ಸರ್ವಾಧಿಕಾರ ಪತನ ಆಗಲೇಬೇಕು: ವಿಜಯೇಂದ್ರ ವಿರುದ್ಧ ಕಿಡಿಕಾರಿದ ಯತ್ನಾಳ್

Kannada Nadu
ಸರ್ವಾಧಿಕಾರ ಪತನ ಆಗಲೇಬೇಕು: ವಿಜಯೇಂದ್ರ ವಿರುದ್ಧ ಕಿಡಿಕಾರಿದ ಯತ್ನಾಳ್

ಬೆಂಗಳೂರು: ವಿಜಯೇಂದ್ರಗೆ ದುಡ್ಡಿನ ದುರಹಂಕಾರವಿದೆ. ದುಡ್ಡು ಮಾತಾಡಿಸ್ತಿದೆ. ರಾಜ್ಯ ಸರ್ಕಾರವೂ ಸಹ ಅವರ ಜೊತೆಗೆ ಇರೋದು ದುರ್ದೈವ ಎಂದು ಬಸನಗೌಡ ಯತ್ನಾಳ್ ವಾಗ್ದಾಳಿ ನಡೆಸಿದರು.ವಿಧಾನಸೌಧದಲ್ಲಿ ಮಾತನಾಡಿದ ಅವರು, ಸರ್ವಾಧಿಕಾರ ಪತನ ಆಗಲೇಬೇಕು. ಬಹಳ ದಿವಸ ಅನ್ಯಾಯ, ಸರ್ವಾಧಿಕಾರಿ ಮನಸ್ಥಿತಿ ಯಾವ ನಾಯಕನಲ್ಲಿದೆಯೋ ಅವರ ಅಂತ್ಯ ಬೇಗ ಆಗುತ್ತದೆ. ಈಗ ಆ ಕಾಲ ಬಂದಿದೆ ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದರು.

ಮುಡಾ ಪ್ರಕರಣದಲ್ಲಿ ಮೈಸೂರಿಗೆ ಪಾದಯಾತ್ರೆ ತಲುಪುವುದರೊಳಗೆ ರಾಜೀನಾಮೆ ಕೊಡಬೇಕು ಅಂತ ವಿಜಯೇಂದ್ರ ಹೇಳಿದರು. ಆದರೆ, ವಿಜಯೇಂದ್ರ ಮೇಲಿರುವ ಆರೋಪ ಹೊರ ತೆಗೆದು ಬಿಟ್ಟರೆ ಅವರ ಕಥೆ ಮುಗಿದೇ ಹೋಗುತ್ತದೆ. ಅದ್ಯಾಕೆ ಸಿದ್ದರಾಮಯ್ಯನವರು ಸುಮ್ಮನಿದ್ದಾರೋ. ಇಲ್ಲ, ಸಿದ್ದರಾಮಯ್ಯರದ್ದು ಏನಾದ್ರೂ ವಿಜಯೇಂದ್ರ ಹತ್ರ ಇದೆಯೋ ಗೊತ್ತಿಲ್ಲ. ಅದಕ್ಕೆ ಹೊಂದಾಣಿಕೆ ಮಾಡಿಕೊಂಡಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ವಿಜಯೇಂದ್ರ ಅವರ ನೈಜ ಬಣ್ಣ ಬಯಲಾಗುತ್ತಿದೆ, ವರಿಷ್ಠರಲ್ಲಿ ನಾನು ಒಂದು ಮನವಿ ಮಾಡುತ್ತೆನೆ. ಯಾಕೆ ಚುನಾವಣೆ ಸರ್ಕಸ್ ಮಾಡ್ತಿದ್ದೀರಾ ನೇರವಾಗಿ ಅಧ್ಯಕ್ಷರನ್ನೇ ಘೋಷಣೆ ಮಾಡಿ ಕೈಬಿಟ್ಟುಬಿಡಿ. ಗೋವಿಂದ ಕಾರಜೋಳರನ್ನು ಹೊಡೆಯಲು ಮುಂದಾದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದೀರಾ ಯಾವ ದಿಕ್ಕಿನಲ್ಲಿ ಪಕ್ಷ ಹೋಗುತ್ತಿದೆ ಇವರ ಉದ್ದೇಶ ಪಕ್ಷ ಕಟ್ಟಬೇಕೋ ಅಂಥಾನೋ, ಕಂಪೆನಿ ಕಟ್ಟಬೇಕು ಅಂಥಾನೋ. ಅಣ್ಣ ಕೇಂದ್ರ ಮಂತ್ರಿಯಾಗಲಿ, ಅಪ್ಪ ಉಪರಾಷ್ಟ್ರಪತಿಯಾಗಲಿ. ಈ ರೀತಿ ಪಕ್ಷ ನಡೆಸಲು ಆಗುವುದಿಲ್ಲ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷ ಮಾಡುವುದಾದರೆ ಮಾಡಿಬಿಡಿ. ಚುನಾವಣಾ ಪ್ರಕ್ರಿಯೆಗಳು ಬೇಡ, ನಿಮಗೆ ಬೇಕಾದವರನ್ನು ಮತದಾರರನ್ನಾಗಿ ಮಾಡೋದಾದ್ರೆ ಮತದಾನ ಯಾಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇವರು ಚಡ್ಡಿ ಹಾಕೋಕ್ಕಿಂತ ಮುಂಚೆ ನಾನು ಜಿಲ್ಲಾಧ್ಯಕ್ಷ ಮತ್ತು ರಾಜ್ಯದ ಉಪಾಧ್ಯಕ್ಷನಾಗಿದ್ದೆ. ಯಡಿಯೂರಪ್ಪ ಒಬ್ಬರೇ ಪಕ್ಷ ಕಟ್ಟಿಲ್ಲ. ನಮ್ಮೆಲ್ಲರ ದುಡಿಮೆ ಇದೆ. ವಿಜಯೇಂದ್ರನಿಂದ ಏನೂ ಕಲಿಯಬೇಕಾಗಿಲ್ಲ. ಏನು ಮಾಡ್ತಾರೆ ಪಕ್ಷದಿಂದ ಹೊರಗಡೆ ಹಾಕ್ತೀರಾ ಅಪ್ಪನನ್ನು ಹೆದರಿಸಿರಬಹುದು. ಎಲ್ಲರನ್ನೂ ಹೆದರಿಸಲು ಆಗುವುದಿಲ್ಲ. ನಾವು ಸತ್ಯದ ಪರವಾಗಿ ನಿಲ್ಲುತ್ತೇವೆ ಎಂದರು.ಅರುಣ್ ಸಿಂಗ್ ಎಂಬ ರಾಜ್ಯ ಉಸ್ತುವಾರಿ ಇದ್ದರು.‌ ಅವರು ವಿಜಯೇಂದ್ರರನ್ನು ಹೊಗಳಿ ಹೊಗಳಿ ಸಾಕಷ್ಟು ಅನುಕೂಲ ಮಾಡಿಕೊಂಡು ಹೋದರು. ಪಕ್ಷ ಕಟ್ಟಲು ಎಲ್ಲರ ಸಲಹೆ ಬೇಕು. ಆದರೆ ನಿಮಗೆ ಬೇಕಾದ ನಾಲ್ವರ ಸಲಹೆಗಳಲ್ಲ. ಮಾಜಿ ಕೆಜೆಪಿಯಲ್ಲಿನ ನಿಷ್ಠರಿಗೆ ಮಾತ್ರ ಆದ್ಯತೆ. ಹೊಂದಾಣಿಕೆಯಿಂದ ಪಕ್ಷವನ್ನು ಬಲಿಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಧಾ ಮೋಹನ್ ಅಗರವಾಲ್ ವಿಜಯೇಂದ್ರ ಪರ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈಗ ನೋಡಿದರೆ ನಿಮಗೆ ಗೊತ್ತಾಗುತ್ತಿದೆ ಅಲ್ವಾ ಯಾರು ಪಕ್ಷಪಾತಿ. ಯಾರು ನಿಷ್ಪಕ್ಷಪಾತವಾಗಿದ್ದಾರೆ ಎಂಬುದು ಜನರ ಮನಸ್ಸಿನಲ್ಲಿದೆ. ನಾನು ಮಾತ್ರ ಬಹಿರಂಗವಾಗಿ ಮಾತನಾಡುತ್ತಿದ್ದೇನೆ ಅಷ್ಟೇ. ನಾವು ಮಾಡಿದ ಕೆಲಸ ವ್ಯರ್ಥವಾಗುವುದಿಲ್ಲ ಇನ್ನೂ ಮೂರು ತಿಂಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದರು.

ಸರ್ವಾಧಿಕಾರಿ ನಾಯಕನ ಅಂತ್ಯ ಬೇಗ ಆಗಲಿದೆ: ಎರಡು ಹಂತದಲ್ಲಿ ಸಭೆ ನಡೆಯಲಿದೆ. ತಟಸ್ಥ ಗುಂಪು ಪರಿವರ್ತನೆಯಾಗಿ ನಿಷ್ಠಾವಂತ ಗುಂಪಾಗುತ್ತಿದೆ. ಪಕ್ಷ ಉಳಿಸುವ ಗುಂಪು ದೊಡ್ಡದಾಗುತ್ತಿದೆ. ನಾಳೆ ಎಲ್ಲವೂ ಚರ್ಚೆ ಮಾಡುತ್ತೇವೆ. ಈ ಅಧ್ಯಕ್ಷತೆಯನ್ನು ನಾವು ಒಪ್ಪುವುದಿಲ್ಲ. ಅಧ್ಯಕ್ಷ ಸ್ಥಾನದ ಸ್ಪರ್ಧೆ ವಿಚಾರ ಚರ್ಚೆ ಮಾಡುತ್ತೇವೆ. ಇನ್ನೂ ಫೈನಲ್ ಮಾಡಿಲ್ಲ. ಬಹಳ ದಿವಸ ಅನ್ಯಾಯ, ಸರ್ವಾಧಿಕಾರಿ ಮನಸ್ಥಿತಿ ಯಾವ ನಾಯಕನಲ್ಲಿದೆಯೋ ಅವರ ಅಂತ್ಯ ಬೇಗ ಆಗುತ್ತದೆ. ಹಾಗೆಯೇ ಈಗ ಅಂತ್ಯದ ಕಾಲ ಬಂದಿದೆ ಎಂದು ಕಿಡಿಕಾರಿದರು.

ಒಟ್ಟಾಗಿ ಹೈಕಮಾಂಡ್ಗೆ ದೂರು: ತಟಸ್ಥ ಗುಂಪು ಸಹ ನಾಳೆ ಸಭೆಯಲ್ಲಿ ಭಾಗಿಯಾಗುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎರಡು ಹಂತದ ಸಭೆ ನಡೆಯಲಿದೆ. ಅವರ ಜೊತೆ ಮಾತುಕತೆ ಮಾಡಿದ್ದೇವೆ. ಎಲ್ಲಾ ಒಟ್ಟಾಗಿ ಹೈಕಮಾಂಡ್ಗೆ ದೂರು ಕೊಡುತ್ತೇವೆ. ನಾಳೆ ಸಭೆಯಲ್ಲಿ ಏನು ಚರ್ಚೆ ಮಾಡಬೇಕೋ ಮಾಡುತ್ತೇವೆ. ಈ ಅಧ್ಯಕ್ಷನನ್ನು ಅಂತೂ ಒಪ್ಪಲು ಸಾಧ್ಯವಿಲ್ಲ ಎಂದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";