ಬಳ್ಳಾರಿ : ಕುಡಿಯುವ ನೀರು, ದನಕರುಗಳಿಗೆ ಮೇವು, ಕೃಷಿ ಪಂಪ್ಸೆಟ್ಟುಗಳಿಗೆ ವಿದ್ಯುತ್ ಸಮಸ್ಯೆ ಸೇರಿದಂತೆ ಇನ್ನಿತರೆ ಸಮಸ್ಯೆಗಳು ರಾಜ್ಯದಲ್ಲಿನ ರೈತರನ್ನ ಸಂಕಷ್ಟಕ್ಕೀಡುಮಾಡಿವೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.
ಬಳ್ಳಾರಿ ನಗರದ ಖಾಸಗಿ ಹೋಟೆಲ್‍ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲದ ಕಾರಣ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿದೆ. ರಾಜ್ಯದಲ್ಲಿರುವ 40 ಲಕ್ಷ ಕೃಷಿ ಪಂಸೆಟ್ಗಳ ಪೈಕಿ 10 ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ನೀರು ಇಂಗಿ ಹೋಗಿದೆ ಹಳ್ಳಿಗಳ ಕೆರೆಕಟ್ಟೆಗಳು ಬತ್ತಿ ಹೋಗಿ ಪರಿಸರ ನಾಶವಾಗುತ್ತಿರುವ ಕಾರಣ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಹಳ್ಳಿಗಳಲ್ಲಿ ರೈತರು ಗುಡಿ, ಮಂದಿರ, ಸಮುದಾಯ ಭವನಗಳ, ನಿರ್ಮಾಣದ ಬದಲು ಮುಂದಿನ ತಲೆಮಾರಿಗೆ ಕೃಷಿ ಉಳಿಸಲು ಕೆರೆಕಟ್ಟೆಗಳನ್ನು ಪುನರ್ಜೀವನಗೊಳಿಸಿ ಸಂರಕ್ಷಿಸಲು ರೈತರು ಮುಂದಾಗಬೇಕು ಪರಿಸರ ನಾಶದಿಂದ ಬರಗಾಲದ ಸಂಕಷ್ಟ ಹೆಚ್ಚುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯಾದ್ಯಂತ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಕೆಟ್ಟು ಹೋದ ಟಿ ಸಿಗಳ ಜೋಡಣೆ ವಿಳಂಬವಾಗುತ್ತಿದೆ. ಅಧಿಕಾರಿಗಳು ಚುನಾವಣೆಯ ಗುಂಗಿನಲ್ಲಿ ತೇಲಾಡುತ್ತಿದ್ದಾರೆ ಹತಾಶೆಗೊಂಡ ರೈತ ವಲಸೆ ಹೋಗುತ್ತಿದ್ದಾನೆ. ಬರಗಾಲದ ಭವಣೆಯಲ್ಲಿರುವ ರೈತರ ಸಾಲ ವಸೂಲಿ ಮಾಡಬಾರದು ಎಂದು ಎಲ್ಲ ಬ್ಯಾಂಕು ಸಹಕಾರ ಸಂಘಗಳಿಗೆ ಸರ್ಕಾರದ ಆದೇಶ ಇದ್ದರೂ ಬ್ಯಾಂಕುಗಳು ಅದನ್ನು ನಿರ್ಲಕ್ಷಿಸಿ, ರೈತರನ್ನ ಸುಲಿಗೆ ಮಾಡುತ್ತಿವೆ. ಅದರ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ದೆಹಲಿಯಲ್ಲಿ ರೈತ ಹೋರಾಟ ದಿಕ್ಕು ತಪ್ಪಿಸಲು ರೈತರ ಮೇಲೆ ಗೋಲಿಬಾರ್ ಮಾಡಿ ಶುಭಕರಣ್ ಸಿಂಗ್ ಎನ್ನುವ ರೈತನನ್ನು ಕೇಂದ್ರ ಸರ್ಕಾರ ಕೊಲೆ ಮಾಡಿದೆ. ರೈತ ಸಂಘಟನೆಗಳು ರಾಜಕೀಯ ಪಕ್ಷಗಳ ಹಂಗಿನಲ್ಲಿ ಸಾಗಬಾರದು ಬಂಡವಾಳಶಾಹಿಗಳ ಕುತಂತ್ರದ ನಡೆಗಳಿಂದ ರೈತರ ಸಮಸ್ಯೆಗಳು ಹೆಚ್ಚುತ್ತಿವೆ. ಹಳ್ಳಿ ಹಳ್ಳಿಗಳಲ್ಲಿ ರೈತರು ಜಾತಿ ಪಕ್ಷವನ್ನ ಬದಿಗೊತ್ತಿ ಸಂಘಟಿತರಾಗಿ ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಟಕ್ಕೆ ನಿಲ್ಲುವಂತಾಗಬೇಕು. ರೈತರ ಹೆಸರಿನಲ್ಲಿ ಹುಟ್ಟುವ ರೈತ ಸಂಘಗಳು ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಸಂಘಟನೆಗಳಾಗಬೇಕು ರೈತರ ಹೆಸರಲ್ಲಿ ರಾಜಕೀಯ ಪಕ್ಷದ ಹಂಗಿನಲ್ಲಿ ಸಾಗಬಾರದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು
ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಬಲ್ಲೂರ್ ರವಿಕುಮಾರ್. ಮಹಿಳಾ ಅಧ್ಯಕ್ಷೆ ಜಿ ವಿ ಲಕ್ಷ್ಮೀದೇವಿ, ರೈತ ಮುಖಂಡ ಕೊಟ್ರೇಶ್ ಚೌದರಿ, ಎನ್ ಎಚ್ ದೇವಕುಮಾರ್, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಸುನೀಲ್ ಇದ್ದರು