ದೇವನಹಳ್ಳಿ: ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ಆದರೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಕ್ರಮ ವಹಿಸಿಲ್ಲ. ಸುದ್ದಿವಾಹಿನಿಗಳು ಈ ವಿಚಾರವನ್ನು ಬಿಡಿ ಬಿಡಿಯಾಗಿ ವಿವರಿಸಿದರೂ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ತಹಸೀಲ್ದಾರ್, ಡೀಸಿ ಪರಿಸ್ಥಿತಿ ಬಗ್ಗೆ ಅವಲೋಕಿಸಿಲ್ಲ. ಪೊಲೀಸರು ಎಫ್ ಐ ಆರ್ ಹಾಕಲು, ತಪ್ಪಿತಸ್ಥರನ್ನು ಬಂಧಿಸಲು ಬಹಳ ತಡ ಮಾಡಿದ್ದಾರೆ. ತಪ್ಪಿತಸ್ಥರ ಕಡೆಯಿಂದ ಕೌಂಟರ್ ಕೇಸ್ ಪಡೆದಿದ್ದಾರೆ. ನೊಂದವರಿಗೆ, ಅನ್ಯಾಯ ಆದವರಿಗೆ ನ್ಯಾಯ ಕೊಡಿಸಬೇಕಾದ್ದು ಸಂವಿಧಾನದ ಆಶಯ ಎಂದು ಬಿ.ಎಸ್.ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಶಿವಗಣೇಶ ವೃತ್ತದಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಕಳೆದ ತಿಂಗಳು ದಲಿತ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ ಹಲ್ಲೆಕೋರರನ್ನು ಕೂಡಲೇ ಗಡಿಪಾರು ಮಾಡಬೇಕು ಮತ್ತು ವಿಜಯಪುರ ಠಾಣಾ ಪಿ.ಎಸ್.ಐ ನಂದೀಶ್ ರವರನ್ನು ಅಮಾನತ್ತು ಮಾಡಬೇಕೆಂದು ಪ್ರತಿಭಟಿಸಿ ಮಾತನಾಡಿ, ಪ್ರಜ್ಞಾವಂತರಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿ ಇರುವ ಇಂತಹ ಪ್ರದೇಶದಲ್ಲಿ ಎಂಎಲ್ ಎ ಸ್ಥಾನದ ಅರಿವಿರದವರು ಶಾಸಕ ಸ್ಥಾನದಲ್ಲಿ ಇದ್ದಾರೆ. ಪರಿಸ್ಥಿತಿ ಯನ್ನು ನಿಭಾಯಿಸದ, ತನ್ನ ಕ್ಷೇತ್ರದ ಅಧಿಕಾರಿಗಳು ಮಾಡುತ್ತಿರುವ ಕೆಲಸದ ಬಗ್ಗೆ ತಿಳುವಳಿಕೆ ಇರದ ವ್ಯಕ್ತಿ ಯಾರಿಗೆ ನ್ಯಾಯ ಒದಗಿಸಲು ಸಾಧ್ಯ? ದಲಿತ ಹುಡುಗನ ಮೇಲಾದ ದೌರ್ಜನ್ಯದ ಬಗ್ಗೆ ವಿಚಾರಿಸಲು ಶಾಸಕರಿಗೆ ಸಮಯವಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷ ವಾದರೂ ಸಹ ದಲಿತರ ಮೇಲಿನ ಶೋಷಣೆ ನಿಂತಿಲ್ಲ ಎಂದು ತಿಳಿಸಿದರು
ಬಹುಜನ ಸಮಾಜ ಪಾರ್ಟಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆರ್. ಮುನಿಯಪ್ಪ ಮಾತನಾಡಿ, ದಲಿತ ವಿದ್ಯಾರ್ಥಿ ಮೇಲೆ ಆದ ದೌರ್ಜನ್ಯ ಉದ್ದೇಶ ಪೂರಿತವಾಗಿದೆ. ಮನುಷ್ಯ ಎಂದು ಲೆಕ್ಕಿಸದೆ ದರ ದರನೆ ಎಳೆದುಕೊಂಡು ಹೋಗಿ ಆತನ ಮೇಲೆ ಮಾಡಿರುವ ಹಲ್ಲೆ ನಿಜಕ್ಕೂ ಅಮಾನವೀಯ. ದೇವಸ್ಥಾನಕ್ಕೆ ಭಕ್ತಿ ಇಂದ ಹೋಗಿದ್ದ ವಿದ್ಯಾರ್ಥಿಗೆ ಫೋನಿನಲ್ಲಿ ಮಾತಾನಾಡುವ ವಿಚಾರಕ್ಕೆ ನಿಂದಿಸಿದ್ದೂ ಅಲ್ಲದೆ ಅಂತಹ ಪವಿತ್ರ ಸ್ಥಳದಲ್ಲಿ ಏಳು ಜನ ಸೇರಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪೊಲೀಸರು ಮುಖ್ಯ ಆರೋಪಿ ಪ್ರಕಾಶ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಮಾತ್ರ ಬಂಧಿಸಿದ್ದು, ಜಾತಿ ನಿಂದನೆ ಮಾಡಿ ಹುಡುಗನಿಗೆ ಮತ್ತಷ್ಟು ಕಿರುಕುಳ ನೀಡಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮೀಟರ್ ಬಡ್ಡಿ ಮಾಡುವ ಪ್ರಕಾಶ್ 50 ಲಕ್ಷ ಹಣದ ಆಮಿಷ ತೋರಿ ಕೇಸ್ ಹಿಂಪಡೆಯಲು ಹೇಳಿದ್ದು, ಅವರ ಇನ್ನಷ್ಟು ನೀಚತನವನ್ನು ತೋರಿದಂತೆ. ಹುಡುಗ ಮಾನಸಿಕ ಹಾಗೂ ದೈಹಿಕವಾಗಿ ನೊಂದಿದ್ದು, ನಮ್ಮೆಲ್ಲರ ಆಶ್ವಾಸನೆ, ಬೆಂಬಲದಿಂದ ಈಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದರು.
ಹಕ್ಕೊತ್ತಾಯದ ಮನವಿ ಪತ್ರವನ್ನು ತಾಲ್ಲೂಕು ದಂಡಾಧಿಕಾರಿಗಳಿಗೆ ನೀಡಿದರು. ಮನವಿ ಪತ್ರ ಸ್ವೀಕರಿಸಿದ ತಾಲ್ಲೂಕು ದಂಡಾಧಿಕಾರಿ ಅನಿಲ್ ಕುಮಾರ್ ಮಾತನಾಡಿ ಯಥಾವತ್ತಾಗಿ ನೀಡಿರುವ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖೇನ ಮುಖ್ಯಮಂತ್ರಿಗಳಿಗೆ ತಲುಪಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಂಗಾರಪ್ಪ, ಮಹಿಳಾ ಅಧ್ಯಕ್ಷೆ ಜಯಲಕ್ಷ್ಮಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಇದ್ದರು.