ಬೆಂಗಳೂರು : ಲೋಕಾಯುಕ್ತದಲ್ಲಿ ನಡೆಯುತ್ತಿರುವ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಚನ್ನಪಟ್ಟಣ ಉಪಚುನಾವಣೆಯ ಪ್ರಚಾರಕ್ಕೆ ತೆರಳುವ ಮುನ್ನ ತಮ್ಮ ಡಾಲರ್ಸ್ ಕಾಲೋನಿಯ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಲೋಕಾಯುಕ್ತ ವಿಚಾರಣೆಗೆ ಒಳಪಟ್ಟಿದ್ದಾರೆ. ಲೋಕಾಯುಕ್ತ ತನಿಖೆಯಿಂದ ಏನೂ ಆಗಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ, ಮುಖ್ಯಮಂತ್ರಿಗಳು ತಾವು ಸಾಚಾ ಎಂಬುದನ್ನು ಬಿಂಬಿಸಿಕೊಳ್ಳಲು ವಿಚಾರಣೆಗೆ ಹಾಜರಾಗಿ ದೊಂಬರಾಟ ನಡೆಸಿದ್ದಾರೆ ಅಷ್ಟೇ ಎಂದು ಟೀಕಿಸಿದರು.
ಮುಡಾ ಹಗರಣದ ಸತ್ಯಾಸತ್ಯತೆ ಹೊರ ಬರಬೇಕು ಎಂದರೆ ಸಿಬಿಐ ತನಿಖೆ ಆಗಲೇಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆ. ನಾನು ಸಿಬಿಐ ತನಿಖೆಗೆ ಆಗ್ರಹಿಸುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಎಂದೆಲ್ಲ ಹೇಳುತ್ತಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ, ಮುಡಾ ಪ್ರಕರಣದ ಸತ್ಯಸತ್ಯಾತೆ ಹೊರಬರಬೇಕು ಎನ್ನುವ ಆಶಯ ಇದ್ದರೆ ಕೂಡಲೇ ಮುಡಾ ಹಗರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಿ ಎಂದು ಆಗ್ರಹಿಸಿದರು.
ಸಚಿವರು ರಾಜೀನಾಮೆ ನೀಡಲಿ : ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ರಾಜೀನಾಮೆ ನೀಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಾಗಿದೆ. ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮದ್ಯ ಮಾರಾಟಗಾರರೇ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಹಾಗಾಗಿ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಅವರು, ಮುಖ್ಯಮಂತ್ರಿಗಳು ಇದಕ್ಕೆ ಜವಾಬ್ದಾರಿ ಹೊರಬೇಕು ಎಂದರು.
ವಕ್ಫ್ ಆಸ್ತಿ ಕಬಳಿಕೆಯ ವಿರುದ್ಧ ಮಠಾಧೀಶರು, ಬಿಜೆಪಿ ನಾಯಕರು ಹೋರಾಟ ನಡೆಸಿದ್ದಾರೆ. ವಕ್ಫ್ ವಿವಾದಕ್ಕೆ ಕಾರಣರಾದ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಂದ ರಾಜೀನಾಮೆ ಪಡೆದು ವಕ್ಫ್ ಭೂ ಕಬಳಿಕೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಬಿಎಸ್ ವೈ ಒತ್ತಾಯಿಸಿದರು.