ಪ್ರಕೃತಿ ಪೂಜಿಸುವ ಕೊಡವ ಸಂಸ್ಕೃತಿಯ ಪ್ರತಿಬಿಂಬ “ದಿ ಇಬ್ಬನಿ” ರೆಸಾರ್ಟ್

Kannada Nadu
ಪ್ರಕೃತಿ ಪೂಜಿಸುವ ಕೊಡವ ಸಂಸ್ಕೃತಿಯ ಪ್ರತಿಬಿಂಬ “ದಿ ಇಬ್ಬನಿ” ರೆಸಾರ್ಟ್

ನಂಜುಂಡಪ್ಪ.ವಿ

ಕೊಡಗು ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿದ್ದು, ವಿಪುಲ ನೈಸರ್ಗಿಕ ಸಂಪನ್ಮೂಲದ ನಿಧಿ. ಇತರೆ ಹಿಂದೂಗಳಂತೆ ಇಲ್ಲಿನವರು ವೈದಿಕ ಧರ್ಮವನ್ನಾಚರಿಸದೆ, ಪ್ರಕೃತಿ, ಪೂರ್ವಜರು, ಆಯುಧಗಳನ್ನು ಪೂಜಿಸುವವರು. 2011 ರ ಜನಗಣತಿಯಂತೆ 5.54 ಲಕ್ಷ ಪೈಕಿ ಕೊಡವರ ಸಂಖ್ಯೆ ಮೂರನೇ ಒಂದರಷ್ಟಿದೆ. ಆದರೆ ಇತ್ತೀಚೆಗೆ ಕೊಡವರ ಜನಸಂಖ್ಯೆ ಕ್ಷೀಣಿಸುತ್ತಿದೆ. ಇದು ಆತಂಕಕಾರಿ ಬೆಳವಣಿಗೆ.

ನಾನು 1993 ರಲ್ಲಿ ಪದವಿ ಓದುತ್ತಿದ್ದಾಗ ನಮ್ಮ ಬಾಲ್ಯದ ಗೆಳೆಯರಾದ ಹಾಲಿ ಪಂಚಾಯತ್ ಸದಸ್ಯ ನಟರಾಜ್, ಶಿವಸ್ವಾಮಿ, ಚಂದ್ರಶೇಖರ್, ರಮೇಶ್ ಬಾಬು ಮತ್ತಿತರೆ 8 ಮಂದಿ ಸದಸ್ಯರು ಸೈಕಲ್ ಮೂಲಕ ಕೊಡಗು ಭಾಗದಲ್ಲಿ ಏಡ್ಸ್ ನಿಯಂತ್ರಣ ಕುರಿತು ಬಾಗಲೂರಿನಿಂದ ಕೊಡಗಿಗೆ ಸೈಕಲ್ ಪ್ರವಾಸ ಕೈಗೊಂಡಿದ್ದು ಇನ್ನೂ ಹಚ್ಚ ಹಸಿರಾಗಿದೆ.

ನಂತರ 1997 ರಿಂದ 2003 ರ ವರೆಗೆ ಕೊಡಗಿನ ಕಾಫಿಲ್ಯಾಂಡ್ ನ್ಯೂಸ್ ಪತ್ರಿಕೆಗೆ ಬೆಂಗಳೂರಿನ ವಿಶೇಷ ಪ್ರತಿನಿಧಿಯಾಗಿ ಕೆಲಸ ಮಾಡಿದಾಗ ಕೊಡಗಿನ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಆಗ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಎನ್.ಯು. ನಾಚಪ್ಪ ಅವರು ತೀವ್ರ ಹೋರಾಟದಲ್ಲಿ ತೊಡಗಿದ್ದ ಕಾಲಘಟ್ಟ. ಆಗ ಸಚಿವರಾಗಿದ್ದ ಎಂ.ಸಿ. ನಾಣಯ್ಯ ಅವರನ್ನು ಹಿರಿಯ ಪತ್ರಕರ್ತ ಆರ್.ಟಿ. ವಿಠಲಮೂರ್ತಿ ಅವರೊಂದಿಗೆ ಭೇಟಿ ಮಾಡಿ ಸಾಕಷ್ಟು ಬಾರಿ ಈ ಕುರಿತು ಚರ್ಚೆ ನಡೆಸಿದ್ದವು. ಕೊಡಗಿಗೆ ಪ್ರತ್ಯೇಕ ರಾಜ್ಯ ಸ್ಥಾನ ಮಾನ ಸಾಧ್ಯವೇ ಇಲ್ಲ ಎಂಬ ವಿಚಾರವನ್ನು ಸಕಾರಣ ಸಮೇತವಾಗಿ ಹಲವಾರು ಬಾರಿ ವಿವರಿಸಿದ್ದರು ಎಂ.ಸಿ. ನಾಣಯ್ಯ. ಹೀಗೆ ಕೊಡಗಿನ ಬೆಳವಣಿಗೆಗಳ ಬಗ್ಗೆ ಬಹು ಹಿಂದಿನಿಂದಲೂ ನನಗೆ ಕುತೂಹಲ. ಇವತ್ತಿಗೂ ನಾನು ಮೈಸೂರಿನ ಪ್ರತಿನಿಧಿ ಪತ್ರಿಕೆಗೆ ಮೈಸೂರು, ಕೊಡಗು ಬೆಳವಣಿಗೆಗಳ ಕುರಿತು ವರದಿ ಮಾಡುತ್ತಲೇ ಇದ್ದೇನೆ. ಕೊಡಗು ಕಾಫಿ, ಮೆಣಸು, ಏಲಕ್ಕಿ ಮತ್ತಿತರೆ ಶ್ರೀಮಂತ ಬೆಳೆಗಳಿಂದ ರಾಜ್ಯದಲ್ಲೇ ಅತಿ ಶ್ರೀಮಂತ ಜಿಲ್ಲೆಯಾಗಿತ್ತು. ಯಾವುದೇ ಹೊಸ ಕಾರು, ಹೊಸ ಉತ್ಪನ್ನ ಮಾರುಕಟ್ಟೆಗೆ ಬಂದಾಗ ಖರೀದಿಸುತ್ತಿದ್ದವರು ಕೊಡಗಿನ ಜನ. 2005 ರ ನಂತರ ಬಳ್ಳಾರಿ ಶ್ರೀಮಂತ [ಹೊಸ ವಸ್ತುಗಳನ್ನು ಖರೀದಿಸುವಲ್ಲಿ] ಜಿಲ್ಲೆಯಾಯಿತು. ಗಣಿರೆಡ್ಡಿಗಳು, ಗಣಿ ಉದ್ಯಮಿಗಳು ಆಕಾಶಕ್ಕೆ ಏಣಿ ಇಟ್ಟ ಪರ್ವ ಕಾಲವದು. ಆದರೆ ಇದೀಗ ಕೊಡಗಿನ ಕಾಫಿಗೆ ಮತ್ತೆ ಮಾರುಕಟ್ಟೆ ಬಂದಿದೆ. ಇತ್ತೀಚೆಗೆ ಮಡಿಕೇರಿಗೆ ವಾರಾಂತ್ಯ ಕಳೆಯಲು ದಿ ಇಬ್ಬನಿ ರೆಸಾರ್ಟ್ ಗೆ ಭೇಟಿ ನೀಡಿದ್ದ ಸಮಯದಲ್ಲಿ ಮೂರು ದಶಕಗಳ ಬೆಳವಣಿಗೆಗಳು ಸ್ಮೃತಿ ಪಟಲದ ಮೂಲಕ ಹಾದು ಹೋದವು.

ಇರಲಿ. ದಿ ಇಬ್ಬನಿ ರೆಸಾರ್ಟ್ ವಿಚಾರಕ್ಕೆ ಬರುವುದಾದರೆ, ಇದು ಭೂ ಲೋಕದ ಹಚ್ಚ ಹಸಿರಿನ ರಮ್ಯ ಲೋಕ. ಸುಸ್ಥಿರ ಜೀವನಶೈಲಿಯ ಜೊತೆಗೆ ಆರೋಗ್ಯ, ಆಯುರ್ವೇದ, ಯೋಗ ಕ್ಷೇಮಕ್ಕೆ ಆದ್ಯತೆ ಇಲ್ಲಿನ ವಿಶೇಷತೆ. ಈ ನೈಸರ್ಗಿಕ ರೆಸಾರ್ಟ್ ನಲ್ಲಿ ಇತ್ತೀಚೆಗೆ ವಿಶಿಷ್ಟ ಆಯುರ್ವೇದ ಚಿಕಿತ್ಸಾ ಕೇಂದ್ರ “ಆರೋಗ್ಯಾ”ವನ್ನು ಪ್ರಾರಂಭಿಸಲಾಗಿದೆ. ಆಯುರ್ವೇದದ ಸಾಂಪ್ರದಾಯಿಕ ತತ್ವಗಳು ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಒಗ್ಗೂಡಿಸುವ ಮೂಲಕ, ಆರೋಗ್ಯಾ ದೇಹ, ಮನಸ್ಸು, ಹಾಗೂ ಆತ್ಮವನ್ನು ಪುನಶ್ಚೇತನಗೊಳಿಸುವ ಸಮಗ್ರ ಆರೋಗ್ಯ ಸಂಜೀವಿನಿಯನ್ನೇ ಇಲ್ಲಿ ಸಂಯೋಜಿಸಲಾಗಿದೆ. 125 ಎಕರೆ ನಿರ್ಸಗದ ತಾಣವಾಗಿರುವ ರೆಸಾರ್ಟ್ ನಲ್ಲಿ 15 ಎಕರೆ ಆಯುರ್ವೇದ ಚಿಕಿತ್ಸೆಗೆ ಮೀಸಲಿರಿಸಲಾಗಿದೆ. ಕೆರೆ, ನದಿ, ತೊರೆ, ಜಲಪಾತಗಳನ್ನು ಅತ್ಯಂತ ನೈಸರ್ಗಿಕವಾಗಿ ನಿರ್ಮಿಸಲಾಗಿದೆ. ಆಯುರ್ವೇದ ತಾಣದಲ್ಲೂ ಸಾತ್ವಿಕ ಆಹಾರ ಒದಗಿಸುವ ಪ್ರತ್ಯೇಕ ಅಡುಗೆ ಕೊಣೆ, ನೈಸರ್ಗಿಕ ಕೆರೆಯೊಂದರ ದಟ್ಟ ನೋಟ ಹೊಂದಿರುವ ಯೋಗಾ ವೇದಿಕೆ, ಆಯುರ್ವೇದ ಪರಿಣಿತರನ್ನೂ ಹೊಂದಿರುವ ಪ್ರದೇಶ ಇದಾಗಿದೆ.

ಆರೋಗ್ಯ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶೆರಿ ಸೆಬಾಸ್ಟಿಯನ್ ಮಾತನಾಡಿ, ನಾವು ಆಯುರ್ವೇದದ ತತ್ವಗಳನ್ನು ಪ್ರಕೃತಿಯ ಶಾಂತತೆಯೊಂದಿಗೆ ಸಮಗ್ರಗೊಳಿಸುವ ಮೂಲಕ, ಪ್ರತಿ ಅತಿಥಿಗೆ ಅವರ ದೋಷವನ್ನು ಸಮತೋಲನಗೊಳಿಸಲು, ಸುಧಾರಿಸಲು ಸಹಾಯ ಮಾಡುವ ವಿಶಿಷ್ಟ ಅನುಭವವನ್ನು ನೀಡಲು ಬದ್ಧರಾಗಿದ್ದೇವೆ. ಆಯುರ್ವೇದ ಔಷಧಿ ಗಿಡಗಳಿಂದ ತುಂಬಿದ ಪರಿಸರದಲ್ಲಿ, ಶುದ್ಧ ಗಾಳಿಯ ಸಾನ್ನಿಧ್ಯದಲ್ಲಿ ಸ್ವಾಭಾವಿಕವಾಗಿ ಗುಣ ಹೊಂದಲು ಇಲ್ಲಿ ವಿಫುಲ ಅವಕಾಶಗಳಿವೆ ಎನ್ನುತ್ತಾರೆ. ಆಯುರ್ವೇದ, ಯೋಗ, ಪ್ರಾಣಾಯಾಮ, ಹಾಗೂ ವಿವಿಧ ಚಿಕಿತ್ಸೆಗನ್ನೊಳಗೊಂಡ ಸಂಪೂರ್ಣ ಅನುಭವವನ್ನು “ಆರೋಗ್ಯಾ” ಒದಗಿಸುತ್ತಿದೆ. ಆಧುನಿಕ ಆರೋಗ್ಯ ಪುನಶ್ಚೇತನ ತಂತ್ರಗಳನ್ನು ಬಳಸಿ ಮನಸ್ಸು, ದೇಹ, ಹಾಗೂ ಆತ್ಮದ ಸಮತೋಲನವನ್ನು ಸುಧಾರಿಸಲು ಈ ಕೇಂದ್ರ ಸಹಾಯ ಮಾಡುತ್ತದೆ. ವಿವಿಧ ಮಸಾಜ್ ಥೆರಪಿಯೊಂದಿಗೆ ಕಲಾ ರಚನೆ, ಕುಂಬಾರಿಕೆ, ಆಹಾರ ಸಿದ್ಧಪಡಿಸುವ ಹಾಗೂ ತೋಟಗಾರಿಕೆ ಚಟುವಟಿಕೆಯಲ್ಲೂ ಅತಿಥಿಗಳನ್ನು ತೊಡಗಿಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ.

ಇಬ್ಬನಿ ಕೂರ್ಗ್ ನ ವ್ಯವಸ್ಥಾಪಕ ನಿರ್ದೇಶಕರಾದ ಮುದ್ದಪ್ಪ ಕುಪ್ಪಂಡ ಹೇಳುವಂತೆ,
“ನಮ್ಮಲ್ಲಿ ಆರೋಗ್ಯ ಅಂದರೆ ಕೇವಲ ವೈಯಕ್ತಿಕ ಆರೋಗ್ಯವಷ್ಟೇ ಅಲ್ಲ; ಇದು ಪ್ರಕೃತಿಯೊಂದಿಗೆ ಸಮತೋಲನ ಸಾಧಿಸುವ ಪ್ರಯತ್ನವಾಗಿದೆ. ಇದು ದೇಹ, ಮನಸ್ಸು ಮತ್ತು ಆತ್ಮದ ಪುನಶ್ಚೇತನಕ್ಕೆ ನೆರವಾಗುತ್ತದೆ ಎನ್ನುತ್ತಾರೆ. ಇಬ್ಬನಿ ಕೂರ್ಗ್ “ಪರಿಸರ ಸ್ನೇಹಿ ಪ್ರವಾಸ” ಕಲ್ಪನೆಯನ್ನು ದಿಟ್ಟವಾಗಿ ಅನುಸರಿಸುತ್ತಿದೆ ಎನ್ನುತ್ತಾರೆ.

ಬೆಳಿಗ್ಗಿನ ತಂಪಾದ ವಾತಾವರಣದಲ್ಲಿ ನಡೆಯುವ ನೇಚರ್ ವಾಕ್ ನಲ್ಲಿ ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದು. ರೆಸಾರ್ಟ್ ಒಳಗೆ ಡೀಸಲ್, ಪೆಟ್ರೋಲ್ ವಾಹನಗಳಿಗೆ ಪ್ರವೇಶವಿಲ್ಲ. ವಿದ್ಯುತ್ ಚಾಲಿತ ವಾಹನಗಳಿವೆ. ಶಬ್ದ ಮಾಲಿನ್ಯವಿಲ್ಲ. ಬಳಕೆ, ಮರು ಬಳಕೆ, ಸಂಸ್ಕರಣೆಯಂತಹ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇಲ್ಲಿ ಒಂದೇ ಒಂದು ಕೊಳವೆ ಬಾವಿಯಿಲ್ಲ. ಮಳೆ ನೀರು ಕೊಯ್ಲು ಮೂಲಕ ವರ್ಷ ಪೂರ್ತಿ ನೀರನ್ನು ಬಳಕೆ ಮಾಡಲಾಗುತ್ತದೆ. ಇಬ್ಬನಿ ರೆಸಾರ್ಟ್ ನಲ್ಲಿ ಮದುವೆಯಾಗುವುದೇ ಒಂದು ಸುಯೋಗ. ಪ್ರಕೃತಿಯ ಮಡಿಲಲ್ಲಿ ವಿವಾಹವಾಗಲು ಬಯಸುವವರಿಗೆ ಇಲ್ಲಿ ಸೂಕ್ತ ವ್ಯವಸ್ಥೆ ಇದೆ.

“ಕಲಾಡಿ ಕಾಫೀ” ವೇದಿಕೆಯಲ್ಲಿ ಕಾಫಿಯ ವಿವಿಧ ಬಗೆಯ ಸ್ವಾದವನ್ನು ಹೀರಲು ಅವಕಾಶವಿದೆ. ಕರೆ ಅಂಗಳದಲ್ಲಿ ಹರಟೆ ಹೊಡೆಯುವ ಜಗಲಿಯೂ ಇದಾಗಿದೆ. “ಪರಿಸರ” ಪ್ರವಾಸೋದ್ಯಮದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಈ ತಾಣ ನಗುತಿರುವ ಕೆರೆಗಳು, ಹಸಿರಿನ ಮರಗಳು, ಹಕ್ಕಿಗಳ ಚಿಲಿಪಿಲಿ, ಹುಲ್ಲಿನ ಮೇಲಿನ ಮಂಜು, ಹಾಗೂ ಅರಣ್ಯದ ಒಡಲಿನಲ್ಲಿ ಶಾಂತಿಯುತ ಅನುಭವವನ್ನು ಒದಗಿಸುತ್ತದೆ. ಇದು ಕೊಡವರಂತೆ ಪ್ರಕೃತಿಯನ್ನು ಆರಾಧಿಸುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದೆ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";