ಮನುಷ್ಯನ ಜೀವ ಎಷ್ಟು ಮುಖ್ಯವೋ ಪ್ರಾಣಿ, ಪಕ್ಷಿಗಳ ಜೀವ ಕೂಡ ಅಷ್ಟೇ ಮುಖ್ಯ

ಮರಿಯಮ್ಮನಹಳ್ಳಿ ,ಮಾ,14 : ಬಿಸಲಿನ ಬೇಗೆಯಿಂದ ಎಲ್ಲ ಜೀವಿಗಳು ತತ್ತರಿಸುತ್ತಿವೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳು ನೀರು, ಆಹಾರಕ್ಕಾಗಿ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಪ್ರಾಣಿ, ಪಕ್ಷಿಗಳ ಸಂಕಷ್ಟ ಅರಿತು ಅವುಗಳನ್ನು ರಕ್ಷಣೆ ಮಾಡಲು ಪಟ್ಟಣದ ಪೊಲೀಸ್ ಠಾಣೆಯ ಪಿ.ಎಸ್.ಐ.ಗಳಾದ ಹನುಮಂತಪ್ಪ ತಳವಾರ್ ಹಾಗೂ ಮೀನಾಕ್ಷಿ ರವರು ಮುಂದಾಗಿದ್ದಾರೆ. ನಂತರ ಪಿ.ಎಸ್.ಐ.ಹನುಮಂತಪ್ಪ ತಳವಾರ್ ಮಾತನಾಡಿ, ಮನುಷ್ಯನ ಜೀವ ಎಷ್ಟು ಮುಖ್ಯವೋ ಪ್ರಾಣಿ, ಪಕ್ಷಿಗಳ ಜೀವ ಕೂಡ ಅಷ್ಟೇ ಮುಖ್ಯ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಜಲಮೂಲಗಳು ಬತ್ತುತ್ತಿವೆ. ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ. ನೀರಿಗಾಗಿ ಮೈಲುಗಟ್ಟಲೆ ಅಲೆಯಬೇಕಾಗಿದೆ. ಇದು ಸಣ್ಣ ಪಕ್ಷಿ, ಪ್ರಾಣಿಗಳ ಬದುಕಿಗೆ ಮಾರಕವಾಗಿದೆ. ನೀರು ಮತ್ತು ಆಹಾರ ಇಲ್ಲದೆ ಪಕ್ಷಿಗಳು ಜೀವ ಕಳೆದುಕೊಳ್ಳುವ ಭೀತಿ ಕಾಡುತ್ತಿದೆ.

ಪ್ರಾಣಿ, ಪಕ್ಷಿಗಳ ಈ ಸಮಸ್ಯೆ ಕಂಡು ನಾವು ಮತ್ತು ನಮ್ಮ ಠಾಣೆಯ ಸಿಬ್ಬಂದಿಗಳು ಪಕ್ಷಿಗಳ ರಕ್ಷಣೆಗಾಗಿ ನೀರು ಕುಡಿದು ಬೀಸಾಡಿದ ಬಾಟಲಿಗಳನ್ನು ಸಂಗ್ರಹಿಸಿ ತಂದು ಸಣ್ಣ ಡಬ್ಬಿಗಳಾಗಿ ಕತ್ತರಿಸಿ ಠಾಣೆಯ ಆವರಣದಲ್ಲಿನ ಗಿಡ, ಮರಗಳಿಗೆ ಕಟ್ಟಿ ಅದರಲ್ಲಿ ಒಂದು ಡಬ್ಬಿಯಲ್ಲಿ ಆಹಾರದ ಕಾಳುಗಳು, ಇನ್ನೊಂದು ಡಬ್ಬಿಯಲ್ಲಿ ನೀರು ತುಂಬಿಸಿದ್ದೆವೆ. ಅವುಗಳಲ್ಲಿ ತಮ್ಮ ಮನೆಯಿಂದ ತಂದ ಅಕ್ಕಿ, ಗೋಧಿ, ರಾಗಿ, ಕಾಳುಗಳನ್ನು ಹಾಕುತ್ತಿದ್ದಾರೆ. ಕಾಳು ಖಾಲಿಯಾಗುತ್ತಿದ್ದಂತೆ ತುಂಬಿಸಿಡುವರು. ಅಲ್ಲಲ್ಲಿ ಕುಡಿಯುವ ನೀರಿಗೂ ತೊಟ್ಟಿ ನಿರ್ಮಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಎ.ಎಸ್.ಐ.ಗಳಾದ ನಿರಂಜನ್ ಗೌಡ, ಮುರಾರಿ, ಠಾಕೂರ್ ನಾಯ್ಕ, ಪೇದೆಗಳಾದ ಪ್ರವೀಣ್, ಕೊಟ್ರೇಶ್, ಸಂಜೀವ್ ಮೂರ್ತಿ, ಲಕ್ಷ್ಮಿ, ಹೆಗ್ಗಪ್ಪ, ರವಿ, ಶಿವರಾಜ, ಗುರು ಇತರರಿದ್ದರು.

Leave a Comment

Your email address will not be published. Required fields are marked *

Translate »
Scroll to Top