ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಕರಡು ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಅರ್ಜಿ ಇನ್ನೂ ಅಂತಿಮವಾಗಿಲ್ಲ, ಅದರಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದ್ದು, ಅಂತಿಮ ಅರ್ಜಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಮಾಜಿಕ ಜಾಲತಾಣಗಳು ಸೇರಿದಂತೆ ವಾಟ್ಸಾಪ್ ನಲ್ಲಿ ಫಾರ್ಮ್ ಓಡಾಡ್ತಿರೋದು ಅಸಲಿಯಾಗಿದ್ದು ಅಂತಿಮವಾಗಿಲ್ಲ, ಕೆಲವೊಂದು ಬದಲಾವಣೆ ಮಾಡಲಿದ್ದೇವೆ ಎಂದು ಹೇಳಿದರು.
ಈಗಾಗಲೇ ಅರ್ಜಿಯಲ್ಲಿ ಕೆಲವೊಂದು ಬದಲಾವಣೆಗೆ ಸಲಹೆ-ಸೂಚನೆಗಳು ಬಂದಿದ್ದು, ಉತ್ತಮ ಸಲಹೆಗಳನ್ನು ಮುಕ್ತವಾಗಿ ಅಳವಡಿಸಿಕೊಳ್ಳಲಾಗುವುದು. ಮುಖ್ಯವಾಗಿ ಫಲಾನುಭವಿಗಳ ಬ್ಯಾಂಕ್ ಪಾಸ್ ಬುಕ್ ಮಾಹಿತಿ ಸೇರಿಸಲಾಗುವುದು, ಜಾತಿ ಬದಲು ವರ್ಗ ಅಂತ ಹಾಕುತ್ತೇವೆ, ಸಂದೇಶ ತಪ್ಪಾಗಿ ಹೋಗಬಾರದು. ಗಂಡ ತೆರಿಗೆ ಕಟ್ಟೋದು ಮಾತ್ರ ಒಳಪಡುತ್ತೆ, ಮಗ ತೆರಿಗೆ ಕಟ್ಟೋದು ಅನ್ವಯ ಆಗಲ್ಲ, ಯೋಜನೆಯ ಫಲಾನುಭವಿಗಳು ಬಹುತೇಕ 90% ಬಿಪಿಎಲ್ ಕಾರ್ಡಲ್ಲಿ ಮಹಿಳೆಯರೇ ಪ್ರಮುಖ ಆಗಲಿದ್ದಾರೆ. ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗಬೇಕು ಮತ್ತು ಅವರನ್ನು ತಪ್ಪದೇ ಸೇರಿಸಲಾಗುತ್ತದೆ ಎಂದು ಹೇಳಿದರು.