ಬೆಂಗಳೂರು : ರಾಜ್ಯ ಕಾಂಗ್ರೆಸ್‍ನ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಪರಿಹಾರದ ಚೆಂಡು ಹೈಕಮಾಂಡ್ ಅಂಗಳ ತಲುಪಿರುವಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಬೆಂಗಳೂರಿನಿಂದ ದೆಹಲಿಗೆ ಪಯಣಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ವಿಮಾನ ನಿಲ್ದಾಣದವರೆಗೂ ಖರ್ಗೆ ಅವರ ಜತೆ ಪಯಣಿಸಿದ್ದು ನಾನಾ ಚರ್ಚೆಗೆ ಗ್ರಾಸವಾಗಿದೆ.ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಚಿವರು, ಶಾಸಕರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲರ ಜತೆ ಅಧಿಕಾರ ಹಂಚಿಕೆಯ ಜಟಾಪಟಿ ಬಗ್ಗೆ ಅಹವಾಲುಗಳನ್ನು ಆಲಿಸಿದ್ದ ಎಐಸಿಸಿಸ ಅಧ್ಯಕ್ಷ ಖರ್ಗೆ ಅವರು ಎಲ್ಲವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿ ತಾರಕಕ್ಕೇರಿದ್ದ ಅಧಿಕಾರ ಹಂಚಿಕೆಯ ಜಟಾಪಟಿಯ ತೀವ್ರತೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದರು.
ಕಾಂಗ್ರೆಸ್ ವರಿಷ್ಠ ರಾಹುಲ್‍ಗಾಂಧಿ ಅವರಿಗೆ ರಾಜ್ಯ ರಾಜಕೀಯ ವಿದ್ಯಮಾನಗಳನ್ನು ವಿವರಿಸಲು ಇಂದು ಬೆಳಗ್ಗೆ ದೆಹಲಿಗೆ ಪಯಣಿಸಿದ್ದು ಖರ್ಗೆ ಅವರು ಇಂದು ಇಲ್ಲವೆ ನಾಳೆ ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಿ ಎಲ್ಲವನ್ನು ಅವರ ಗಮನಕ್ಕೆ ತರುವರು.
ಸದಾಶಿವನಗರದ ಖರ್ಗೆ ಅವರ ನಿವಾಸಕ್ಕೆ ಇಂದು ಬೆಳಗ್ಗೆ ಬಂದಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿ ವಕುಮಾರ್ ವಿಮಾನ ನಿಲ್ದಾಣದವರೆಗೂ ಖರ್ಗೆ ಅವರ ಕಾರಿನಲ್ಲೇ ಪಯಣಿಸಿ ಅವರ ಜತೆ ಸುದೀರ್ಘ ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.
ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಕಳೆದ ಭಾನುವಾರ ರಾತ್ರಿ ದೆಹಲಿಯಿಂದ ಬಂದ ತಕ್ಷಣವೇ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ನಂತರ ಅವರು ಖರ್ಗೆ ಅವರನ್ನು ಭೇಟಿ ಮಾಡಿರಲಿಲ್ಲ ಇಂದು ಬೆಳಗ್ಗೆ ಮತ್ತೆ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದ ಡಿ.ಕೆ.ಶಿವಕುಮಾರ್, ವಿಮಾನ ನಿಲ್ದಾಣದವರೆಗ ಅವರ ಜತೆ ಕಾರಿನಲ್ಲೇ ತೆರಳಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಮಾನ ನಿಲ್ದಾಣದಲ್ಲಿ ಖರ್ಗೆ ಅವರನ್ನು ದೆಹಲಿಗೆ ಬೀಳ್ಕೊಟ್ಟ ನಂತರ ಶಿವಕುಮಾರ್ ತಮ್ಮ ನಿವಾಸಕ್ಕೆ ವಾಪಸ್ಸಾದರು.
ಅಧಿಕಾರ ಹಂಚಿಕೆಯ ಬಿಕ್ಕಟ್ಟು, ಚೆಂಡು ಹೈಕಮಾಂಡ್ ಅಂಗಳಕ್ಕೆ



