ಬೆಳಗಾವಿ,ಡಿ.೨೪: ಸಿಎಂ, ಸ್ಪೀಕರ್,ಉಪಾಧ್ಯಕ್ಷರು ಎಲ್ಲರೂ ಉತ್ತರ ಕರ್ನಾಟಕ ಭಾಗದವರೇ ಆದರೂ ಆ ಜಿಲ್ಲೆಗಳ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಲಿಲ್ಲ. ಚರ್ಚೆಗೆ ಅವಕಾಶ ಕೊಡ್ತೇವೆ ಎಂದು ಹೇಳಿ ಕೊಟ್ಟಿಲ್ಲ. ನಿನ್ನೆಯೂ ಕೇಳಿದರೂ ಸಹ ಅವಕಾಶ ನೀಡಲಿಲ್ಲ. ಇಂದು ವಿಧಾನಸಭೆ ಪ್ರವೇಶ ಮಾಡಿದ ತಕ್ಷಣ ಸ್ಪೀಕರ್ಗೆ ಜೊತೆ ಕೇಳುತ್ತೇನೆ ಎಂದು ಎ.ಎಸ್ ನಡಹಳ್ಳಿ ತಿಳಿಸಿದರು. ಕಳೆದ ಹತ್ತು ದಿನಗಳಿಂದ ಉತ್ತರ ಕರ್ನಾಟಕ ಜನರಿಗೆ ನ್ಯಾಯ ದೊರಕಿಸುವ ಉದ್ದೇಶದಿಂದ ಅಧಿವೇಶನ ನಡೆದಿದೆ. ಆದರೆ ಹತ್ತು ದಿನಗಳಿಂದ ಚರ್ಚೆ ಮಾಡಲು ಅವಕಾಶ ಕೊಟ್ಟಿಲ್ಲ. ಇದು ಅತ್ಯಂತ ನೋವಿನ ಸಂಗತಿ.

ಉತ್ತರ ಕರ್ನಾಟಕದ ಜನರು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದೇವೆ. ಸುವರ್ಣ ಸೌಧ ಕಟ್ಟಿರೋದೆ ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆ ಮಾಡಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ರಾಜಕೀಯವಾಗಿ ಚರ್ಚೆ ಮಾಡೋದಾದರೆ ಯಾಕೆ ಇಲ್ಲಿ ಅಧಿವೇಶನ ನಡೆಸಬೇಕು? ಎಂದು ಪ್ರಶ್ನಿಸಿದರು. ನೀರಾವರಿ ಸಮಸ್ಯೆ, ಬಡತನ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಹಿಂದುಳಿದ ಜಿಲ್ಲೆಗಳು ಉತ್ತರ ಕರ್ನಾಟಕದಲ್ಲಿವೆ. ಈ ವ್ಯವಸ್ಥೆಯಿಂದ ನೋವಾಗಿದೆ. ನಾನು ಯಾವುದೇ ಪಕ್ಷದ ಪರವಾಗಿ ಅಥವಾ ವಿರೋಧವಾಗಿ ಮಾತಾಡುತ್ತಿಲ್ಲ. ಅವಕಾಶ ನೀಡದೆ ಇದ್ದರೆ ಸದನದ ಭಾವಿಗಿಳಿದು ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಕೆಯನ್ನ ನೀಡಿದರು. ಇದೇ ವಿಷಯದ ಬಗ್ಗೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ೩ ದಿನಗಳ ಕಾಲ ಬೇರೆ ಚರ್ಚೆಗಳಾಗಿವೆ. ಬೇಡದ ವಿಷಯಗಳ ಚರ್ಚೆಗೆ ಕಾಲಹರಣವಾಗಿದೆ. ಕಾಂಗ್ರೆಸ್ನವರು ಧರಣಿ ಪ್ರೊಟೆಸ್ಟ್ ಮಾಡಿ ಕಾಲ ಕಳೆದ್ರು. ನಮಗೂ ನೋವಿದೆ ಹೆಚ್ಚಿನ ಚರ್ಚೆಯಾಗಬೇಕಿತ್ತು. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚಿನ ರೀತಿಯಲ್ಲಿ ಚರ್ಚೆಗಳು ಆಗಬೇಕಾಗಿತ್ತು. ಆದರೆ ಕಾಲಹರಣ ಮಾಡಿದ್ದು ಸರಿಯಲ್ಲ. ಇನ್ನು ಮುಂದೆಯಾದರೂ ಸರಿಪಡಿಸಿಕೊಳ್ಳೋಣ ಎಂದು ತಿಳಿಸಿದರು.