ಬೆಂಗಳೂರು; ಭಾರತದ ಮೊಬೈಲ್ ಚಿಲ್ಲರೆ ಮಾರಾಟ ವಲಯದಲ್ಲಿ ಸ್ಯಾಮ್ ಸಂಗ್ ಸಂಸ್ಥೆ ವ್ಯಾಪಾರ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದು, ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಮೊಬೈಲ್ ರೀಟೈಲರ್ಸ್ ಅಸೋಸಿಯೇಷನ್ ನಗರದ ಸ್ಯಾಮ್ ಸಂಗ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇದೇ ರೀತಿ ತಾರತಮ್ಯ ಧೋರಣೆ ಅನುಸರಿಸಿದರೆ ಸ್ಯಾಮ್ ಸಂಗ್ ಮೊಬೈಲ್ ಮಾರಾಟವನ್ನೇ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸ್ಯಾಮ್ ಸಂಗ್ ಸಂಸ್ಥೆ ವಿರುದ್ಧ ಪಾಣಿಪತ್, ಹರಿಯಾಣ, ಚಂಡೀಗಢ ಗುಜರಾತ್, ದೆಹಲಿ, ನೋಯ್ಡಾ ಗಾಜಿಯಾಬಾದ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಸ್ಯಾಮ್ಸಂಗ್ ನ ವಿರುದ್ಧದ ನೋವಿನ ಕೂಗು ಕೇಳಿಬರುತ್ತಿದ್ದು, ಚಿಲ್ಲರೆ ವ್ಯಾಪಾರಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲೂ ಪ್ರತಿಭಟನೆ ತೀವ್ರಗೊಂಡಿದೆ.
ಸ್ಯಾಮ್ಸಂಗ್ ಸಂಸ್ಥೆ ಚಿಲ್ಲರೆ ವ್ಯಾಪಾರ ವಲಯದಲ್ಲಿ ಏಕಸ್ವಾಮ್ಯತೆ ಸಾಧಿಸಲು ಭಾರತೀಯ ವ್ಯಾಪಾರ ನೀತಿ ನಿಯಮಗಳನ್ನು ಉಲ್ಲಂಘಿಸಿರುವುದನ್ನು ಭಾರತೀಯ ಸ್ಪರ್ಧಾತ್ಮಕ ಆಯೋಗ ಸಿಸಿಐ ಗುರುತಿಸಿದೆ. ಕೇಂದ್ರ ಸರ್ಕಾರ ಈ ಕೂಡಲೇ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಮೊಬೈಲ್ ರೀಟೈಲರ್ಸ್ ಅಸೋಸಿಯೇಷನ್ ವಲಯ ಉಪಾಧ್ಯಕ್ಷ ಜಿ. ನಾಗರಾಜ ನಾಯ್ಡು, ರಾಜ್ಯಾಧ್ಯಕ್ಷ ರವಿ ಕುಮಾರ್ ಹಾಗೂ ಕಾರ್ಯದರ್ಶಿ ಸುಹಾಸ್ ಕಿಣಿ ಹೇಳಿದರು.ಈ ಹಿಂದೆ ಸ್ಯಾಮ್ ಸಂಗ್ ಚಿಲ್ಲರೆ ಮಾರಾಟ ಪಾಲು ಶೇ 85 ರಷ್ಟಿದ್ದು, ಇದೀಗ ಶೇ 15 ಕ್ಕೆ ಇಳಿಕೆಯಾಗಿದೆ. ಇದು ಬರುವ ದಿನಗಳಲ್ಲಿ ಶೂನ್ಯಕ್ಕೆ ಇಳಿಯುವುದರಲ್ಲಿ ಅನುಮಾನವಿಲ್ಲ. ಹಿಂದೆ ಅಂಗಡಿಗಳಲ್ಲಿ ನಾಲ್ಕು ಐದು ಕಪಾಟುಗಳಲ್ಲಿ ಸ್ಯಾಮ್ ಸಂಗ್ ಮೊಬೈಲ್ ಗಳಿದ್ದವು. ಇದೀಗ ಅಂಗಡಿಗಳಲ್ಲಿ ಏಳೆಂಟು ಮೊಬೈಲ್ ನೋಡುವುದು ಕಷ್ಟವಾಗಿದೆ. ಇಂತಹ ಧೋರಣೆಯಿಂದಾಗಿ ಚಿಲ್ಲರೆ ವ್ಯಾಪಾರ ವಲಯ ನಶಿಸುತ್ತಿದೆ ಎಂದರು.
ಹೊಸ ಮತ್ತು ಬೇಡಿಕೆಯ ಮೊಬೈಲ್ ಗಳನ್ನು ಆನ್ ಲೈನ್ ಮಾರುಕಟ್ಟೆಗೆ ಒದಗಿಸುತ್ತಿದ್ದು, ಚಿಲ್ಲರೆ ವ್ಯಾಪಾರಿಗಳನ್ನು ನಿರ್ಲಕ್ಷಿಸುತ್ತಿದೆ. ಮೊಬೈಲ್ ನ ಎಲ್ಲಾ ವೈಶಿಷ್ಟ್ಯಗಳನ್ನು ವಿವರಿಸುವುದು ನಾವು, ಆದರೆ ದರ ತಾರತಮ್ಯದಿಂದಾಗಿ ಗ್ರಾಹಕರು ಆನ್ ಲೈನ್ ನತ್ತ ಹೊರಳುತ್ತಿದ್ದಾರೆ. ಮೊಬೈಲ್ ಮಾರುಕಟ್ಟೆಯಲ್ಲಿ ಮೂರು ತಿಂಗಳ ಹಿಂದೆ ಮೊದಲ ಸ್ಥಾನದಲ್ಲಿದ್ದ ಸ್ಯಾಮ್ ಸಂಗ್ ಶೇ 58 ರಷ್ಟು ಪಾಲು ಹೊಂದಿತ್ತು. ಇದೀಗ ಮೂರನೇ ಸ್ಥಾನಕ್ಕೆ ಬಂದಿದೆ. ರಾತ್ರೋ ರಾತ್ರಿ ದರಗಳಲ್ಲಿ ಇಳಿಕೆ ಮಾಡುವುದರಿಂದ ಗ್ರಾಹಕರು ಚಿಲ್ಲರೆ ಮಾರಾಗಾರರನ್ನು ಅನುಮಾನದಿಂದ ನೋಡುವಂತಾಗಿದೆ. ಇದೇ ಧೋರಣೆ ಅನುಸರಿಸಿದರೆ ಬರುವ ದಿನಗಳಲ್ಲಿ ಸ್ಯಾಮ್ ಸಂಗ್ ಮಾರಾಟ ಬಂದ್ ಮಾಡುತ್ತೇವೆ. ನೋಕಿಯಾ ಮಾದರಿಯಲ್ಲಿ ಸಂಸ್ಥೆ ಅವನತಿ ಹಾದಿ ಹಿಡಿಯುತ್ತದೆ ಎಂದು ಎಚ್ಚರಿಕೆ ನೀಡಿದರು.