಹಾಗೂ ಕೆಪಿಸಿಸಿ ಭಾರತ್ ಜೋಡೋ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮಗಳು ಪ್ರತ್ಯೇಕವಾಗಿ ನಡೆದವು. ಆದರೂ ಇಬ್ಬರೂ ಮುಖಂಡರು ಪರಸ್ಪರ ಭಾಗಿಯಾಗಲಿಲ್ಲ. ಎದುರುಗೊಳ್ಳಲಿಲ್ಲ.
ಮೊದಲಿಗೆ ಬೆಳಿಗ್ಗೆ 11 ಗಂಟೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಇಬ್ಬರೂ ನಾಯಕರು ಪಾಲ್ಗೊಳ್ಳಬೇಕಾಗಿತ್ತು. ಇಬ್ಬರ ದೈನಂದಿನ ಕಾರ್ಯಕ್ರಮಗಳ ಪಟ್ಟಿಯಲ್ಲಿ ಇದು ಮೊದಲ ಕಾರ್ಯಕ್ರಮವಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಪ್ರಮಾಣ ವಚನ ಬೋಧಿಸಿ, ಪ್ರತಿಭಾ ಪುರಸ್ಕಾರ ವಿತರಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಂಬೇಡ್ಕರ್ ಭವನದ ಕಾರ್ಯಕ್ರಮಕ್ಕೆ ಗೈರು ಹಾಜರಾದರು. ಅವರು ನೇರವಾಗಿ ಕೆಪಿಸಿಸಿಯ ಭಾರತ್ ಜೋಡೋ ಭವನದಲ್ಲಿ ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಆರ್.ಟಿ.ಐ ವಿಭಾಗದಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಪಾಲ್ಗೊಂಡರು. ಈ ಎರಡೂ ಅತ್ಯಂತ ಮಹತ್ವದ ಮತ್ತು ಅತಿ ದೊಡ್ಡ ಕಾರ್ಯಕ್ರಮಗಳು ಎಂಬುದು ವಿಶೇಷ.
ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಮುಗಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ಯ ಕಾರ್ಯಕ್ರಮಗಳ ನಿಮಿತ್ತ ತೆರಳಿದರು. ಅಂಬೇಡ್ಕರ್ ಭವನದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ 2.10 ರ ಸುಮಾರಿಗೆ ಕೆಪಿಸಿಸಿ ಕಚೇರಿ ಮುಂಭಾಗದಿಂದಲೇ ಸಾಗಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕ್ರಮದತ್ತ ಮುಖ್ಯಮಂತ್ರಿ ಇಣುಕಿ ನೋಡಲಿಲ್ಲ.
ಅದೇನೇ ಇರಲಿ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುವ ಸರ್ಕಾರದ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮದೇ ಆದ ಶೈಲಿಯಲ್ಲಿ ಗಮನ ಸೆಳೆಯುತ್ತಿರುತ್ತಾರೆ. ಸಿದ್ದರಾಮಯ್ಯ ಅವರು ಸಹ ಕಾಂಗ್ರೆಸ್ ಪಕ್ಷದ ಕಚೇರಿಗಳಲ್ಲಿ ಆಯೋಜನೆಗೊಳ್ಳುವ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕಾಂಗ್ರೆಸ್ ನ ಉನ್ನತ ನಾಯಕರ ತತ್ವ ಸಿದ್ಧಾಂತದ ಬಗ್ಗೆ ಜೋರಾಗಿಯೇ ಮಾತನಾಡುತ್ತಾರೆ. ಆದರೆ ಇಂದು ಇಬ್ಬರು ವಿಭಿನ್ನ ನಡೆಗಳನ್ನು ಅನುಸರಿಸಿದರು.
ಈ ನಡುವೆ ಮಲ್ಲಿಕಾರ್ಜುನ ಖರ್ಗೆ ದೆಹಲಿ ಪ್ರವಾಸದ ಹೊರತಾಗಿಯೂ ಅಧಿಕಾರ ಹಂಚಿಕೆಯ ಗೊಂದಲ ಇತ್ಯರ್ಥವಾಗದೆ, ಮತ್ತಷ್ಟು ಗೊಂದಲ ಮೂಡಿಸಿದೆ. ಈ ನಡುವೆ ಡಿ.ಕೆ.ಶಿವಕುಮಾರ್ ಅವರು ಸಚಿವ ಸತೀಶ ಜಾರಕಿಹೊಳಿಯನ್ನು ಮಂಗಳವಾರ ರಾತ್ರಿ ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಇತ್ತ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮನ್ನು ಮುಖ್ಯಮಂತ್ರಿ ಮಾಡಿ ಎಂದು ಕೇಳಿಲ್ಲ ಎಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಂಚಿಕೆಯ ಗೊಂದಲಗಳನ್ನು ಹೈಕಮಾಂಡ್ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಕಳೆದ 15 ದಿನಗಳಿಂದ ಹಾದಿರಂಪ-ಬೀದಿರಂಪವಾಗಿರುವ ಅಧಿಕಾರ ಹಂಚಿಕೆ ಗೊಂದಲ ಖರ್ಗೆ ಅವರು ದೆಹಲಿಗೆ ಭೇಟಿ ನೀಡಿದ ಬಳಿಕ ಇತ್ಯರ್ಥಗೊಳ್ಳಬಹುದು ಎಂದು ಹೇಳಲಾಗಿತ್ತು. ಆದರೆ ದೆಹಲಿಯಲ್ಲಿ ಸಂವಿಧಾನ ದಿನಾಚರಣೆ ಸಂಭ್ರಮದಲ್ಲಿ ಭಾಗವಹಿಸಿ, ಮಲ್ಲಿಕಾರ್ಜುನ ಖರ್ಗೆ ಬರಿ ಕೈಯಲ್ಲಿ ವಾಪಸ್ ಬರುವ ಸಾಧ್ಯತೆ ಇದೆ.
ಉನ್ನತ ಮೂಲಗಳ ಪ್ರಕಾರ ಖರ್ಗೆ ಅವರು ಮತ್ತೆ ಗುರುವಾರ ದೆಹಲಿಗೆ ತೆರಳಲಿದ್ದು, ಶುಕ್ರವಾರ ಅಥವಾ ಶನಿವಾರ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ನಡುವೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದು ಎರಡೂ ಬಣದ ವಾದ-ಪ್ರತಿವಾದಗಳನ್ನು ಕೇಳಿ ತಿಳಿದು ಕೊಂಡಿದ್ದಾರೆ.
ಪಕ್ಷ ಸಂಘಟನೆ, ಚುನಾವಣೆ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ತಾವು ಹೈಕಮಾಂಡ್‍ನ ಆದೇಶಗಳನ್ನು ಚಾಚೂತಪ್ಪದೆ ಪಾಲನೆ ಮಾಡಿದ್ದು, ಅದಕ್ಕೆ ಪ್ರತಿಫಲ ಬೇಕೆಂದು ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ, ಅಧಿಕಾರ ಬಿಟ್ಟುಕೊಡಲು ಸ್ಪಷ್ಟವಾಗಿ ನಿರಾಕರಿಸುತ್ತಿದ್ದು ಯಾವುದೇ ಪರಿಸ್ಥಿತಿ ಆದರೂ, ಎದುರಿಸಲು ಸಿದ್ದ ಎಂದು ಸಂದೇಶ ರವಾನಿಸಿದೆ.
ಡಿ.ಕೆ.ಶಿವಕುಮಾರ್ ಅವರ ಬಣದ ಕೆಲವು ಶಾಸಕರು ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟು ಕೊಡದೆ ಇದ್ದರೆ, ಬಹಿರಂಗವಾಗಿಯೇ ಬಂಡಾಯ ಚಟುವಟಿಕೆಗಳನ್ನು ಆರಂಭಿಸುವುದಾಗಿ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಹೈಕಮಾಂಡ್ ನಾಯಕರು ಈ ವಾರ ಅಂತ್ಯದೊಳಗೆ ಸೂಕ್ತ ನಿರ್ಧಾರ ತೆಗೆದುಕೊಂಡು ಇಬ್ಬರೂ ನಾಯಕರನ್ನು ಮುಖಾಮುಖಿ ಕೂರಿಸಿ ಸಂದೇಶ ರವಾನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ನಡುವೆ ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೊಳಿಯವರನ್ನು ಭೇಟಿ ಮಾಡಿ ತಮ ದಾಳ ಉರುಳಿಸಿದ್ದಾರೆ. ಈ ಮೊದಲು ಸಚಿವ ಕೆ.ಜೆ.ಜಾರ್ಜ್ ಅವರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದರು. ಕೆ.ಜೆ.ಜಾರ್ಜ್ ಮತ್ತು ಸತೀಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದ ಈ ಇಬ್ಬರೂ ನಾಯಕರನ್ನು ಡಿ.ಕೆ. ಶಿವಕುಮಾರ್ ಭೇಟಿ ಮಾಡಿರುವುದು ನಾನಾ ರೀತಿಯ ವದಂತಿಗಳಿಗೆ ಕಾರಣವಾಗಿದೆ. ಹೀಗಾಗಿ ರಾಜಕೀಯ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";