ಭವಿಷ್ಯದಲ್ಲಿ ನಾವೇನಾಗಬೇಕೆಂಬ ಗುರಿ ಸ್ಪಷ್ಟವಾಗಿರಬೇಕು: ರವಿ ಚನ್ನಣ್ಣನವರ್

ಕೊಪ್ಪಳ,: ನಿಮ್ಮ ಭವಿಷ್ಯದ ಆಯ್ಕೆ ನೀವೇ ಮಾಡಬೇಕು. ವಿಚಾರ ಮಾಡಿ ಗಟ್ಟಿ ನಿರ್ಧಾರ ಕೈಗೊಂಡು ಮುನ್ನಡೆಯಿರಿ ಎಂದು ಸಿಐಟಿ ಎಸ್ಪಿ ರವಿ ಡಿ.ಚನ್ನಣ್ಣನವರ್ ಹೇಳಿದರು.ಶನಿವಾರ ನಗರದ ಸಾಹಿತ್ಯ ಭವನದಲ್ಲಿ ಎಸ್-ಯುಪಿಎಸ್‌ಸಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಉಚಿತ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯಾವುದೇ ರಂಗವಿರಲಿ ಅದಕ್ಕೆ ತನ್ನದೇ ಘನತೆಯಿದೆ. ನಾವೇನಾಗಬೇಕೆಂಬ ಗುರಿ ಸ್ಪಷ್ಟವಾಗಿರಬೇಕು. ಸ್ಪರ್ಧಾತ್ಮಕ ಕಲಿಕೆಗೆ ಇಂದು ಸಾಕಷ್ಟು ಅವಕಾಶಗಳಿವೆ. ಅಂಗೈನಲ್ಲಿ ಮೊಬೈಲ್ ಇದೆ. ಅದರಲ್ಲಿ ಕೇವಲ ಸಾಮಾಜಿಕ ಜಾಲತಾಣ ವೀಕ್ಷಿಸಬೇಡಿ. ಅಂತರ್ಜಾಲದಲ್ಲಿ ಕಲಿಕೆಗೆ ಬೇಕಾದ ಸರಕು ಹುಡುಕಿ. ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಹಿಂದಿದೆ. ಅದನ್ನು ಬದಲಿಸಬೇಕು. ಬಡತನ ಇದೆ ಎಂಬ ಕೊರಗು ಬೇಡ. ಆತ್ಮವಿಶ್ವಾಸ ಇದ್ದಲ್ಲಿ ನಿಮ್ಮ ಗುರಿ ಸಾಧನೆ ಹಾದಿ ಸುಲಭವಾಗಲಿದೆ ಎಂದರು.


ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅನೇಕ ಅಭ್ಯರ್ಥಿಗಳು ಆಸಕ್ತಿ ಹೊಂದಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಜಿಲ್ಲಾಡಳಿತದಿಂದಲೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಸಾಕಷ್ಟು ಅನುಕೂಲ ಕಲ್ಪಿಸಲಾಗುತ್ತಿದೆ. ವಿವಿಧ ಇಲಾಖೆಗಳಿಂದ ಇರುವ ನೆರವು ನೀಡಲಾಗುವುದು. ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.ಸಿಇಒ ಫೌಜಿಯಾ ತರನ್ನುಮ್ ಅವರು ಮಾತನಾಡಿ, ನಗರ ಪ್ರದೇಶದ ಅಭ್ಯರ್ಥಿಗಳಿಗೆ ಸಾಕಷ್ಟು ಅವಕಾಶ, ಅನುಕೂಲಗಳಿವೆ. ಅದರಂತೆ ಗ್ರಾಮೀಣ ಭಾಗದಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲಕರ ವಾತಾವರಣ ನಿರ್ಮಿಸಬೇಕಿದೆ. ಜಿಪಂ, ನರೇಗಾ ಸೇರಿ ಇತರ ಯೋಜನೆಗಳಡಿ ಗ್ರಾಪಂ ಮಟ್ಟದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲಾಗುವುದು ಎಂದರು.


ಎಸ್.ಪಿ ಟಿ.ಶ್ರೀಧರ, ಸಂಪನ್ಮೂಲ ವ್ಯಕ್ತಿ ಅಶೋಕ ಮಿರ್ಜಿ, ಆಯೋಜಕರಾದ ಹನುಮೇಶ ಎಸ್.ಹುಳ್ಕಿಹಾಳ, ಜಿ.ವಿನಾಯಕ, ಶಂಕ್ರಯ್ಯ ಅಬ್ಬಿಗೇರಿ ಮಠ, ಶರಣಬಸವ ಹುಲಿಹೈದರ್ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top