ಪೋಲೀಸ್ ಇಲಾಖೆಯನ್ನು ಬಲಪಡಿಸಲು ಸರ್ಕಾರ ಮುಂದಾಗಿದ್ದು ಸಬ್ ಇನ್ಸ್ ಪೆಕ್ಟರ್,ಕಾನ್ ಸ್ಟೇಬಲ್ ಸೇರಿದಂತೆ 20 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದೆ. ವಿಧಾನಸೌಧದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ವಿಷಯ ತಿಳಿಸಿದರು. ಪೋಲೀಸ್ ನೇಮಕಾತಿ ಸಂದರ್ಭದಲ್ಲಿ ವಿವಾದಕ್ಕೀಡಾದ ಐನೂರಕ್ಕೂ ಹೆಚ್ಚು ಹುದ್ದೆಗಳ ವಿಷಯದಲ್ಲಿ ನ್ಯಾಯಾಲಯ ನೀಡುವ ತೀರ್ಪನ್ನು ಆಧರಿಸಿ ಮುಂದಿನ ಹೆಜ್ಜೆ ಇಡುತ್ತೇವೆ.ಆ ತೀರ್ಪನ್ನು ಆಧರಿಸಿಯೇ ಇನ್ನೂ ನಾಲ್ಕುನೂರಕ್ಕೂ ಹೆಚ್ಚು ಪಿ.ಎಸ್.ಐ ಹುದ್ದೆಗಳ ಭರ್ತಿ ಕಾರ್ಯ ಮಾಡುತ್ತೇವೆ.
ಆದರೆ ಇದನ್ನು ಹೊರತುಪಡಿಸಿದಂತೆ 19 ಸಾವಿರ ಹುದ್ದೆಗಳ ಭರ್ತಿ ಕಾರ್ಯವನ್ನು ಆರಂಭಿಸಲಿದ್ದು ಬೆಂಗಳೂರು ನಗರಕ್ಕೆ 2500 ಮತ್ತು ರಾಜ್ಯದ ಉಳಿದ ಭಾಗಗಳಿಗೆ 3500 ಪೋಲೀಸ್ ಕಾನ್ಸ್ ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯ ಸಧ್ಯದಲ್ಲೇ ಆರಂಭವಾಗಲಿದೆ ಎಂದರು.
ಪಿ.ಎಸ್.ಐ ನೇಮಕಾತಿ ಹಗರಣದ ಹಿನ್ನೆಲೆಯಲ್ಲಿ ಐನೂರಕ್ಕೂ ಹೆಚ್ಚು ಹುದ್ದೆಗಳಿಗೆ ಮರುಪರೀಕ್ಷೆ ನಡೆಸಬೇಕು ಎಂಬುದು ಸರ್ಕಾರದ ನಿಲುವು.ಇದನ್ನು ಅಡ್ವೊಕೇಟ್ ಜನರಲ್ ಅವರು ನ್ಯಾಯಾಲಯಕ್ಕೂ ತಿಳಿಸಿದ್ದಾರೆ.
ಆದರೆ ನಲವತ್ತೆರಡು ಮಂದಿ ಆಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿರುವುದರಿಂದ ಉಳಿದವರು ನಿರಪರಾಧಿಗಳು.ಹೀಗಾಗಿ ಆರೋಪವಿರುವವರನ್ನು ಹೊರತುಪಡಿಸಿ ಉಳಿದವರಿಗೆ ಮರುಪರೀಕ್ಷೆ ಮಾಡುವ ಬದಲಿಗೆ ನೇಮಕಾತಿ ಆದೇಶ ನೀಡಬೇಕು ಎಂದು ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ವಿಷಯದಲ್ಲಿ ನ್ಯಾಯಾಲಯ ಏನು ತೀರ್ಪು ಕೊಡುತ್ತದೆ?ಏನು ನಿರ್ದೇಶನ ನೀಡುತ್ತದೆ?ಎಂಬುದರ ಆಧಾರದ ಮೇಲೆ ಈ ಪ್ರಕರಣ ಇತ್ಯರ್ಥವಾಗಲಿದ್ದು,ವಿವಾದಗ್ರಸ್ತ ನೇಮಕಾತಿಯನ್ನು ಹೊರತುಪಡಿಸಿದಂತೆ ಬಾಕಿ ಇರುವ ನಾಲ್ಕು ನೂರಕ್ಕೂ ಹೆಚ್ಚು ಪಿ.ಎಸ್.ಐ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶ ನಮಗಿದ್ದರೂ,ಮೊದಲ ಕಂತಿನ ನೇಮಕಾತಿ ವಿಷಯದಲ್ಲಿ ನ್ಯಾಯಾಲಯ ತೀರ್ಪು ನೀಡುವ ತನಕ ನಾವು ಮುಂದುವರಿಯಲು ಸಾಧ್ಯವಿಲ್ಲ ಎಂದರು.
ಈ ಮಧ್ಯೆ ಪಿ.ಎಸ್.ಐ ಹುದ್ದೆಗಳ ಕೊರತೆ ಹೆಚ್ಚಾಗುತ್ತಿರುವುದರಿಂದ ಪೋಲೀಸ್ ಕಾಯ್ದೆಯ 32 ನೇ ನಿಯಮದ ಪ್ರಕಾರ ಸಹಾಯಕ ಸಬ್ ಇನ್ಸ್ ಪೆಕ್ಟರ್ ಗಳಿಗೆ ಭಡ್ತಿ ನೀಡಲು ತೀರ್ಮಾನಿಸಲಾಗಿದೆ ಎಂದ ಅವರು,ಆ ಮೂಲಕ ಸುಮಾರು ಆರುನೂರರಿಂದ ಏಳು ನೂರು ಮಂದಿ ಪಿ.ಎಸ್.ಐ ಗಳಾಗಲಿದ್ದಾರೆ ಎಂದು ವಿವರಿಸಿದರು.