ಭಾವೈಕ್ಯ ಕರ್ನಾಟಕವನ್ನು ರಾಷ್ಟ್ರೀಯ ಪಕ್ಷಗಳು ಹಾಳು ಮಾಡುತ್ತಿವೆ

ಕೋಲಾರ,ಮಾ,27 : ರಾಜ್ಯದಲ್ಲಿ ಉಂಟಾಗಿರುವ ಅಶಾಂತಿಯ ವಾತಾವರಣ ಮತ್ತು ಎಲ್ಲ ಅಹಿತಕರ ಘಟನೆಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಮೂಲ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು. ಕೋಲಾರದಲ್ಲಿಂದು ಮಾಧ್ಯಮಗಳ ಜತೆ ಮಾತುನಾಡುತ್ತಾ ಪ್ರತಿಪಕ್ಷ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು; “ಧಾರ್ಮಿಕ ಸ್ಥಳಗಳಲ್ಲಿ, ಜಾತ್ರೆಗಳಲ್ಲಿ ಒಂದು ಧರ್ಮದ ಜನರಿಗೆ ವ್ಯಾಪಾರ ಮಾಡಲು ಬಿಡುತ್ತಿಲ್ಲ, ಹಿಜಾಬ್ಕೇಸರಿ ಶಾಲು ಅಂತ ಹೇಳಿ ಶಾಲೆ ಕಾಲೇಜುಗಳಲ್ಲಿ ಸಂಘರ್ಷ ಉಂಟು ಮಾಡಲಾಯಿತು. ಇದೆಲ್ಲಕ್ಕೂ ಕಾರಣ ಆ ಮಹಾನುಭಾವವರೇ (ಸಿದ್ದರಾಮಯ್ಯ) ಕಾರಣ ಎಂದು ದೂರಿದರು. 2018ರಲ್ಲಿ ರಚನೆಯಾದ ಮೈತ್ರಿ ಸರಕಾರದ ಪತನಕ್ಕೆ ಕಾರಣರಾದ ಸಿದ್ದರಾಮಯ್ಯ ಬಿಜೆಪಿ ಸರಕಾರ ಬರಲು ಸಹಕಾರ ನೀಡಿದರು ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ರಾಜ್ಯದ ಹಿತದೃಷ್ಟಿಯಿಂದ ನಮಗೆ ಇಷ್ಟವಿಲ್ಲದಿದ್ದರೂ ಕಾಂಗ್ರೆಸ್ ಜತೆ ಸರಕಾರ ಮಾಡಲು ಒಪ್ಪಿಕೊಂಡೆವು. ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ನಾವು ಅವರ ಜತೆ ಕೈಜೋಡಿಸಿದೆವು. 2004ರಲ್ಲೂ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೆವು. ಆಗ ನಮ್ಮನ್ನು ಅಪಮಾನಿಸಿ ಚಿತ್ರಹಿಂಸೆ ನೀಡಿದರು. ಆಗ ಅನಿವಾರ್ಯವಾಗಿ ನಾವು ಬೇರೆ ತೀರ್ಮಾನಗಳನ್ನು ಮಾಡಬೇಕಾಯಿತು. ಅದಕ್ಕೂ ಸಿದ್ದರಾಮಯ್ಯನವರೇ ಮೂಲ ಕಾರಣ ಎಂದು ಅವರು ಹೇಳಿದರು. 2018ರ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪಕ್ಷವೂ ಬಿಜೆಪಿಯ ಬೀ ಟೀಂ ಎಂದು ದುಪ್ಷ್ರಚಾರ ಮಾಡಿದರು. ಹೀಗಾಗಿ ಬಿಜೆಪಿ 105 ಕ್ಷೇತ್ರಗಳಲ್ಲಿ ಗೆದ್ದಿತು. ಇಲ್ಲವಾಗಿದ್ದಿದ್ದರೆ ಅವರು 75 ಸ್ಥಾನಗಳ ಒಳಗೇ ಇರುತ್ತಿದ್ದರು. ಈಗ ಅವರು ಇದೇ ಮಹಾನುಭಾವರ ಸಹಕಾರದಿಂದ ಅಧಿಕಾರಕ್ಕೆ ಬಂದು ರಾಜ್ಯದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಅದಕ್ಕೆ ಮೂಲ ಕಾರಣ ಇವರೇ ಅಲ್ಲವೇ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಈಗ ಜೆಡಿಎಸ್, ಬಿಜೆಪಿಯೊಂದಿಗೆ ಅಡ್ಜಸ್ಟಮೆಂಟ್ ಮಾಡಿಕೊಂಡಿದೆ ಎಂದು ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಇದೊಂದೇ ಈಗ ಬಾಕಿ ಉಳಿದಿರೋದು. ಅವರು ಬಿಜೆಪಿ ಜತೆ ಏನೆಲ್ಲ ಒಳ ಸಂಬಂಧ ಹೊಂದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. 2018ರಲ್ಲಿ ನಡೆದ ಇವರ ಆಟ ಇನ್ನು ಮುಂದೆ ನಡೆಯಲ್ಲ. ಅವರ ತಲೆಯಲ್ಲಿ ಸರಕಿಲ್ಲ, ಅದಕ್ಕೆ ಜೆಡಿಎಸ್ ಜಪ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಛೇಡಿಸಿದರು. ರಾಜ್ಯದಲ್ಲಿ ಜನರು ಶಾಂತಿಯುತವಾಗಿ ಬಾಳ್ವೆ ಮಾಡುವ, ನೆಮ್ಮದಿಯ ಜೀವನ ನಡೆಸುವುದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಬೇಕಿಲ್ಲ. ಅವರಿಗೆ ಬೇಕಿರುವುದು ಕೇವಲ ಅಧಿಕಾರ ಮಾತ್ರ. ಅಧಿಕಾರಕ್ಕಾಗಿ ಅವರು ಏನನ್ನು ಮಾಡಲಿಕ್ಕೂ ಹೇಸುವುದಿಲ್ಲ. ರಾಜ್ಯದ ಭಾವೈಕ್ಯತೆಯನ್ನು ಎರಡೂ ಪಕ್ಷಗಳು ಹಾಳು ಮಾಡುತ್ತಿವೆ. ಧರ್ಮದ ಧರ್ಮದ ನಡುವೆ ಸಂಘರ್ಷ ಉಂಟು ಮಾಡಿ ಶಾಂತಿ ಹಾಳು ಮಾಡುವುದೇ ಇವರ ಉದ್ದೇಶ. ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಆರೋಪಿಸಿದರು.

ಎತ್ತಿನಹೊಳೆ ಎಲ್ಲಿದೆಯೋ ಅಲ್ಲೇ ಇದೆ: 2014ರಲ್ಲಿ ಎತ್ತಿಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ಮಾಡಲಾಯಿತು. ಒಂದೇ ವರ್ಷದಲ್ಲಿ ನೀರು ಕೊಡುತ್ತೇವೆ ಎಂದು ಸುಳ್ಳು ಹೇಳಿದರು. ಆ ದಿನ ನಾನು ಕೋಲಾರದಲ್ಲೇ ಇದ್ದೆ. ಒಂದು ವರ್ಷದಲ್ಲಿ ಇವರು ನೀರು ಕೊಟ್ಟರೆ ನಾನು ತಲೆ ಬೋಳಿಸಿಕೊಳ್ಳುವೆ ಎಂದು ಸವಾಲು ಹಾಕಿದ್ದೆ. ಈಗ 2022ನೇ ಇಸವಿ. ಇವರು ನೀರು ಕೊಡಲು ಇನ್ನೆಷ್ಟು ವರ್ಷ ಬೇಕು? ಎಂದು ಮಾಜಿ ಮುಖ್ಯಮಂತ್ರಿಗಳು ಖಾರವಾಗಿ ಪ್ರಶ್ನಿಸಿದರು.

ಎತ್ತಿನಹೊಳೆ ಯೋಜನೆಯನ್ನು 8,000 ಕೋಟಿ ರೂ.ಗಳಿಗೆ ಅಂದಾಜು ವೆಚ್ಚ ಎಂದು ಆರಂಭ ಮಾಡಿದರು. ಆಮೇಲೆ ಇದು 24,000 ಕೋಟಿ ರೂಪಾಯಿಗೆ ಹೋಗಿದೆ. ಇನ್ನೆಷ್ಟು ಕೋಟಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಿಲ್ಲ. ಇನ್ನು ದೇವರಾಯನದುರ್ಗದ ಬಳಿ 10 ಟಿಎಂಸಿ ನೀರಿನ ಸಂಗ್ರಹಕ್ಕೆ ಜಲಾಶಯ ಕಟ್ಟುತ್ತೇವೆ ಎಂದರು. ಆಮೇಲೆ ಅದು ಆಗಲ್ಲ ಎಂದು ಹೇಳಿ ಭೈರಗೊಂಡ್ಲು ಬಳಿ 5.6 ಟಿಎಂಸಿ ಸಾಮರ್ಥ್ಯದ ಜಲಾಶಯ ಮಾಡುತ್ತೇವೆ ಎಂದರು. ಈಗ ಅದು 2 ಟಿಎಂಸಿ ಮಟ್ಟಕ್ಕೆ ಬಂದು ನಿಂತಿದೆ. ಇವರು ಚಿಕ್ಕಬಳ್ಳಾಪುರ-ಕೋಲಾರಕ್ಕೆ ತಲಾ ಐದು ಟಿಎಂಸಿ ನೀರು ಕೊಡುತ್ತಾರಾ? ಆ ಯೋಗ್ಯತೆ ಇವರಿಗೆ ಇದೆಯಾ? ಎಂದು ಮಾಜಿ ಮುಖ್ಯಮಂತ್ರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಮೇಶ್ ಕುಮಾರ್ʼಗೆ ಟಾಂಗ್: ಕೋಲಾರದಲ್ಲೊಬ್ಬರು ಭಗೀರಥರು ಇದ್ದಾರೆ. ಕೆಸಿ ವ್ಯಾಲಿ ಯೋಜನೆ ಮೂಲಕ ಬೆಂಗಳೂರಿನಿಂದ ನೀರು ತಂದು ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆ ನೀರು ಎಂಥದ್ದು, ಅದರ ದುಷ್ಪರಿಣಾಮಗಳು ಏನು ಎನ್ನುವುದು ಇನ್ನು ಕೆಲ ದಿನಗಳಲ್ಲೇ ಜನರಿಗೆ ಗೊತ್ತಾಗುತ್ತದೆ. ಇವರು ಜನರ ಆರೋಗ್ಯ ಮತ್ತು ಜೀವನದ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಹೆಸರೇಳದೆಯೇ ಟಾಂಗ್ ಕೊಟ್ಟರು. ಮೇಕೆದಾಟು ಯೋಜನೆ ನಿದ್ದೆ ಮಾಡುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದು ಹೊರಟರು. ಹಣ ಇಲ್ಲದೇ ಸುಮ್ಮನಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಐವತ್ತು ವರ್ಷವಾದರೂ ಮುಗಿದಿಲ್ಲ. ದೇವೇಗೌಡರು ಮುಖ್ಯಮಂತ್ರಿ ಆಗಿದ್ದರ ಫಲವಾಗಿ ಮೊದಲ, ಎರಡನೇ ಹಂತ ಮುಗಿದು ಜನರಿಗೆ ನೀರು ಸಿಗುತ್ತಿದೆ. ಇಲ್ಲವಾಗಿದ್ದರೆ ಆ ಯೋಜನೆಯೂ ಸತ್ತು ಹೋಗುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಚುನಾವಣೆಗೆ ಜೆಡಿಎಸ್ ಸಿದ್ಧ: ಅವಧಿಪೂರ್ವ ಚುನಾವಣೆ ಬಂದರೆ ಎದುರಿಸಲು ನಾವು ತಯಾರಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಮಾಜಿ ಮುಖ್ಯಮಂತ್ರಿಗಳು; ಐದು ರಾಜ್ಯಗಳಲ್ಲಿ ಅಬ್ಬರ ಮುಗಿಸಿಕೊಂಡು ಇನ್ನೇನು ಮೋದಿ-ಅಮಿತ್ ಶಾ ದಂಡು ರಾಜ್ಯಕ್ಕೆ ಇಳಿಯಲಿದೆ ಎಂದರು.

Leave a Comment

Your email address will not be published. Required fields are marked *

Translate »
Scroll to Top