ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಕಳೆದವಾರ ಸಂಭವಿಸಿದ ಸಾವಿರಾರು ಕೋಳಿಗಳ ಸಾವಿನ ಪ್ರಕರಣದ ಪರೀಕ್ಷಾ ವರದಿಯು ಬಂದಿದ್ದು, `ಹಕ್ಕಿಜ್ವರ’ದಿಂದಲೇ (ಬರ್ಡ್ ಫ್ಲೂ) ಕೋಳಿಗಳ ಮಾರಣಹೋಮ ನಡೆದಿದೆ ಎಂಬುದು ದೃಢಪಟ್ಟಿದೆ.
`ಕಪ್ಪಗಲ್ಲು’ ಗ್ರಾಮದ ಬಳಿಯಲ್ಲಿ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ್ದ `ಕೋಳಿ ಫಾರಂ’ನಲ್ಲಿ ಕಳೆದ ವಾರ 8 ಸಾವಿರಕ್ಕೂ ಅಧಿಕ ಕೋಳಿಗಳು ಧಿಡೀರನೇ ಸಾವನ್ನಪ್ಪಿದ್ದವು. ಈ ಬಗ್ಗೆ ಪಶುಸಂಗೋಪನಾ ಅಧಿಕಾರಿಗಳು, ಮೃತ ಕೋಳಿಗಳ ಮಾದರಿಗಳನ್ನು ಬೆಂಗಳೂರಿಗೆ ಹಾಗೂ ಮಧ್ಯಪ್ರದೇಶದ `ಭೂಪಾಲ್’ ನಗರದಲ್ಲಿನ ಹೈಸೆಕ್ಯೂರಿಟಿ ಅನಿಮಲ್ ಡಿಸೀಸೆಸ್ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.
ಇದೀಗ ಲ್ಯಾಬ್ ರಿಪೋರ್ಟ್ ಬಂದಿದ್ದು, ಈ ಕೋಳಿಗಳು `ಹಕ್ಕಿಜ್ವರ’ದಿಂದಾಗಿಯೇ ಸಾವನ್ನಪ್ಪಿವೆ ಎಂಬುದು ಖಚಿತಪಟ್ಟಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಕಪ್ಪಗಲ್ಲು ಕೋಳಿಫಾರಂನಲ್ಲಿ ಮೊದಲಿಗೆ ಎಂಟು ಸಾವಿರ ಕೋಳಿಗಳು ಮೃತಪಟ್ಟಿದ್ದರೆ, ಆನಂತರ ಇನ್ನುಳಿದ ಆರೇಳು ಸಾವಿರ ಕೋಳಿಗಳು ಮೃತಪಟ್ಟಿದ್ದವು. ಅಂದಾಜು 14 ರಿಂದ 15 ಸಾವಿರ ಕೋಳಿಗಳ ಸಾವು `ಹಕ್ಕಿಜ್ವರ’ದಿಂದಾಗಿಯೇ ಸಂಭವಿಸಿದೆ ಎನ್ನುವುದಾಗಿ ವರದಿಗಳು ತಿಳಿಸಿದ್ದು, ಕೋಳಿಫಾರಂ ಮಾಲೀಕರು ಸೇರಿದಂತೆ, ಕೋಳಿಮಾಂಸ, ಮೊಟ್ಟೆ ವ್ಯಾಪಾರಿಗಳು, ಕುಕ್ಕುಟೋದ್ಯಮ ವಲಯದವರು ಇದರಿಂದ ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಹೈ-ಅಲರ್ಟ್: ಕಪ್ಪಗಲ್ಲು ಬಳಿಯ ಕೋಳಿ ಫಾರಂನಲ್ಲಿ `ಹಕ್ಕಿಜ್ವರ’ದಿಂದಾಗಿಯೇ 14 ಸಾವಿರಕ್ಕೂ ಹೆಚ್ಚಿನ ಕೋಳಿಗಳ ಮಾರಣಹೋಮ ನಡೆದಿರುವುದು ಖಚಿತಪಟ್ಟಿರುವುದರಿಂದ, ಪಶುಸಂಗೋಪನಾ ಇಲಾಖೆಯವರು ತೀವ್ರ ಕಟ್ಟೆಚ್ಚರ, `ಹೈ-ಅಲರ್ಟ್’ ಘೋಷಿಸಿದ್ದಾರೆ. ಈ `ಪೌಲ್ಟಿç ಫಾರಂ’ ಸುತ್ತಮುತ್ತಲಿನ 10 ಕಿ.ಮೀ. ಪ್ರದೇಶದಲ್ಲಿ ತೀವ್ರ ನಿಗಾವಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.