ಹನುಮ ಜಯಂತಿ ಪುಣ್ಯದಿನವೇ ಜನತಾ ಜಲಧಾರೆ ಆರಂಭ

ಬೆಂಗಳೂರು: ಹನುಮ ಜಯಂತಿಯ ಪುಣ್ಯದಿನವಾದ ಇಂದು ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಸಂಕಲ್ಪ ಮಾಡಿ ಜಾತ್ಯತೀತ ಜನತಾದಳ ಹಮ್ಮಿಕೊಂಡಿರುವ ‘ಜನತಾ ಜಲಧಾರೆ-ಗಂಗಾ ರಥಯಾತ್ರೆ’ಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿತು. ರಾಜ್ಯದ 15 ಜೀವನದಿಗಳ ಪುಣ್ಯಜಲವನ್ನು ಅಷ್ಟೂ ವಾಹನಗಳ ಕಲಶಗಳಿಗೆ ತುಂಬಿಕೊಳ್ಳುವ ಕಾರ್ಯಕ್ರಮ ನಡೆಯಿತು. ವೇದಮಂತ್ರಗಳ ಪಠಣ, ಪೂಜೆ, ಮಂಗಳ ವಾದ್ಯಗಳ ಮೇಳ, ಕಲಾತಂಡಗಳ ಮೆರವಣಿಗೆ, ಪಕ್ಷದ ಕಾರ್ಯಕರ್ತೆಯರಿಂದ ಕಲಶಗಳ ಮೆರವಣಿಗೆ ಮೂಲಕ ಪುಣ್ಯಜಲವನ್ನು ಸಂಗ್ರಹ ಮಾಡಿ ಜಲಧಾರೆಯ ಗಂಗಾ ರಥಯಾತ್ರೆಗೆ ಮುನ್ನುಡಿ ಬರೆಯಲಾಯಿತು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಅವರು ಸಮಗ್ರ ಮಾಹಿತಿ ನೀಡಿದರು. ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ನಾಯಕರಾದ ಹೆಚ್.ಡಿ.ದೇವೇಗೌಡ ಅವರು ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರದಲ್ಲಿ ಕಾವೇರಿ ಜಲ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಜಲಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಹಾಸನ ಜಿಲ್ಲೆಯ ಹೇಮವತಿಯಲ್ಲಿ, ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ಥದ ಉತ್ತರ ಪಿನಾಕಿನಿ ನದಿಯಲ್ಲಿ ಜಲ ಸಂಗ್ರಹ ಮಾಡಿದರು.

ಶಾಸಕಿ ಅನಿತಾ ಕುಮಾರಸ್ವಾಮಿ, ಶಾಸಕ ಎ.ಮಂಜುನಾಥ್ ಮತ್ತಿತರೆ ಮುಖಂಡರು ಮೇಕೆದಾಟುನಲ್ಲಿ ಕಾವೇರಿ ನದಿ ನೀರು ಸಂಗ್ರಹ ಮಾಡಿದರು ಎಂದು ತಿಪ್ಪೇಸ್ವಾಮಿ ಅವರು ಮಾಹಿತಿ ನೀಡಿದರು. ಮಾಂಜ್ರಾ ನದಿಯಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಅವರು ಜಲಸಂಗ್ರಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭೀಮಾ ನದಿಯಲ್ಲಿ ನಾಗನಗೌಡ ಕಂದಕೂರು, ಶರಣ ಗೌಡ ಪಾಟೀಲ ಕಂದುಕೂರು, ತುಂಗಭದ್ರಾ ಜಲಾಶಯದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಸಚಿವ ಎನ್.ಎಂ.ನಬಿ ಮುಂತಾದವರು ಜಲ ಸಂಗ್ರಹ ಮಾಡಿದರು. ಹೇಮಾವತಿ ನದಿ ಉಗಮ ಸ್ಥಾನ ಜವಳಿಯಲ್ಲಿ ಮಾಜಿ ಸಚಿವ ಬಿ ಬಿ ನಿಂಗಯ್ಯ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಅಜಿತ್ ರಂಜನ್ ಮುಂತಾದವರು ಜಲಧಾರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯಲ್ಲಿ ಗಣಪಯ್ಯ ಹೆಗಡೆ, ಶಶಿ ಭೂಷಣ ಹೆಗಡೆ, ಯೋಗೇಶ್ ಶೆಟ್ಟಿ, ಸುಧಾಕರ್ ಶೆಟ್ಟಿ ಅವರು ಜಲ ಸಂಗ್ರಹ ಮಾಡಿದರು. ಹಾಗೆಯೇ ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಯೋಗೇಶ್ ಶೆಟ್ಟಿ ಅವರು ಪುಣ್ಯಜಲವನ್ನು ತುಂಬಿಕೊಂಡರು. ಕೊಡಗಿನ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಹಾಗೂ ಜಿಲ್ಲೆಯ ಅನೇಕ ಮುಖಂಡರು ಜಲ ಸಂಗ್ರಹ ಮಾಡಿಕೊಂಡರು

ಕಬಿನಿಯಲ್ಲಿ ಗೌಡರಿಂದ ಪೂಜೆ:

ಬೆಳಗ್ಗೆ ಹತ್ತು ಗಂಟೆಗೆ ಸರಿಯಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಕಬಿನಿ ಜಲಾಶಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಶಾಸಕ ಅಶ್ವಿನ್ ಕುಮಾರ ಮುಂತಾದವರು ಗಂಗಾ ಪೂಜೆ ಸಲ್ಲಿಸಿದರು. ಇನ್ನು ಬಯಲು ಸೀಮೆ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡುವ ಎತ್ತಿನಹೊಳೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ಸಕಲೇಶಪುರದಲ್ಲಿ ಜಲ ಸಂಗ್ರಹ ಮಾಡಿದರು.

ವಿಧುರಾಶ್ವತ್ಥದಲ್ಲಿ ನಿಖಿಲ್ ಕುಮಾರಸ್ವಾಮಿ: ನೀರಿನ ಬವಣೆಗೆ ತೀವ್ರವಾಗಿ ತುತ್ತಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ಥದಲ್ಲಿ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಉತ್ತರ ಪಿನಾಕಿನಿ ನದಿಯಲ್ಲಿ ಜಲ ಸಂಗ್ರಹ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ಪಿ.ಬಚ್ಚೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನೇಗೌಡ, ಶಾಸಕರಾದ ಕೆ.ಎಂ.ಕೃಷ್ಣಾರೆಡ್ಡಿ, ಗೋವಿಂದ ರಾಜು ಅವರುಗಳು ಹಾಜರಿದ್ದರು ಎಂದು ತಿಪ್ಪೇಸ್ವಾಮಿ ಅವರು ಮಾಹಿತಿ ನೀಡಿದರು ರಾಜ್ಯದ ಹದಿನೈದು ಕಡೆಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಹನುಮ ಜಯಂತಿಯ ದಿನವಾದ ಇಂದು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಈ ಕಾರ್ಯ ಆರಂಭ, ಮೇ 8ರವರೆಗೂ ನಡೆಯಲಿರುವ ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 94 ಕಡೆ ಜಲ ಸಂಗ್ರಹ ಮಾಡಿ ಕೊಂಡು ಬೆಂಗಳೂರು ತಲುಪಲಾಗುತ್ತದೆ. ಉಳಿದ ಕಡೆಗಳಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರು ಜಲಸಂಗ್ರಹ ಮಾಡಲಿದ್ದಾರೆ ಎಂದು ಅವರು ತಿಳಿಸಿದರು. 15 ಕಡೆಗಳಲ್ಲಿ ನಾಯಕರೆಲ್ಲರೂ ಜಲ ಸಂಗ್ರಹ ಮಾಡುವ ನೇರ ದೃಶ್ಯಾವಳಿ ನೋಡಲು ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬೃಹತ್ ಡಿಜಿಟಲ್ ಪರದೆ ಅಳವಡಿಸಲಾಗಿತ್ತು. ಹದಿನೈದು ಕಡೆಗಳಲ್ಲಿ ಜಲ ಸಂಗ್ರಹ ಮಾಡಿದ ದೃಶ್ಯಗಳು ಹಾಗೂ ವೇದಿಕೆಯ ಕಾರ್ಯಕ್ರಮಗಳು ನೇರ ಪ್ರಸಾರವಾದವು.

Leave a Comment

Your email address will not be published. Required fields are marked *

Translate »
Scroll to Top