ಗ್ಯಾರಂಟಿಯಿಂದ 1 ಕೋಟಿಗೂ ಹೆಚ್ಚು ಜನ ಬಡತನ ರೇಖೆಯಿಂದ ಮೇಲಕ್ಕೆ
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಐದೂ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದೆ. ಇದರ ಪರಿಣಾಮವಾಗಿ 1 ಕೋಟಿಗೂ ಹೆಚ್ಚು ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ವಿಕಾಸಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದಾಗಿ ಹಣದ ಹರಿವು ನಿರಂತರವಾಗಿದ್ದು, ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಇದು ರಾಜ್ಯದ ಪ್ರಗತಿಗೂ ಪರೋಕ್ಷವಾಗಿ ಪ್ರಯೋಜವಾಗುತ್ತಿದೆ. ಹೀಗಾಗಿ ಗ್ಯಾರಂಟಿ ಯೋಜನೆ ಯಾವುದೇ ಬದಲಾವಣೆ ಇಲ್ಲದೆ. ಪ್ರಸಕ್ತ ಸ್ವರೂಪದಲ್ಲಿ ಮುಂದುವರಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಬಡವರು, ದುರ್ಬಲರು, ವಂಚಿತರು,ಶೋಷಿತರ ಪರವಾಗಿ ನಿಂತಿದೆ. ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ, ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ.
ನಾವು ಎಲ್ಲ ಸಮಾಜಮುಖಿ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಆರ್ಥಿಕ ಲಾಭ ನಷ್ಟದಿಂದ ನೋಡಬಾರದು. ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆ ಮುಂದುವರಿಯುತ್ತದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅದು ಮುಂದುವರಿಯುತ್ತದೆ ಎಂದರು.