ಸ್ಫೋಟ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದುಷ್ಕರ್ಮಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು : “ನಿನ್ನೆಯ ಸ್ಫೋಟದ ಪ್ರಕರಣವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ದುರ್ಘಟನೆಗೆ ಕಾರಣರಾಗಿರುವವರು ಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

          ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಶನಿವಾರ ಹೇಳಿದ್ದಿಷ್ಟು;

 

          “ಪ್ರಕರಣದ ತನಿಖೆಗೆ 7-8 ತಂಡಗಳನ್ನು ನಿಯೋಜನೆ ಮಾಡಲಾಗಿದ್ದು, ಬೆಂಗಳೂರಿನಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತಿದೆ. ದುಷ್ಕರ್ಮಿ ಹೇಗೆ ಬಂದ, ಯಾವ ರೀತಿ ಸ್ಫೋಟಕ ಇಟ್ಟು ಹೋದ ಎಂಬ ಬಗ್ಗೆ ವಿಡಿಯೋ ಸಿಕ್ಕಿವೆ. ಅವನ ಚಹರೆ ಬಗ್ಗೆ ಸುಳಿವು ಸಿಕ್ಕಿದೆ. ಈ ತನಿಖೆಯ ಮಾಹಿತಿಯನ್ನು ಈ ಹಂತದಲ್ಲಿ ಬಹಿರಂಗಪಡಿಸುವುದಿಲ್ಲ. ಪೊಲೀಸ್ ಅಧಿಕಾರಿಗಳು ತನಿಖೆ ಮಾಡಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಈ ಪ್ರಕರಣದಲ್ಲಿ ಪರಿಣಾಮಕಾರಿ ತನಿಖೆ ನಡೆಯಲಿದೆ.

          ಬಿಜೆಪಿ ನಾಯಕರು ಏನೇ ಟೀಕೆ ಮಾಡಿಕೊಳ್ಳಲಿ ನಾವು ಅವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನಮಗೆ ರಾಜ್ಯದ ಘನತೆ ಕಾಪಾಡುವುದು ಪ್ರಮುಖ ಆದ್ಯತೆ. ಈ ಪ್ರಕರಣದಲ್ಲಿ ಸಹಕಾರ ಕೊಟ್ಟರೂ ಸರಿ, ರಾಜಕಾರಣ ಮಾಡಿದರೂ ಸರಿ. ನಾವು ಮಾತ್ರ ಈ ಪ್ರಕರಣವನ್ನು ಎಲ್ಲಾ ಆಯಾಮದಲ್ಲಿ ನೋಡಿ ತನಿಖೆ ಮಾಡಲಾಗುವುದು.”

          ಮಂಗಳೂರು ಸ್ಫೋಟದ ಲಿಂಕ್ ಇರುವ ಅನುಮಾನವಿದೆ:

          ಇದು ಸಂಘಟನೆಗಳ ಕೆಲಸವೇ ಅಥವಾ ಬೇರೆಯವರ ಕೃತ್ಯವೇ ಎಂದು ಕೇಳಿದಾಗ, “ಮಂಗಳೂರಿನ ಘಟನೆಗೂ ಇದಕ್ಕೂ ಲಿಂಕ್ ಇರುವಂತೆ ಕಾಣುತ್ತಿದೆ. ಎರಡೂ ಕಡೆ ಬಳಸಿದ ಸ್ಫೋಟಕ ಸಾಮಾಗ್ರಿಗಳಲ್ಲಿ ಸಾಮ್ಯತೆ ಇದೆ. ಹೀಗಾಗಿ ಮಂಗಳೂರು ಹಾಗೂ ಶಿವಮೊಗ್ಗ ಪೊಲೀಸರು ಕೂಡ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಜನತೆ ಆತಂಕ ಪಡುವ ಅಗತ್ಯವಿಲ್ಲ” ಎಂದು ತಿಳಿಸಿದರು.

          ಬೆಂಗಳೂರು ಹೆಸರು ಹಾಳು ಮಾಡುವ ಪ್ರಯತ್ನದ ಬಗ್ಗೆ ಗೊತ್ತಿದೆ:

          ಸಹಕಾರ ನೀಡುತ್ತೇವೆ ಆದರೆ ಪ್ರಕರಣ ಮುಚ್ಚಿಹಾಕಬಾರದು ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಯಾವ ರೀತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ನಾವು ನೋಡುತ್ತಿದ್ದೇವೆ. ಅವರ ಸಹಕಾರ ಬೇಡ. ಅವರು ಬೆಂಗಳೂರಿನ ಹೆಸರು ಹಾಳು ಮಾಡಲು ಏನೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ನಮ್ಮ ಗಮನಕ್ಕೆ ಇದೆ” ಎಂದು ಕಿಡಿಕಾರಿದರು.

          ಗುಪ್ತಚರ ಇಲಾಖೆ ವೈಫಲ್ಯವೇ ಎಂದು ಕೇಳಿದಾಗ, “ಆ ರೀತಿ ಇಲ್ಲ. ಬಿಜೆಪಿ ಅವಧಿಯಲ್ಲೂ ಇಂತಹ ಘಟನೆಗಳು ನಡೆದಿವೆ. ಸಂಸತ್ತಿನಲ್ಲಿ ಏನಾಯ್ತು ಎಂದು ಎಲ್ಲರೂ ನೋಡಿದ್ದೇವೆ” ಎಂದರು.

          ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸಲಾಗುವುದು:

 

          ಗಾಯಾಳುಗಳ ವಿಚಾರವಾಗಿ ಕೇಳಿದಾಗ, “ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಬಿಬಿಎಂಪಿ ವತಿಯಿಂದ ಭರಿಸಲಾಗುವುದು. ಪರಿಹಾರ ನೀಡುವ ಸಂದರ್ಭ ಬಂದರೆ ಅದನ್ನು ನೀಡುತ್ತೇವೆ” ಎಂದು ತಿಳಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top