ಪಿಎಸ್ಐ ನೇಮಕ ಅಕ್ರಮದಲ್ಲಿ ಸಚಿವರ ತಮ್ಮ ಅಂತಾ ಅಲ್ಲ, ಮಂತ್ರಿಗಳ ಸಂಬಂಧಿ ಭಾಗಿಯಾಗಿದ್ದಾರೆ

ಬೆಂಗಳೂರು: ನನಗೆ ಬಂದಿರುವ ಮಾಹಿತಿ ಪ್ರಕಾರ ಪಿಎಸ್ಐ ನೇಮಕ ಅಕ್ರಮದಲ್ಲಿ ಸಚಿವರ ತಮ್ಮ ಅಂತಾ ಅಲ್ಲ, ಮಂತ್ರಿಗಳ ಸಂಬಂಧಿ ಭಾಗಿಯಾಗಿದ್ದಾರೆ ಎಂದು ಗೊತ್ತಾಗಿದೆ. ಇದು ಸತ್ಯವಿರಬಹುದು, ಇಲ್ಲದಿರಬಹುದು. ಒಂದೇ ತಾಲೂಕಿನ ಮೂವರು ಈ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ಅವರು ಆಸ್ತಿ ಮಾರಿ ಹಣ ನೀಡಿರುವುದು ಇಡೀ ಊರಿಗೆ ಗೊತ್ತಿರುವ ವಿಚಾರ. ಈ ವಿಚಾರವಾಗಿ ನಾನು ನೊಟೀಸ್ ಪಡೆಯುವ ಅಗತ್ಯವಿರುವುದಿಲ್ಲ. ನನಗೆ ಸಾಕಷ್ಟು ಕರೆಗಳು ಬರುತ್ತಿದ್ದು, ಆಯ್ಕೆಯಾಗಿದ್ದ ಅಭ್ಯರ್ಥಿ ತಂದೆ ಈ ರೀತಿ ಆಯ್ತಲ್ಲಾ ಎಂದು ಹಾಸಿಗೆ ಹಿಡಿದಿದ್ದಾರೆ. ಮತ್ತೊಬ್ಬರನ್ನು ಪ್ರಭಾವಿ ವ್ಯಕ್ತಿಗಳ ಪ್ರಭಾವ ಬಳಸಿ ಪೊಲೀಸರ ತನಿಖೆಯಿಂದ ಬಿಡಿಸಲಾಗಿದೆ. ಆ ಪ್ರಭಾವ ಬೀರಿದವರು ಯಾರು ಎಂದು ನನಗೆ ಗೊತ್ತಿಲ್ಲ. ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಸಿಐಡಿಯವರು ಎಷ್ಟು ಪ್ರಾಮಾಣಿಕವಾಗಿ ಈ ಪ್ರಕರಣದ ತನಿಖೆ ಮಾಡುತ್ತಾರೆ ಎಂಬುದು ಈಗ ಬಹಳ ಮುಖ್ಯ. ನಾವು ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದರೆ, ಮುಖ್ಯಮಂತ್ರಿಗಳು ನಾವು ರಭಸವಾಗಿ ಆಡಳಿತ ಮಾಡಿದರೆ ಶಿವಕುಮಾರ್ ಉಸಿರು ನಿಂತು ಹೋಗುತ್ತದೆ ಎಂದು ಹೇಳುತ್ತಾರೆ. ಮತ್ತೊಂದು ಕಡೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು, ಇಲ್ಯಾರೂ ಗಂಡಸರಿಲ್ಲ ಎಂದು ಸವಾಲು ಹಾಕುತ್ತಾರೆ. ನಾವು ಗಂಡಸರಲ್ಲ, ಅವರೋಬ್ಬರೇ ಗಂಡಸರು. ಹೀಗಾಗಿ ನಮಗೆ ಭಯ ಆಗುತ್ತಿದೆ. ಸರ್ಕಾರ ತನಿಖೆ ಮಾಡಿ ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಪ್ರಕಟಿಸುವ ಮುನ್ನವೇ ಪರೀಕ್ಷೆ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶಿಸಿದ್ದಾರೆ. ಈ ನಿರ್ಧಾರದ ಮೂಲಕ ಸರ್ಕಾರ ಕಾನೂನು ವ್ಯಾಜ್ಯಕ್ಕೆ ದಾರಿ ಮಾಡಿಕೊಡುತ್ತಿದೆ. ಜತೆಗೆ ಪ್ರಭಾವಿಗಳನ್ನು ರಕ್ಷಿಸುವ ಹುನ್ನಾರವಿದೆ.

ಪೊಲೀಸ್ ಇಲಾಖೆಗೆ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕರೇ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಪೊಲೀಸ್ ಮಹಾನಿರ್ದೇಶಕರು, ಗೃಹ ಸಚಿವರ ಹೇಳಿಕೆಗಳು ಭಿನ್ನವಾಗಿರುವುದು ಉತ್ತಮ ಆಡಳಿತವೇ? ಯಾರೋ ಕರೆ ಮಾಡಿದರು ಎಂದು ವಿಚಾರಣೆ ಮಾಡದೇ ಆರೋಪಿಗಳನ್ನು ಬಿಟ್ಟು ಕಳುಹಿಸುತ್ತಿದ್ದಾರೆ. ಮಾಧ್ಯಮಗಳು ಈ ಮಾಹಿತಿ ಪ್ರಕಟಿಸುತ್ತಿದ್ದು, ಮಾಧ್ಯಮಗಳಿಗೂ ಅವರು ನೊಟೀಸ್ ಕೊಟ್ಟು ವಿಚಾರಣೆ ಮಾಡಲಿ ನೋಡೋಣ. ಅಭ್ಯರ್ಥಿ ವಿಚಾರಣೆಗೆ ಕೊಟ್ಟ ನೊಟೀಸ್ ನಲ್ಲಿ ಅವರ ಹೆಸರಿದೆ. ಸಿಐಡಿ ಅಧಿಕಾರಿಗಳು ಬಂಧಿತ ಅಭ್ಯರ್ಥಿಗಳ ಊರಿಗೆ ಹೋಗಿ ಅಲ್ಲಿ ತನಿಖೆ ಮಾಡಿಲ್ಲ. ಅವರು ಅಷ್ಟು ಹಣ ಹೇಗೆ ಕೊಟ್ಟಿದ್ದಾರೆ ಎಂಬ ತನಿಖೆಯನ್ನೂ ಮಾಡಿಲ್ಲ. ಮುಖ್ಯಮಂತ್ರಿಗಳಿಗೆ ಬದ್ಧತೆ ಇದ್ದರೆ ಈ ಪ್ರಕರಣದಲ್ಲಿ ಭಾಗಿಯಾಗಿರುವವರು ಎಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದು ಬಿಜೆಪಿ ಶಾಸಕರು, ನಾಯಕರು, ಮಂತ್ರಿಗಳಾಗಿರಲಿ, ಕಾಂಗ್ರೆಸ್, ಜೆಡಿಎಸ್ ನವರಾಗಿರಲಿ, ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗ ಆ ಅಭ್ಯರ್ಥಿ, ಅವರಿಂದ ಹಣ ಪಡೆದವರ ವಿಚಾರಣೆ ಮಾಡದಂತೆ ಒತ್ತಡ ಹಾಕಿದವರು ಯಾರು? ಎಂಬ ವಿಚಾರವಾಗಿ ಮುಖ್ಯಮಂತ್ರಿಗಳು ಮಾಹಿತಿ ಪಡೆಯಬೇಕು. ಈ ಪ್ರಕರಣದಲ್ಲಿ ಸರ್ಕಾರ ಏನು ಮಾಡುತ್ತದೆ ಎಂದು ಕಾದು ನೋಡುತ್ತೇವೆ. ನಂತರ ನಾವು ಮಾತನಾಡುತ್ತೇವೆ. ನನಗೂ ಅನೇಕರು ಫೋನ್ ಕರೆ ಮಾಡಿ ಅವರು ಮುಂದೆ ಮುಖ್ಯಮಂತ್ರಿ ಆಗುವವರು, ಅವರ ಹೆಸರು ಎಳೆದು ತರಬೇಡಿ, ಮುಚ್ಚಿಹಾಕಿ ಎಂದು ಹೇಳುತ್ತಿದ್ದಾರೆ. ಬೇಕಾದರೆ ನನ್ನ ಫೋನ್ ಕರೆ ವಿವರ ಪರಿಶೀಲಿಸಿ. ಮಂಡ್ಯದ ನಾಯಕರೊಬ್ಬರು ನನಗೆ ಕರೆ ಮಾಡಿ ಈ ವಿಚಾರದ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಿದ್ದಾರೆ.

ಬಿಜೆಪಿಯವರು ನಾಯಕತ್ವ ಬದಲಾವಣೆ ಮಾಡುವ ವಿಚಾರ ಅವರಿಗೆ ಬಿಟ್ಟದ್ದು, ಆ ಬಗ್ಗೆ ನಾನು ಮಾತನಾಡುವುದಿಲ್ಲ :

ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವ ಭರವಸೆ ಕೊಟ್ಟರೆ ನೀವು ಆ ಸಚಿವರ ಹೆಸರು ಹೇಳುತ್ತೀರಾ ಎಂಬ ಪ್ರಶ್ನೆಗೆ, ‘ಇಲ್ಲಿ ಮುಚ್ಚುಮರೆ ಇಲ್ಲ. ಭ್ರಷ್ಟಾಚಾರ, ಸುಳ್ಳು, ಕೆಮ್ಮು ಹಾಗೂ ಇತರೆ ವಿಚಾರವನ್ನು ಬಚ್ಚಿಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಲಂಚ ನೀಡುವಾಗ ಆಸ್ತಿ ಮಾರಬೇಕು, ಇಲ್ಲವೇ ಸಾಲ ಮಾಡಬೇಕು. ಇದೆಲ್ಲವೂ ಆಚೆಗೆ ಬರುತ್ತದೆಯಲ್ಲವೇ? 40 % ಕಮಿಷನ್ ವಿಚಾರದಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ನಂತರ ಅನೇಕರು ನಾವು ಆತನಿಗೆ ಇಷ್ಟಿಷ್ಟು ಹಣ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಹೀಗೆ ಹಲವು ಪ್ರಕ್ರಿಯೆಗಳಿರುತ್ತವೆ. ಪಿಎಸ್ಐ ಪರೀಕ್ಷೆ ಪ್ರಕಟವಾದಾಗಿನಿಂದ ಹಿಡಿದು ಎಲ್ಲ ವಿಚಾರಗಳ ಬಗ್ಗೆ ತನಿಖೆ ಮಾಡಬೇಕು. ನನ್ನ ಬಳಿಯು ಕೆಲವು ಮುಗ್ಧರು ನಾನು ಅರ್ಜಿ ಹಾಕಿದ್ದೇನೆ. ಅಷ್ಟೋ, ಇಷ್ಟೋ ನೀಡುತ್ತೇವೆ ಕೆಲಸ ಕೊಡಿಸಿ ಎಂದು ಕೇಳುತ್ತಾರೆ. ನಾನು ಅವರಿಗೆ ಬೈಯ್ದು ಕಳಿಸಿದ್ದೇನೆ. ಪ್ರಾಮಾಣಿಕವಾಗಿ ಓದಿ ಪಾಸಾಗಿ ಆಯ್ಕೆಯಾಗಿ ಎಂದು ಹೇಳಿದ್ದೇನೆ. ಮತ್ತೆ ಕೆಲವರು ಇದಕ್ಕೆ ಪ್ರೋತ್ಸಾಹ ನೀಡಿ ಹಣ ಪಡೆದು ಸಿಕ್ಕಿಕೊಳ್ಳುತ್ತಾರೆ. ಈಗಲೂ ನಾನು ಹೇಳುತ್ತಿದ್ದೇನೆ, ನೀವುಗಳು ಕೂಡ ಆ ಊರುಗಳಿಗೆ ಹೋಗಿ ಆಯ್ಕೆಯಾಗಿದ್ದವರ ವಿಚಾರಣೆ ಮಾಡಿ. ಎಲ್ಲರೂ ಇದೇ ರೀತಿ ಆಯ್ಕೆಯಾಗಿದ್ದಾರೆ ಎಂದು ಹೇಳುತ್ತಿಲ್ಲ. ಸರ್ಕಾರಕ್ಕೆ ಅಕ್ರಮದ ಬಗ್ಗೆ ಮಾಹಿತಿ ಇರುವ ಕಾರಣಕ್ಕೆ, ಪರೀಕ್ಷೆ ರದ್ದು ಮಾಡಿದೆ ಅಲ್ಲವೇ? ತನಿಖಾ ವರದಿ ಬರುವ ಮುನ್ನವೇ ರದ್ದು ಮಾಡಿರುವುದು ಕೇವಲ ಅವರ ಪ್ರಭಾವಿ ನಾಯಕರ ರಕ್ಷಣೆಗಾಗಿ. ಮುಖ್ಯಮಂತ್ರಿಗಳೇ ನೀವು ಯಾರನ್ನೂ ರಕ್ಷಣೆ ಮಾಡಬೇಡಿ. ನಿಮ್ಮ ಕಾಲದಲ್ಲಿ ಈ ಅಕ್ರಮ ನಡೆದಿಲ್ಲ. ಆದರೆ ನಿಮ್ಮ ನೆರಳಲ್ಲಿ ಬೇರೆಯವರು ನಿಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ಹೀಗೆಲ್ಲಾ ಮಾಡುತ್ತಿದ್ದಾರೆ. ಇದಕ್ಕೆ ನೀವೇ ಜವಾಬ್ದಾರರಾಗುತ್ತೀರಿ. ಕಾಂಗ್ರೆಸ್ ಕಾರ್ಯಕರ್ತರು ತಪ್ಪು ಮಾಡಿದರೆ ನೀವುಗಳೆಲ್ಲಾ ನನ್ನನ್ನೇ ಬೈಯ್ಯುತ್ತೀರಿ ಅಲ್ಲವೇ’ ಎಂದರು. ನೀವು ಯಾಕೆ ಆ ಸಚಿವರ ಹೆಸರು ಹೇಳುತ್ತಿಲ್ಲ? ಎಂಬ ಪ್ರಶ್ನೆಗೆ, ‘ನನಗೆ ಅವರನ್ನು ಕಂಡರೆ ಭಯ ಇದೆ. ಅದಕ್ಕೆ ನಾನು ಅವರ ಹೆಸರು ಹೇಳುವುದಿಲ್ಲ’ ಎಂದು ಛೇಡಿಸಿದರು.

Leave a Comment

Your email address will not be published. Required fields are marked *

Translate »
Scroll to Top