ದಾವಣಗೆರೆ; 2014 ರ ನಂತರ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಕ್ರಾಂತಿಕಾರಕ ಬದಲಾವಣೆಗಳು ಆಗಿದ್ದು,ಠೇವಣಿದಾರರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ವಿದ್ಯುನ್ಮಾನ , ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ದಾವಣಗೆರೆಯಲ್ಲಿಂದು ಹಮ್ಮಿಕೊಂಡಿದ್ದ 5 ಲಕ್ಷ ರೂಪಾಯಿವರೆಗೂ ಖಾತರಿಪಡಿಸಿದ ಠೇವಣಿ ವಿಮೆ ಪಾವತಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನರೇಂದ್ರ ಮೋದಿಯವರು ಪ್ರಧಾನಿಗಳಾದ ನಂತರ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆರ್ ಬಿ ಐ ಸೇರಿದಂತೆ ಎಲ್ಲ ಬ್ಯಾಂಕುಗಳಲ್ಲಿ ಸ್ಥಿರತೆ ಕಂಡು ಬಂದಿದ್ದು, ಆರ್ಥಿಕವಾಗಿ ಸಬಲತೆ ಹೊಂದಿವೆ. ಇದು ಉತ್ತಮ ಬೆಳವಣಿಗೆ ಯಾಗಿದೆ ಎಂದರು. ನಂತರ ಸಚಿವರು ಗ್ರಾಹಕರೊಂದಿಗೆ ಸಂವಾದ ನಡೆಸಿದರು.ಸಂಸದ ಜಿ.ಎಂ.ಸಿದ್ದೇಶ್ವರ್ ಇತರರು ಹಾಜರಿದ್ದರು.